
ಮೆಟ್ರೋ ದರ ಏರಿಕೆ| ಬಿಜೆಪಿ ನಾಯಕರಿಂದ ಸುಳ್ಳಿನ ರಾಜಕಾರಣ; ಪ್ರಿಯಾಂಕ್ ಖರ್ಗೆ ಆರೋಪ
ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಬಹುಪಾಲು ಹಣ ವಿನಿಯೋಗಿಸುತ್ತಿರುವಾಗ ಯೋಜನೆ ಲಾಭ ಪಡೆಯಲು ಬಿಜೆಪಿ ನಾಯಕರು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗಿ ಬರುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ʼನಮ್ಮ ಮೆಟ್ರೋʼ ಪ್ರಯಾಣ ದರ ಏರಿಕೆ ಮಾಡುವವರು ಯಾರೆಂಬ ಗೊಂದಲಗಳ ಮಧ್ಯೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.
ಮೆಟ್ರೋ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹೂಡಿಕೆ ಮಾಡುವ ನಿಯಮವಿದೆ. ಹೀಗಿದ್ದೂ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಹಣ ನೀಡದ ಪರಿಣಾಮ ಮೆಟ್ರೋ ವಿಸ್ತರಣೆಗೆ ರಾಜ್ಯ ಸರ್ಕಾರವೇ ಶೇ 87 ರಷ್ಟು ಹಣ ವಿನಿಯೋಗಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಬಹುಪಾಲು ಹಣ ವಿನಿಯೋಗಿಸುತ್ತಿರುವಾಗ ಯೋಜನೆಯ ಲಾಭ ಪಡೆಯಲು ಬಿಜೆಪಿ ನಾಯಕರು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗಿ ಬರುತ್ತಿದ್ದಾರೆ. ಮೆಟ್ರೋ ಪ್ರಯಾಣ ದರ ಏರಿಕೆ ವಿಷಯ ಬಂದಾಗಲೆಲ್ಲಾ ರಾಜ್ಯ ಸರ್ಕಾರವನ್ನು ಹೊಣೆ ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಮೆಟ್ರೋ ರೈಲ್ವೆ ಕಾಯ್ದೆ- 2002 ಪ್ರಕಾರ, ಮೆಟ್ರೋ ಪ್ರಯಾಣ ದರ ನಿಗದಿಪಡಿಸುವುದು ಸ್ವತಂತ್ರವಾದ ದರ ನಿಗದಿ ಸಮಿತಿ. ಈ ದರ ನಿಗದಿ ಸಮಿತಿ ರಚಿಸುವುದು ಕೇಂದ್ರ ಸರ್ಕಾರ. ಒಂದು ವೇಳೆ ದರ ಏರಿಕೆ ಪ್ರಸ್ತಾವನೆ ಬಂದಲ್ಲಿ ಅದನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ವಾರ್ಷಿಕವಾಗಿ ದರ ನಿಗದಿಪಡಿಸಲು ಈ ಕಮಿಟಿಯು ದರ ನಿಗದಿ ಸೂತ್ರ ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಎಫ್ಎಫ್ಸಿ ಅಧ್ಯಕ್ಷರ ನೇಮಕ
ದರ ನಿಗದಿ ಸಮಿತಿ (FFC)ಯಲ್ಲಿ ಕೇಂದ್ರ ಸರ್ಕಾರದ ನೇಮಕ ಮಾಡುವವರೇ ಅಧ್ಯಕ್ಷರಾಗಿರುತ್ತಾರೆ. ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು, ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ಒಬ್ಬರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಸಮಿತಿಯಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದವರ ಸಂಖ್ಯೆ ಹೆಚ್ಚಿರುತ್ತದೆ. ದರ ನಿಗದಿಯಲ್ಲಿ ಅವರ ಶಿಫಾರಸುಗಳಿಗೆ ಮನ್ನಣೆ ದೊರಕಲಿದೆ. ನಿಯಮಗಳ ಪ್ರಕಾರ ಸಮಿತಿಯ ಶಿಫಾರಸುಗಳನ್ನು ನಮ್ಮ ಮೆಟ್ರೋ ಒಪ್ಪಲೇಬೇಕಿದೆ, ಇದು ವಾಸ್ತವ ಎಂದು ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ವಿಷಯಗಳ ಅರಿವು ಇರಬೇಕಾಗಿದ್ದದ್ದು ಅಗತ್ಯ, ಆದರೆ ಬಿಜೆಪಿ ನಾಯಕರಿಗೆ ಇದರ ಅರಿವು ಇಲ್ಲವೇ ಅಥವಾ ಅರಿವಿದ್ದೂ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರವು 2024ರಲ್ಲಿ ದರ ನಿಗದಿ ಸಮಿತಿ ರಚಿಸಲು ಕೋರಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಹಿಂದಿನ ಪತ್ರಗಳನ್ನು ಹಿಡಿದು ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಮತ್ತು ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯದ ಹಾದಿ ಬಿಜೆಪಿಯವರಿಗೆ ಅಪಥ್ಯ, ಏಕೆಂದರೆ ಸುಳ್ಳೇ ಅವರ ಮನೆದೇವರು ಎಂದು ತಿರುಗೇಟು ನೀಡಿದ್ದಾರೆ.
ದರ ಏರಿಕೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂಬ ಸುದ್ದಿ ಬಂದಿದೆ. ದರ ಏರಿಕೆಯ ವಿಷಯವು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅನುಗುಣವಾಗಿ ನಡೆಯುತ್ತದೆ ಎಂಬುದಕ್ಕೆ ಪುರವೆಯಲ್ಲವೇ ಇದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

