
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಪಕ್ಷ ತೊರೆದ ಯಾವ ಅಲ್ಪಸಂಖ್ಯಾತ ನಾಯಕರೂ ಸಂಪರ್ಕದಲ್ಲಿಲ್ಲ: ಸಚಿವ ಎಚ್‌ಡಿಕೆ
ಕಾಂಗ್ರೆಸ್ ಒಂದು ಸಮುದಾಯವನ್ನು ಮಾತ್ರ ಅನುಮಾನದಿಂದ ನೋಡುತ್ತಿದೆ. ಇಂತಹ ರಾಜಕಾರಣವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ನಂತರ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಕೆಲವು ಬೆಳವಣಿಗೆಗಳು ನಡೆಯುತ್ತಿದ್ದು, ಒಂದು ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿದೆ. ಇಂತಹ ರಾಜಕಾರಣವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸೋಮವಾರ (ಏ.13) ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಮುಸ್ಲಿಂ ನಾಯಕರ ಬಗ್ಗೆ ಮಾತನಾಡುವುದಿಲ್ಲ. ಯಾರ ಜೊತೆಗೆ ಸಂಪರ್ಕವೂ ಇಲ್ಲ. ಮುಂದಿನ ದಿನಗಳಲ್ಲಿ ಪುನಃ ಪಕ್ಷಕ್ಕೆ ಸೇರಬಯಸಿದರೆ ಮುಖಂಡರ ಜತೆ ಚರ್ಚಿಸಿ ನಿರ್ಧಾರ" ಮಾಡಲಾಗುವುದು ಎಂದರು.
600 ಎಕರೆ ಭೂಮಿ ಅಗತ್ಯ
ಕೇಂದ್ರ ಬೃಹತ್ ಕೈಗಾರಿಕೆ ಸಚಿವಾಲಯದಡಿ ಬರುವ ಭಾರತೀಯ ಆಟೋಮೋಟಿವ್ ಸಂಶೋಧನಾ ಸಂಘ(ARAI) ದೇಶದಲ್ಲಿ ನಾಲ್ಕು ನಗರಗಳಲ್ಲಿ ಮಾತ್ರವಿದೆ. ಇದೀಗ ಮಂಡ್ಯದಲ್ಲಿ ಅಂತರಾಷ್ಟ್ರೀಯ ಎಆರ್‌ಎಐ ಟೆಸ್ಟಿಂಗ್ ಸೆಂಟರ್ ಆರಂಭವಾಗಬೇಕಿದೆ. ಈ ಟೆಸ್ಟಿಂಗ್ ಸೆಂಟರ್‌ನಿಂದ ಎಲೆಕ್ಟ್ರಿಕ್ ವ್ಹೆಹಿಕಲ್, ಆಟೋಮೊಬೈಲ್ ಸೆಂಟರ್‌ಗಳ ವಾಹನಗಳ ಪರಿಶೀಲನೆ ಆಗಲಿವೆ. ಇಲ್ಲಿಯೇ ಪ್ರಮಾಣಪತ್ರಗಳನ್ನು ಕೊಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಗೆ ಸುಮಾರು 600 ಎಕರೆ ಭೂಮಿ ಬೇಕಿದೆ ಎಂದು ಮಾಹಿತಿ ನೀಡಿದರು.
ಕೈಗಾರಿಕೆ ವಿಸ್ತರಣೆಗೆ ಕ್ರಮ
ನಿರುದ್ಯೋಗ ನಿವಾರಣೆಗೆ ರಾಜ್ಯದ ಎಲ್ಲಾ ಕಡೆ ಕೈಗಾರಿಕೆ ತರಲು ಬಯಸಿದ್ದೇನೆ. ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ದೊರೆಯಬೇಕಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಏ.30 ರೊಳಗೆ ಜಾಗದ ಸಮಸ್ಯೆ ಬಗೆಹರಿಸಬೇಕಿದ್ದು, ಮೇ ಆರಂಭದಲ್ಲೇ ಶಂಕುಸ್ಥಾಪನೆ ಮಾಡಲು ಸಿದ್ದತೆ ನಡೆಸಲಾಗಿದೆ. ಸ್ಥಳವನ್ನು ಗುರುತಿಸಲು ನಾನೂ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಶಾಸಕ ಗಣಿಗ ರವಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮಂಡ್ಯದಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದು, ಜಮೀನಿನ ವಿಸ್ತೀರ್ಣ ಮುಖ್ಯವಲ್ಲ. ಯುವಕರಿಗೆ ಎಷ್ಟು ಉದ್ಯೋಗ ಸಿಗುತ್ತದೆ ಎನ್ನುವುದು ಮುಖ್ಯ. ನಮ್ಮ ಜನರ ನೀರಾವರಿ ಭೂಮಿಯನ್ನು ನಾನು ಕೇಳುವುದಿಲ್ಲ. ಎಆರ್‌ಎಐ ಕೇಂದ್ರ ಸ್ಥಾಪಿಸಲು ಕೇವಲ ಒಣ ಭೂಮಿಯನ್ನು ಮಾತ್ರ ಕೇಳುತ್ತಿದ್ದೇವೆ ಎಂದರು.

