
ಗುಜರಾತ್ ಜನತೆ 'ಅನಕ್ಷರಸ್ಥರು' ಎಂಬ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಮೋದಿ ಅವರು ಗುಜರಾತಿನ ಅನಕ್ಷರಸ್ಥರ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಆದರೆ, ಕೇರಳದ ಅಕ್ಷರಸ್ಥರು ಅವರನ್ನು ನಂಬುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವಿವಾದಾತ್ಮಕ ಹೇಳಿಕ ನೀಡಿದ್ದರು.
ಗುಜರಾತಿನ ಜನರನ್ನು 'ಅನಕ್ಷರಸ್ಥರು' ಎಂದು ಕರೆದು ತೀವ್ರ ವಿವಾದಕ್ಕೆ ಗುರಿಯಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ (ಏ. 8) ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. "ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ; ಆದಾಗ್ಯೂ ಗುಜರಾತ್ ಜನತೆಯ ಬಗ್ಗೆ ನನಗೆ ಅಪಾರ ಗೌರವವಿದ್ದು, ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ" ಎಂದು ಅವರು ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಖರ್ಗೆ, "ಗುಜರಾತಿನ ಜನರ ಭಾವನೆಗಳನ್ನು ನೋಯಿಸುವ ಯಾವುದೇ ದುರುದ್ದೇಶ ನನಗಿರಲಿಲ್ಲ. ಅವರ ಬಗ್ಗೆ ನನಗೆ ಹಿಂದೆಯೂ ಅಪಾರ ಗೌರವ ಇತ್ತು, ಮುಂದೆಯೂ ಇರಲಿದೆ. ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ನಾನು ಆಡಿದ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ" ಎಂದು ಹೇಳಿಕೊಂಡಿದ್ದಾರೆ.
ವಿವಾದಕ್ಕೆ ಕಾರಣವಾದ ಹೇಳಿಕೆ ಏನು?
ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಭಾಷಣ ಮಾಡುವಾಗ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ಪ್ರಧಾನಿ ಮೋದಿ ಅವರು ಗುಜರಾತಿನ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಗುಜರಾತಿನ ಅನಕ್ಷರಸ್ಥ ಜನರಿಗೆ ನೀವು ಸುಲಭವಾಗಿ ಮೋಸ ಮಾಡಬಹುದು. ಆದರೆ ಕೇರಳದ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಕೇರಳದ ಜನರು ಬುದ್ಧಿವಂತರು ಹಾಗೂ ವಿದ್ಯಾವಂತರಾಗಿದ್ದು, ಮೋದಿಯಾಗಲಿ ಅಥವಾ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಲಿ ಇಲ್ಲಿನ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ" ಎಂದು ಅವರು ಟೀಕಿಸಿದ್ದರು. ಖರ್ಗೆ ಅವರ ಈ ಮಾತುಗಳು ಗುಜರಾತ್ ಜನತೆಯನ್ನು ಅವಮಾನಿಸುವಂತಿವೆ ಎಂದು ಬಿಜೆಪಿ ಮತ್ತು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

