
ಸಿಎಂ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್
ನಮ್ಮ ಮೆಟ್ರೋ ದರ ಏರಿಕೆ ಸಮರ: ಕೇಂದ್ರಕ್ಕೆ ಪತ್ರ ಬರೆಯಲು ಸಿಎಂಗೆ ಆರ್. ಅಶೋಕ್ ಸವಾಲು
ಬೆಂಗಳೂರು ಮೆಟ್ರೊದಲ್ಲಿ ಶೇ. 87 ಪಾಲು ರಾಜ್ಯ ಸರ್ಕಾರದ್ದಾಗಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಆದರೆ ಟಿಕೆಟ್ ದರ ಏರಿಕೆ ಮಾಡಿದ್ದು ಮಾತ್ರ ಕೇಂದ್ರ ಸರ್ಕಾರವೆಂದು ಆರೋಪಿಸಲಾಗುತ್ತಿದೆ ಎಂದು ಆರ್.ಅಶೋಕ್ ತಿಳಿಸಿದರು.
ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರಿಗರಿಗೆ ಮುಕ್ತಿ ನೀಡಿದ್ದ ʼನಮ್ಮ ಮೆಟ್ರೋʼಗೆ ರಾಜಕೀಯ ಸಮಸ್ಯೆ ಎದುರಾಗಿದೆ. ಇತ್ತೀಚೆಗಷ್ಟೇ ದರ ಏರಿಕೆ ಮಾಡಲಾಗುವುದು ಎಂದು ಹೇಳಿದ್ದ ಬಿಎಂಆರ್‌ಸಿಎಲ್ ನಡೆ ಇದೀಗ ರಾಜಕೀಯ ತಿರುವ ಪಡೆದುಕೊಂಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದೆ.
ಮೆಟ್ರೊ ಟಿಕೆಟ್ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರದಿಂದ ದರ ಏರಿಕೆ ಆಗುವುದಿದ್ದರೆ, ಮುಂದಿನ 2 ವರ್ಷ ದರ ಏರಿಕೆಯನ್ನು ಒಪ್ಪವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆಯಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಸವಾಲು ಹಾಕಿದ್ದಾರೆ.
ಸೋಮವಾರ(ಫೆ.9) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೆಟ್ರೊದಲ್ಲಿ ಶೇ. 87 ಪಾಲು ರಾಜ್ಯ ಸರ್ಕಾರದ್ದಾಗಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಆದರೆ ಟಿಕೆಟ್ ದರ ಏರಿಕೆ ಮಾಡಿದ್ದು ಮಾತ್ರ ಕೇಂದ್ರ ಸರ್ಕಾರವೆಂದು ಆರೋಪಿಸಲಾಗುತ್ತಿದೆ. ಬಿಎಂಆರ್‌ಸಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ರಾಜ್ಯ ಸರ್ಕಾರದಿಂದಲೇ ನೇಮಿಸಲಾಗಿದೆ. ಸಾವಿರಾರು ಕೋಟಿ ರೂ. ಟೆಂಡರನ್ನು ರಾಜ್ಯ ಸರ್ಕಾರದಿಂದ ಕರೆಯಲಾಗುತ್ತದೆ. ರಾಜ್ಯ ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಟೆಂಡರ್ ಅಂತಿಮಗೊಳಿಸುತ್ತಾರೆ. ಇಷ್ಟೆಲ್ಲ ಅಧಿಕಾರವಿರುವಾಗ, ದರ ಏರಿಕೆಯನ್ನೂ ಇವರೇ ಮಾಡಿದ್ದಾರೆ. ಕೇಂದ್ರ ಸರ್ಕಾರ ಆದೇಶ ಮಾಡಿದರೆ ಎಲ್ಲ ಮೆಟ್ರೊ ನಿಗಮಗಳಲ್ಲೂ ಟಿಕೆಟ್ ದರ ಏರಿಕೆಯಾಗಬೇಕಾಗಿತ್ತು ಎಂದರು.
ದರ ಏರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ
ಫೇರ್ ಫಿಕ್ಸೇಶನ್ ಕಮಿಟಿ ಸ್ವತಂತ್ರ ಸಮಿತಿಯಾಗಿದ್ದು, ನಿವೃತ್ತ ನ್ಯಾಯಧೀಶರು, ರಾಜ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ಒಬ್ಬ ಪ್ರತಿನಿಧಿ ಇರುತ್ತಾರೆ. ಈ ಸಮಿತಿ ದರ ಏರಿಕೆ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಿಲ್ಲ. ಕಳೆದ ವರ್ಷ ಇದೇ ಸಮಿತಿ ಶೇ. 100 ದರ ಏರಿಕೆಗೆ ಶಿಫಾರಸು ಮಾಡಿತ್ತು. ಜೊತೆಗೆ ಪ್ರತಿ ವರ್ಷ ಶೇ. 5 ಹೆಚ್ಚು ಮಾಡಬಹುದೆಂದು ಹೇಳಿದೆ. ಈ ಸಮಿತಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್‌ಗೆ ಶಿಫಾರಸು ನೀಡಿದೆ. ದರ ಏರಿಕೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಲ್ಲ. ದರ ಏರಿಕೆಯ ನಿರ್ಧಾರವನ್ನು ಈ ಅಧಿಕಾರಿ ಹಾಗೂ ಸರ್ಕಾರವೇ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದು ತಿಳಿಸಿದ್ದಾರೆ.
ಖಜಾನೆ ಖಾಲಿಯಾಗಿದ್ದಕ್ಕೆ ಟಿಕೆಟ್ ದರ ಹೆಚ್ಚಳ
ಒಂದು ವೇಳೆ ಕೇಂದ್ರ ಸರ್ಕಾರವೇ ದರ ಏರಿಕೆ ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮುಂದಿನ ಎರಡು ವರ್ಷ ದರ ಏರಿಕೆಗೆ ನಾವು ವಿರೋಧಿವಿದ್ದೇವೆ ಎಂದು ತಿಳಿಸಲಿ. ಇದನ್ನು ಮಾಡುವುದು ಬಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸುವುದು ಬೇಕಿಲ್ಲ. 2025 ರ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ದರ ಇಳಿಕೆಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ಹಾಗಾದರೆ ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಹೇಗೆ ಬಂದಿದೆ? ಸರ್ಕಾರ ಪಾಪರ್ ಆಗಿರುವುದರಿಂದ ಟಿಕೆಟ್ ದರ ಏರಿಸಲಾಗಿದೆ ಎಂದು ಆರೋಪಿಸಿದರು.
ಎಲ್ಲಾ ಅಧಿಕಾರ ಕೇಂದ್ರಕ್ಕೆ ವರ್ಗಾಯಿಸಲಿ
ಕೇಂದ್ರ ಸರ್ಕಾರಕ್ಕೆ ದರ ಏರಿಕೆಯ ಅಧಿಕಾರ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವುದಾದರೆ, ಇನ್ನು ಮುಂದೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ನೀಡಬೇಕು. ಟೆಂಡರ್‌ಗಳನ್ನು ಕರೆಯುವ ಹಾಗೂ ವರ್ಗಾವಣೆಯ ಅಧಿಕಾರವನ್ನು ಕೇಂದ್ರಕ್ಕೆ ನೀಡಬೇಕು. ನಾನು ಕೇಂದ್ರದ ಸಚಿವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಟಿಕೆಟ್ ದರ ಏರಿಕೆಯಿಂದ ತೊಂದರೆಯಾಗುತ್ತದೆ ಹಾಗೂ ಇದನ್ನು ತನಿಖೆ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ಸರ್ಕಾರ ಜನರ ಪರವಾಗಿ ಧ್ವನಿ ಎತ್ತಿ ದರ ಏರಿಕೆಯನ್ನು ತಡೆಹಿಡಿದಿದೆ ಎಂದರು.
ಆರ್ಥಿಕತೆ ಶ್ವೇತ ಪತ್ರ ಹೊರಡಿಸಲಿ
ಪ್ರಧಾನಿ ಕರೆದ ಒಂದು ಸಭೆಗೂ ರಾಜ್ಯ ಸರ್ಕಾರದಿಂದ ಯಾರೂ ಹೋಗಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ. ರೈಲ್ವೆ, ಹೆದ್ದಾರಿ, ಇಂಧನ, ಗ್ರಾಮೀಣಾಭಿವೃದ್ಧಿ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಎಷ್ಟು ಹಣ ಬಂದಿದೆ ಎಂದು ಶ್ವೇತಪತ್ರ ಹೊರಡಿಸಲಿ. ರೈಲು ಯೋಜನೆಗಳಲ್ಲಿ ಭೂ ಸ್ವಾಧೀನ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ಯೋಜನೆಗಳು ಮುಂದುವರಿಯುತ್ತಿಲ್ಲ. ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಎಂದು ಕೂಡ ತಿಳಿಸಲಿ. ಈ ಬಗ್ಗೆ ನಾನು ಹಲವು ಬಾರಿ ಕೇಳಿದರೂ ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.
ಈಗಾಗಲೇ ರಾಜ್ಯದ ಸಾಲ 2 ಲಕ್ಷ ಕೋಟಿ ರೂ. ದಾಟಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 3 ಸಾವಿರ ರೇಷನ್ ಕಾರ್ಡ್‌ಗಳು ರದ್ದಾಗಿವೆ. ಬೀದಿ ಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ವಿಧಿಸಿ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಮುಂದೆ ಇನ್ನಷ್ಟು ಯೋಜನೆಗಳು ಕಡಿತಗೊಳ್ಳಲಿವೆ ಎಂದರು.
ನಿಗಮಗಳ ಅಧ್ಯಕ್ಷರಿಗೆ ಸಂಪುಟ ದರ್ಜೆ
ಸಿಎಂ ಕುರ್ಚಿ ಕಿತ್ತಾಟದ ನಡುವೆ ಆಡಳಿತ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದ್ದು, ರಾಜ್ಯದ ಕಡೆ ಯಾರೂ ನೋಡುತ್ತಿಲ್ಲ. ನಿಗಮಗಳ ಅಧ್ಯಕ್ಷರಿಗೆ ಸಚಿವ ಸಂಪುಟ ಸ್ಥಾನಮಾನ ನೀಡುವ ಮೂಲಕ ಪ್ರತಿ ವರ್ಷ 50 ಕೋಟಿ ರೂ. ದುರ್ಬಳಕೆಯಾಗುತ್ತದೆ. ಗೃಹಲಕ್ಷ್ಮಿಯ ಎರಡು ತಿಂಗಳ, ಅನ್ನಭಾಗ್ಯದ ಒಂದು ತಿಂಗಳ ಹಣ ನೀಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಮೋಜು ಮಸ್ತಿಗೆ ಹಣ ನೀಡಲಾಗುತ್ತಿದೆ. ಕೂಡಲೇ ಈ ಆದೇಶ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

