
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಅಡ್ಡಮತದಾನ ವಿವಾದ: ದೆಹಲಿ ತಲುಪಿದ ಕಮಲ ಕಲಹ, ರಾಜ್ಯ ನಾಯಕರಿಂದ ಹೈಕಮಾಂಡ್‌ಗೆ ವರದಿ
ಪಕ್ಷದ ಒಳಗೆ ಆಂತರಿಕ ಅಸಮಾಧಾನ ಮೂಡಿಸಿರುವ ಈ ಅಡ್ಡಮತದಾನದ ವಿರುದ್ಧ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಇಂದು ದೆಹಲಿಯಲ್ಲಿ ಪ್ರಾಥಮಿಕ ಚರ್ಚೆಯಷ್ಟೇ ನಡೆಯಲಿದೆ.
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನದ ವಿವಾದವೀಗ ದೆಹಲಿ ಅಂಗಳ ತಲುಪಿದೆ. ಈ ಕುರಿತು ರಾಜ್ಯ ನಾಯಕರು ಸೋಮವಾರ ಬಿಜೆಪಿ ಹೈಕಮಾಂಡ್‌ಗೆ ಸಮಗ್ರ ವರದಿ ನೀಡಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರನ್ನು ಭೇಟಿಯಾಗಿ ಹೈಕಮಾಂಡ್‌ಗೆ ವರದಿ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಗೆ ಹಾರಿದ ನಾಯಕರು
ಮೂಲಗಳ ಪ್ರಕಾರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈಗಾಗಲೇ ದೆಹಲಿ ತಲುಪಿದ್ದು, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ. ಇಂದು ರಾತ್ರಿ ಇಬ್ಬರೂ ನಾಯಕರ ಜೊತೆ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು ಮಹತ್ವದ ಸಭೆ ನಡೆಸಲಿದ್ದು, ಚುನಾವಣೆಯಲ್ಲಿ ಏನಾಯಿತು? ಯಾರು ದ್ರೋಹ ಎಸಗಿದ್ದಾರೆ? ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಲಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ
ಪಕ್ಷದ ಒಳಗೆ ಆಂತರಿಕ ಅಸಮಾಧಾನ ಮೂಡಿಸಿರುವ ಈ ಅಡ್ಡಮತದಾನದ ವಿರುದ್ಧ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಇಂದು ದೆಹಲಿಯಲ್ಲಿ ಪ್ರಾಥಮಿಕ ಚರ್ಚೆಯಷ್ಟೇ ನಡೆಯಲಿದ್ದು, ಅಡ್ಡಮತದಾನ ಮಾಡಿದ 'ಕೈವಾಡ' ಯಾರದ್ದು ಎಂಬುದನ್ನು ಪತ್ತೆಹಚ್ಚಲು ಈಗಾಗಲೇ ರಾಜ್ಯದಲ್ಲಿ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ತಂಡ ನೀಡುವ ಅಂತಿಮ ತನಿಖಾ ವರದಿ ಕೈ ಸೇರಿದ ಬಳಿಕ, ಪಕ್ಷಕ್ಕೆ ದ್ರೋಹ ಬಗೆದ ಶಾಸಕರ ವಿರುದ್ಧ ಹೈಕಮಾಂಡ್ ಶಿಸ್ತುಕ್ರಮದ ಬ್ರಹ್ಮಾಸ್ತ್ರ ಪ್ರಯೋಗಿಸುವ ಸಾಧ್ಯತೆಯಿದೆ.

