
ಗಾಯದ ಮೇಲೆ ಮತ್ತೊಂದು ಬರೆ; ಮೆಟ್ರೋ ಬಳಿಕ ಹೆದ್ದಾರಿ ಟೋಲ್ ದರ ಏರಿಕೆ !
ಏ.1ರಿಂದ ರಾಜ್ಯದಲ್ಲಿನ 66ಕ್ಕೂ ಹೆಚ್ಚಿನ ಟೋಲ್ಗಳಲ್ಲಿ ವಸೂಲಾತಿ ದರ ಏರಿಕೆಯಾಗಲಿದೆ. ನಮ್ಮ ಮೆಟ್ರೋ ಬಳಿಕ ಈಗ ಹೆದ್ದಾರಿ ಪ್ರಯಾಣ ದರ ಜಿಗಿತಗೊಳ್ಳಲಿದೆ.
“ನಮ್ಮ ಮೆಟ್ರೋ” ಪ್ರಯಾಣ ದರ ಏರಿಕೆ ಬೆನ್ನಲೆ ಹೆದ್ದಾರಿಗಳ ಟೋಲ್ ದರವು ಶೀಘ್ರದಲೇ ಏರಿಕೆಯಾಗಲಿದೆ. ಹೀಗಾಗಿ, ಸಾರ್ವಜನಿಕರು ರಸ್ತೆಗಿಳಿಯುವುದಕ್ಕೂ ಮುನ್ನ ತಮ್ಮ ಜೇಬು ಪರಿಶೀಲಿಸಿಕೊಳ್ಳುವುದು ಉತ್ತಮ.
ಕಳೆದ ವರ್ಷ ನಮ್ಮ ಮೆಟ್ರೋ ದರವರನ್ನು ಶೇ.70ರಷ್ಟು ಏರಿಕೆ ಮಾಡಲಾಗಿತ್ತು. ಈ ವರ್ಷ ಶೇ.5ರಷ್ಟು ಏರಿಕೆ ಮಾಡಲಾಗಿದೆ. ಪ್ರತಿ ವರ್ಷದಂತೆ ಏ.1 ರಿಂದ ರಾಜ್ಯದಲ್ಲಿನ ಎಲ್ಲ ಹೆದ್ದಾರಿಗಳ "ಟೋಲ್ ಸಂಗ್ರಹ ದರ" ಏರಿಕೆಯಾಗಲಿದೆ. ಶೇ.5ರಿಂದ ಶೇ.6ರಷ್ಟು ಟೋಲ್ ವಸೂಲಿ ದರ ಏರಿಕೆಯಾಗುವ ಸಾಧ್ಯತೆಗಳಿವೆ.
ಟೋಲ್ ದರ ಏರಿಕೆ ಬಳಿಕ ಸಾಮಾನ್ಯವಾಗಿ ಬಸ್ಗಳ ಪ್ರಯಾಣ ದರ, ಸರಕು-ಸಗಾಣೆ ವಾಹನಗಳು, ಟ್ಯಾಕ್ಸಿಗಳು ಸೇರಿದಂತೆ ಹಾಲಿನ ದರವು ಏರಿಕೆಯಾಗಲಿದೆ. ಕೇಂದ್ರ ಬಜೆಟ್ ಬಳಿಕ ಗೃಹಪಯೋಗಿ ಸಿಲೆಂಡರ್ (ಎಲ್ಪಿಜಿ) ದರ 50 ರೂ.ಗಳ ವರೆಗೂ ಏರಿಕೆ ಕಂಡಿದೆ. ಈ ಬೆನ್ನಲ್ಲೇ ಟೋಲ್, ಮೆಟ್ರೋ, ಬಸ್ ಪ್ರಯಾಣ ದರ ಏರಿಕೆಗಳು ಸಾರ್ವಜನಿಕರನ್ನು ಇನ್ನಷ್ಟು ಜರ್ಜರಿತಗೊಳಿಸಲಿವೆ.
ಎಕ್ಸ್‌ಪ್ರೆಸ್ ವೇ ದರ ಎಷ್ಟು..
2023ರ ಮಾ.1ರಂದು ಬೆಂಗಳೂರು –ಮೈಸೂರು ಎಕ್ಸ್ಪ್ರೆಸ್ ವೇ ಮೊದಲ ಹಂತದ ಟೋಲ್ ಪ್ರಾರಂಭಗೊಂಡಿತ್ತು. ಅಂದು ಏಕಮುಖ ಸಂಚಾರಕ್ಕೆ 270 ರೂ,.ಗಳ ದರ ನಿಗಧಿ ಪಡಿಸಲಾಗಿತ್ತು. ಆ ವೇಳೆ ಸಾಮಾನ್ಯ ಕೆಎಸ್ಎಸ್ ಆರ್‌ಟಿಸಿ ಬಸ್ ದರ 15 ರೂ., ರಾಜಹಂಸ ಬಸ್‌ಗಳಲ್ಲಿ ತಲಾ 18 ರೂ., ಮಲ್ಟಿ ಆಕ್ಸೆಲ್ ಬಸ್ಗಳಲ್ಲಿ ತಲಾ 20 ರೂ.ಗಳ ಹೆಚ್ಚುವರಿ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗಿತ್ತು. ಅದಾದ 20 ದಿನಗಳ ಅಂತರದಲ್ಲೇ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಪ್ರಸ್ತುತ ಬೆಂಗಳೂರಿನಿಂದ ಮೈಸೂರಿಗೆ ಪೂರ್ಣವಾಗಿ ಏಕಮುಖ ಸಂಚಾರದ ಕಾರುಗಳಿಗೆ 360 ರೂ.ಗಳ ದರ ನಿಗಧಿ ಪಡಿಸಲಾಗಿದೆ. ನೂತನ ದರದಲ್ಲಿ 35ರಿಂದ 40 ರೂಗಳ ವರೆಗೂ ಟೋಲ್ ದರ ಏರಿಕೆಯಾಗುವ ಸಾಧ್ಯತೆಗಳಿವೆ.
66ಕ್ಕೂ ಹೆಚ್ಚು ಹೆದ್ದಾರಿಗಳು..
ರಾಜ್ಯದಲ್ಲಿ66ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿವೆ. ಅವುಗಳಲ್ಲಿ ಸಾದಹಳ್ಳಿ( ದೇವನಹಳ್ಳಿ-ಎನ್ಎಚ್ 44) ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ (ಎನ್ಎಚ್ 275), ಬೆಂಗಳೂರು –ಹೈದರಬಾದ್ (ಎನ್ಎಚ್ 44), ಬೆಂಗಳೂರು-ನೆಲಮಂಗಲ-ತುಮಕೂರು (ಎನ್ಎಚ್ 48) ಟೋಲ್ ಪ್ಲಾಜಾಗಳು ವಾರ್ಷಿಕವಾಗಿ ಅತೀ ಹೆಚ್ಚಿನ ಆದಾಯ ಗಳಿಸು ಮೊದಲ ನಾಲ್ಕು ಸ್ಥಾನಗಳಲ್ಲಿವೆ.
2023-24ನೇ ಸಾಲಿನಲ್ಲಿ ಸಾದಹಳ್ಳಿ ಟೋಲ್ ಪ್ಲಾಜಾವು 308 ಕೋಟಿ ರೂ., ಬೆಂಗಳೂರು –ಮೈಸೂರು ಎಕ್ಸ್ಪ್ರೆಸ್ ವೇ 180 ಕೋಟಿ (ಕಳೆದ ಮೂರು ವರ್ಷಗಳಲ್ಲಿ 855 ಕೋಟಿ), ನೆಲಮಂಗಲ ಸಮೀಪದ ಚೊಕ್ಕೇನಹಳ್ಳಿ ಟೋಲ್ ಪ್ಲಾಜಾವು 103 ಕೋಟಿ ಆದಾಯಗಳಿಸಿದೆ. ರಾಜ್ಯದ 66ಕ್ಕೂ ಹೆಚ್ಚು ಟೋಲ್ಗಳಿಂದ ವಾರ್ಷಿಕವಾಗಿ ಸರಾಸರಿ 2,800 ಕೋಟಿಯಿಂದ 3 ಸಾವಿರ ಕೋಟಿ ರೂ.ಗಳ ವರೆಗೂ ಆದಾಯ ಸಂದಾಯಗೊಂಡಿದೆ. ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಟೋಲ್ ಸಂಗ್ರಹ ದರದಿಂದಾಗಿ ವಾರ್ಷಿಕ 100 ರಿಂದ 150 ಕೋಟಿ ರೂ.,ಆದಾಯ ಹೆಚ್ಚಾಗುತ್ತಿದ್ದರೆ, ಸವಾರರಿಗೆ ವಾರ್ಷಿಕ ಶೇ.10ರಷ್ಟು ಹೆಚ್ಚುವರಿ ಹೊರೆಯಾಗುತ್ತಿದೆ.
ಟೋಲ್ ದರ ಏರಿಕೆ, ಸೌಕರ್ಯ ಇಳಿಕೆ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಟೋಲ್ ಗೇಟ್ಗಳ ಬದಲಿಗೆ ಜಿಪಿಎಸ್ ಆಧಾರಿತ "ಮಲ್ಟಿ ಲೇಣ್ ಫ್ರೀ ಫ್ಲೋ” (MLFF) ವ್ಯವಸ್ಥೆ ಮೂಲಕ ರಸ್ತೆಯಲ್ಲಿ ಸಂಚರಿಸುವ ಪ್ರತಿ ಕಿ.ಮೀಗಳಿಗಷ್ಟೆ ಟೋಲ್ ದರವು ಸ್ವಯಂಚಾಲಿತವಾಗಿ ಕಡಿತಗೊಳ್ಳಬೇಕಿತ್ತು. ಆದರೆ, ಕಳೆದೊಂದು ವರ್ಷಗಳಿಂದಲೂ ಕೇವಲ ಕಡತಗಳಲ್ಲಿಯೇ ಈ ಯೋಜನೆ ಉಳಿದುಕೊಂಡಿದೆ. ಜತೆಗೆ ಇನ್ನುಳಿದ ಹೆದ್ದಾರಿಗಳಲ್ಲಿಯು ಟೋಲ್ನಿಂದ ಮತ್ತೊಂದು ಟೋಲ್ಗೆ ಹಣ ಪಾವತಿಸಬೇಕು. ಆದರೆ, ಬಹುತೇಕ ಟೋಲ್ ರಸ್ತೆಗಳು ಗುಂಡಿ ಬಿದ್ದಿವೆ. ಹೈವೆ ಬದಿಗಳಲ್ಲಿ ಟ್ರಾಮ ಸೆಂಟರ್, ರೆಸ್ಟ್ ಏರಿಯಾ, ಪೆಟ್ರೋಲ್ ಬಂಕ್‌ನಂತಹ ಸೌಕರ್ಯಗಳೇ ತೀರ ವಿರಳ.
ಟೋಲ್ ಪ್ಲಾಜಾಗಳಲ್ಲಿನ ಶೌಚಾಲಯಗಳು ಬಳಕೆ ಯೋಗ್ಯವಿಲ್ಲ. ಕುಡಿಯುವ ನೀರಿನ ಸೌಕರ್ಯವು ಇಲ್ಲ. 20ಅಡಿಗಳಷ್ಟು ಕಿರಿದಾದ ರಸ್ತೆಗಳಿಗೂ ಕೆಲವೆಡೆ ಟೋಲ್ ಪಾವತಿಸಬೇಕಿದೆ. ಹೀಗಾಗಿ ವಾಹನ ಸವಾರರು ದುರಸ್ತಿಯಲ್ಲಿರುವ ರಸ್ತೆಗೂ ಹಣ ಪಾವತಿಸಿಯೇ ಸಂಚರಿಸಬೇಕಿದೆ.
ನಿಯಮಗಳಿಲ್ಲಿ ಲೆಕ್ಕಕ್ಕಿಲ್ಲ
ಟೋಲ್ ಪಾವತಿಸಲು ಸಾಧ್ಯವಾಗದಿದ್ದವರಿಗಾಗಿ ಕಡ್ಡಾಯವಾಗಿ ಹೆದ್ದಾರಿ ಬದಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕೆಂಬುದು ನಿಯಮ. ಆದರೆ, ಬಹುತೇಕ ಹೆದ್ದಾರಿಗಳಿಗೆ ಸರ್ವಿಸ್ ರಸ್ತೆಗಳೇ ಇಲ್ಲ. ಬೆಂಗಳೂರು –ಮೈಸೂರು ಎಕ್ಸ್ಪ್ರೆಸ್ ವೇ, ಬೆಂಗಳೂರು-ಹೈದರಬಾದ್ ಹೆದ್ದಾರಿಯಲ್ಲಷ್ಟೆ ಸರ್ವಿಸ್ ರಸ್ತೆಗಳ ಸೌಕರ್ಯವಿದೆ. ಇನ್ನುಳಿದಂತೆ ಯಾವ ರಸ್ತೆಗಳಿಗೂ ಸರ್ವಿಸ್ ರಸ್ತೆ ಸಂಪರ್ಕವನ್ನೆ ಕಲ್ಪಿಸಿಲ್ಲ. ಬೆಂಗಳೂರು-ಕನಕಪುರ ರಸ್ತೆಯ ಸೋಮನಹಳ್ಳಿ ಬಳಿ ಟೋಲ್ ಪಾವತಿಸಬೇಕು. ಆದರೆ, ಈ ರಸ್ತೆಯಲ್ಲಿ ಸರ್ವಿಸ್ ರಸ್ತೆಯನ್ನೆ ನಿರ್ಮಿಸಿಲ್ಲ. ಮಾಗಡಿ-ನೆಲಮಂಗಲ, ಮದ್ದೂರು –ಹಾಸನದ ಹಳೆ ರಸ್ತೆಗೆ ಡಾಂಬರೀಕರಣ ನಡೆಸಿ, ಟೋಲ್ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.
ಟೋಲ್ ಬೂತ್ ನಲ್ಲಿ ವಾಹನದ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಆಗಲು 10 ಸೆಕೆಂಡ್ ಗಿಂತ ಹೆಚ್ಚು ಸಮಯ ತಗುಲಬಾರದು ಎಂಬ ಮತ್ತೊಂದು ನಿಯಮವಿದೆ. ಜತೆಗೆ ಟೋಲ್ ಬಳಿಯಲ್ಲಿನ ವಾಹನಗಳ ಸಾಲು 100 ಮೀಟರ್‌ಗಳಿಂತ ಹೆಚ್ಚಿದ್ದರೆ, ಟೋಲ್ ನಲ್ಲಿ ಉಚಿತ ಪ್ರಯಾಣ ನಡೆಸಬಹುದಾಗಿದೆ. ಆದರೆ, ಈ ನಿಯಮಗಳ್ಯಾವುದು ಪಾಲನೆಯಾಗುತ್ತಿಲ್ಲ. ಈ ಬಗ್ಗೆ 1033ಗೆ ಕರೆ ಮಾಡಿ ದೂರು ನೀಡಿದರೂ, ಕ್ರಮ ಜರುಗಿಸಿರುವ ಉದಾಹರಣೆಗಳು ವರದಿಯಾಗಿಲ್ಲ.
ಎಲ್ಲವು ದುಬಾರಿಯಾಗಲಿದೆಯೇ?
ಟೋಲ್ ದರ ಏರಿಕೆಯಾದರೆ, ಅಲ್ಲಿ ಸಂಚರಿಸುವ ಎಲ್ಲ ವಾಹನಗಳ ಬಾಡಿಗೆಯು ಸಾಮಾನ್ಯವಾಗಿ ಏರಿಕೆಯಾಗಲಿದೆ. ಉದಾಹರಣೆಗೆ ಹಾಲಿನ ಟ್ಯಾಂಕರ್‌ರೊಂದು ಟೋಲ್ ದರವನ್ನು ಹೆಚ್ಚುವರಿಯಾಗಿ ಪಾವತಿಸಿದರೆ, ಹಾಲಿನ ದರವು ಏಕಾಏಕಿ ಏರಿಕೆಗೊಳ್ಳಲಿದೆ. ಇದೇ ಮಾದರಿಯಲ್ಲಿ ತರಕಾರಿ, ಹೂ, ಹಣ್ಣುಗಳ ದರವು ಏರಿಕೆಯಾಗಬಹುದು. ಟ್ಯಾಕ್ಸಿ, ಬಸ್ ದರವು ಏರಿಕೆಯಾಗಲಿದೆ. ಒಟ್ಟಿನಲ್ಲಿ ಪ್ರಯಾಣಿಕರು ರಸ್ತೆಗಿಳಿಯಲು ಚಿಂತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

