Karnataka Politics | ಮುಸ್ಲಿಂ ನಾಯಕರ ತಲೆದಂಡದ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಚಿವ ಮಲ್ಲಿಕಾರ್ಜುನ್!
x
ಸಿಎಂ ಸಿದ್ಧರಾಮಯ್ಯ ಮತ್ತು ಎಸ್‌.ಎಸ್‌. ಮಲ್ಲಿಕಾರ್ಜುನ(ಸಂಗ್ರಹ ಚಿತ್ರ)

Karnataka Politics | ಮುಸ್ಲಿಂ ನಾಯಕರ ತಲೆದಂಡದ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಚಿವ ಮಲ್ಲಿಕಾರ್ಜುನ್!

ದಾವಣಗೆರೆ ದಕ್ಷಿಣ ಚುನಾವಣೆಯ ಸಂಪೂರ್ಣ ಮಾಹಿತಿಯೊಂದಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ಮಲ್ಲಿಕಾರ್ಜುನ್ ಭೇಟಿಯಾದರು.


ಮುಸ್ಲಿಂ ನಾಯಕರ ಪದಚ್ಯುತಿಯ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ನಡೆದಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕುರಿತು ಈ ವೇಳೆ ಮಹತ್ವದ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

'ಕಾವೇರಿ'ಯಲ್ಲಿ ಮಹತ್ವದ ರಾಜಕೀಯ ಚರ್ಚೆ

ಬುಧವಾರ ರಾತ್ರಿ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ 'ಕಾವೇರಿ'ಯಲ್ಲಿ ಈ ಭೇಟಿ ನಡೆದಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮ್ಮದ್ ಹಾಗೂ ರಿಜ್ವಾನ್ ಅರ್ಷದ್ ಕೂಡ ಸಾಥ್ ನೀಡಿದ್ದರು. ಮುಸ್ಲಿಂ ನಾಯಕರ ತಲೆದಂಡದ ನಂತರ ಈ ಭೇಟಿ ನಡೆದಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಚುನಾವಣಾ ರಿಪೋರ್ಟ್ ಕಾರ್ಡ್ ನೀಡಿದ ಸಚಿವ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಡೆದ ಚುನಾವಣೆ ಹಾಗೂ ಮತದಾನದ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಸಚಿವ ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿಗೆ ನೀಡಿದ್ದಾರೆ. ಯಾವ ಯಾವ ಪಂಚಾಯ್ತಿಗಳಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ಸೂಕ್ಷ್ಮ ಮಾಹಿತಿಯನ್ನು ಸಿಎಂ ಅವರಿಗೆ ಸಚಿವರು ವಿವರಿಸಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ ಪುತ್ರ (ಪ್ರಭಾಸ್ ಮಲ್ಲಿಕಾರ್ಜುನ್) ಎಷ್ಟು ಮತಗಳ ಅಂತರದಿಂದ ಗೆಲ್ಲಬಹುದು ಹಾಗೂ ಕ್ಷೇತ್ರದ ಒಟ್ಟಾರೆ ಒಲವು ಯಾರ ಕಡೆಗಿದೆ ಎಂಬ ಸಂಪೂರ್ಣ ರಿಪೋರ್ಟ್ ಅನ್ನು ಈ ವೇಳೆ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಮುಸ್ಲಿಂ ನಾಯಕರ ಭೇಟಿಯ ಮಹತ್ವವೇನು?

ಸಚಿವ ಮಲ್ಲಿಕಾರ್ಜುನ್ ಅವರೊಂದಿಗೆ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾದ ಸಲೀಂ ಅಹಮ್ಮದ್ ಮತ್ತು ರಿಜ್ವಾನ್ ಅರ್ಷದ್ ಉಪಸ್ಥಿತರಿರುವುದು ದಾವಣಗೆರೆಯ ಮುಸ್ಲಿಂ ಮತಗಳ ಧ್ರುವೀಕರಣ ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಿಎಂ ಅವರಿಂದ ಸ್ಪಷ್ಟನೆ ಅಥವಾ ಸಲಹೆ ಪಡೆಯುವ ಉದ್ದೇಶ ಹೊಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೋತ್ತರ ಸಮೀಕ್ಷೆಗಳು ಮತ್ತು ಸ್ಥಳೀಯ ಮಟ್ಟದ ಅಂಕಿಅಂಶಗಳೊಂದಿಗೆ ಸಚಿವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವಕ್ಕೆ ಗೆಲುವಿನ ವಿಶ್ವಾಸವನ್ನು ನೀಡುವ ಒಂದು ತಂತ್ರವಾಗಿ ಕಂಡುಬರುತ್ತಿದೆ.

Read More
Next Story