
ದೇಶದ ಮರ್ಯಾದೆ ಹಾಳು ಮಾಡಿದ ಪ್ರಧಾನಿ ಮೋದಿ; ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಬಿಜೆಪಿಯವರಿಗಂತೂ ಕೆಲಸನೇ ಇಲ್ಲ. ಸೋನಿಯಾ, ರಾಹುಲ್, ನನಗೆ ಹಾಗೂ ಪ್ರಿಯಾಂಕ್, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಬಯ್ಯುವುದೇ ಕೆಲಸವಾಗಿದೆ ಎಂದು ಮಲ್ಲಿಕಾರ್ಜು ಖರ್ಗೆ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶಾಂಗ ನೀತಿಯಿಂದಾಗಿ ದೇಶದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ 1069 ಕೋಟಿ ರೂ. ವೆಚ್ಚದ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
" ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವರ ಗುಲಾಮ ಎಂದು ಕಟುವಾಗಿ ಟೀಕಿಸಿದ ಖರ್ಗೆ ಅವರು, ರಷ್ಯಾದಿಂದ ಒಂದು ತಿಂಗಳಿಗೆ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಅಡವಿಟ್ಟಿದ್ದಾರೆ." ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಬಗ್ಗೆ ಪ್ರಸ್ತಾಪಿಸಿದ ಖರ್ಗೆ ಅವರು, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ನಾನ್ ಅಲೈನ್ ಮೆಂಟ್ ಒಪ್ಪಂದ ಮಾಡಿಕೊಂಡಿದ್ದರಿಂದ ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ, ಮೋದಿ ಅವರು ಈಗ ಮಾಡುತ್ತಿರುವುದೇನು?, ಮೋದಿ ಇಸ್ರೇಲ್‌ಗೆ ಹೋಗಿ ಬಂದ ನಂತರ ಇರಾನ್ ಮೇಲೆ ಬಾಂಬ್ ದಾಳಿಯಾಯಿತು. ಒಂದು ದೇಶದ ಮುಖ್ಯಸ್ಥರನ್ನು ಅಮೆರಿಕ ದವರು ಹತ್ಯೆ ಮಾಡಿದರು. ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರಲು ಸಾಧ್ಯವೇ?, ಇದರಿಂದ ವಿಶ್ವಶಾಂತಿ ಸಾಧ್ಯವಾಗುತ್ತದೆಯಾ? ಎಂದು ಖರ್ಗೆ ಪ್ರಶ್ನಿಸಿದರು.
"ಭಾರತದ ಶೇ 65 ರಷ್ಟು ರೈತರು ಕೃಷಿ ಅವಲಂಬಿತರಾಗಿದ್ದರೆ, ಅಮೆರಿಕದಲ್ಲಿ ಶೇ 3 ರಷ್ಟು ಮಾತ್ರ ಕೃಷಿ ಅವಲಂಬಿಸಿದ್ದಾರೆ. ನಮ್ಮ ದೇಶದ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ತೆರಿಗೆ ಇಲ್ಲ. ಆದರೆ, ಅಮೆರಿಕಾದ ಉತ್ಪನ್ನಗಳ ಮೇಲೆ ಮನಬಂದಂತೆ ತೆರಿಗೆ ಹಾಕಲಾಗುತ್ತಿದೆ. ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ, ರಷ್ಯಾದಿಂದ ತೈಲ ಖರೀದಿ ಮಾಡಿದರೆ ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆಂದು ಟ್ರಂಪ್ ಹೇಳುತ್ತಾರೆ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ. ಟ್ಯಾಕ್ಸ್ ಹಾಕುವ ಬಗ್ಗೆಯೇ ಮಾತನಾಡುತ್ತಾರೆಯೇ ಎಂದು ಕಿಡಿಕಾರಿದರು.
ಎಫ್ಟಿನ್ ಫೈಲ್ ನಲ್ಲಿ ಯಾರು, ಯಾರು ಎಲ್ಲಿ ಹೋಗಿದ್ದರು ಎನ್ನುವ ಮಾಹಿತಿ ಇದೆ ಎನ್ನಲಾಗುತ್ತಿದೆ. ಅದನ್ನು ಇಟ್ಟುಕೊಂಡೇ ಟ್ರಂಪ್ ಅವರಿಗೆ ಮೋದಿಗೆ ಹೆದರಿಸುತ್ತಿರಬಹುದು. ಕಾಂಗ್ರೆಸ್ ಅವಧಿಯ 75 ವರ್ಷದಲ್ಲಿ ಯಾರೂ ಕೂಡ ನಮ್ಮ ದೇಶದ ತಂಟೆಗೆ ಬಂದಿರಲಿಲ್ಲ. ಪಾಕಿಸ್ತಾನವನ್ನು ಒಡೆದು ಎರಡು ಭಾಗ ಮಾಡಿದರು. ಅವರಿಗೆ ಇದ್ದಂತ ಧೈರ್ಯ ನಿಮಗೇಕಿಲ್ಲ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಕೆಲಸವಿಲ್ಲ
"ಬಿಜೆಪಿಯವರಿಗಂತೂ ಕೆಲಸನೇ ಇಲ್ಲ. ಸೋನಿಯಾ, ರಾಹುಲ್, ನನಗೆ ಹಾಗೂ ಪ್ರಿಯಾಂಕ್, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಬಯ್ಯುವುದೇ ಕೆಲಸವಾಗಿದೆ. ನಮ್ಮ ಸರ್ಕಾರ ಇದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗದಗ-ವಾಡಿ ರೈಲ್ವೆ ಲೈನ್, ರಸ್ತೆಗಳು, ಹೈವೈ ಗಳು ಮಾಡುದ್ದು ನಾವೇ ಹೊರತು ನೀವಲ್ಲ" ಎಂದು ಬಿಜೆಪಿ ವಿರುದ್ದ ಟೀಕಿಸಿದರು.
" ಆರ್ಟಿಕಲ್ 371 ಜೆ ಜಾರಿಗೆ ತಂದಿದ್ದು ನಾವು. ನಮ್ಮ ಬೇಡಿಕೆಗೆ ಅಂದಿನ ಗೃಹ ಸಚಿವ ಅಡ್ವಾಣಿ ಸ್ಪಂದಿಸಲಿಲ್ಲ ಎಂದು ಅಂದಿನ ಬಿಜೆಪಿಯ ಪ್ರತಿರೋಧ ನೆನಪಿಸಿಕೊಂಡ ಖರ್ಗೆ, ನಾನು ಅಂದಿನ ಸಂದರ್ಭದಲ್ಲಿ ನಮ್ಮ ಪರವಾಗಿರಲು 130 ಜನ ಎಂ.ಪಿಗಳಿಗೆ ಹೇಗೆ ಮನವೊಲಿಸಿದ್ದೇನೆ, ಅದು ನನಗೆ ಮಾತ್ರ ಗೊತ್ತು. ಆರ್ಟಿಕಲ್ 371 ಜೆ ನನಗೆ, ನನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಅನುಕೂಲವಾಗಲ್ಲ. ಅದು ಅನುಕೂಲವಾಗುವುದು ಜನಸಾಮಾನ್ಯರಿಗೆ. ಇಂದು ಮೆಡಿಕಲ್, ಎಂಜಿನಿಯರಿಂಗ್ ಸೀಟು ಪಡೆದುಕೊಳ್ಳಲು ಅನುಕೂಲವಾಗಿದೆ" ಎಂದರು.
ಕಲಬುರಗಿಗೆ ವಿಮಾನ ನಿಲ್ದಾಣ ಮಾಡಲು ಶ್ರೀನಿವಾಸ ಸರಡಗಿ ಗ್ರಾಮದ ಜನರು 1,000 ಎಕರೆ ಜಮೀನು ಕೊಟ್ಟಿದ್ದಾರೆ. ಅವರಿಗೆ ಇಲ್ಲಿಂದಲೇ ನಾನು ನಮಸ್ಕಾರ ಮಾಡುತ್ತೇನೆ. ವಿಮಾನ ನಿಲ್ದಾಣವನ್ನು ಖರ್ಗೆ ಜಾಸ್ತಿ ಓಡಾಡುತ್ತಾರೆ ಎಂದು ಬಂದ್ ಮಾಡಲಾಗಿದೆ. ನಾನು ದಿನಾಲು ಬರುತ್ತೇನಾ ?" ಎಂದು ಪ್ರಶ್ನಿಸಿದರು.
"ನಮ್ಮ ದೇಶದ ಯುವಕರ ಭವಿಷ್ಯ ಉಜ್ವಲವಾಗಬೇಕಾದರೆ ಯೋಜನೆಗಳು ಬರಬೇಕು ಎಂದು ಹೇಳಿದ ಖರ್ಗೆ, ಯುವಕರಲ್ಲಿ ಜಗಳ ಹಚ್ಚುವುದು ಹಾಗೂ ದ್ವೇಷ ಹರಡುವುದೇ ಇವರ ಕೆಲಸ. ಶ್ರೀಮಂತರು ಹೇಗೋ ಬಚಾವಾಗುತ್ತಾರೆ, ಬಡವರು ಎಲ್ಲಿ ಹೋಗಬೇಕು. ?, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೆಲವರು ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದವರು. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹನಿ ರಕ್ತ ಹರಿಸಿಲ್ಲ. ನಾನು ಯಾರಿಗೂ ಬೈಯುತ್ತಿಲ್ಲ. ನಮ್ಮನ್ನು ಟೀಕಿಸುವವರು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು. ಅವರ ಬಗ್ಗೆ ನೀವು ಎಚ್ಚರದಿಂದ ಇರಬೇಕು, ಅವರ ಮಾತಿಗೆ ಮರುಳಾಗಬಾರದು" ಎಂದರು.
ಜನರ ದನಿಯಾದ ಶಾಸಕ
ಚಿತ್ತಾಪುರದ ಒಬ್ಬ ಶಾಸಕ ಇಡೀ ದೇಶದ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿರುವುದು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವು ಸದಾ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಗೆ ಇನ್ನು ಇಪ್ಪತ್ತು ಸೀಟ್ ಬಂದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಮ್ಮ ನಿರೀಕ್ಷೆಯಂತೆ ಸೀಟು ಬರಲಿಲ್ಲ, ಅದು ನಮ್ಮ ದುರ್ದೈವ. ನಮ್ಮ ಸೋಲನ್ನು ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ನಾವು ಜನರ ಪ್ರೀತಿ ವಿಶ್ವಾಸದಿಂದ ಮುಂದುವರೆಯುತ್ತೇವೆ ಎಂದರು.

