Let the high command sing Itishree to solve the leadership confusion: MLA H.C. Balakrishna
x

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ 

ನಾಯಕತ್ವ ಗೊಂದಲಕ್ಕೆ ಹೈಕಮಾಂಡ್ ಇತಿಶ್ರೀ ಹಾಡಲಿ: ಶಾಸಕ ಎಚ್.ಸಿ. ಬಾಲಕೃಷ್ಣ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಾಯಕತ್ವದ ಕುರಿತ ಸಣ್ಣಪುಟ್ಟ ಚರ್ಚೆಗಳಿಂದ ಪಕ್ಷಕ್ಕೆ ಹಾನಿಯಾಗಬಾರದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.


Click the Play button to hear this message in audio format

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ಚರ್ಚೆ ದಿನೇದಿನೇ ಹೆಚ್ಚಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣದ ನಾಯಕರು ಆಗಿಂದಾಗ್ಗೆ ವಿವಿಧ ಕಾರ್ಯಕ್ರಮಗಳ ಹೆಸರಿನಲ್ಲಿ ಸಭೆ ನಡೆಸುತ್ತಿರುವುದು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

ಇತ್ತೀಚೆಗೆ ಡಿ.ಕೆ. ಶಿವಕುಮಾರ್‌ ಆಪ್ತ, ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ತಮ್ಮ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ್ದ ಔತಣಕೂಟದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು, ರಾಜ್ಯದಲ್ಲಿ ʼಬಣ ರಾಜಕೀಯʼ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದರು.

ಈ ಕುರಿತು ಮಂಗಳವಾರ (ಮಾ. 3) ಸ್ಪಷ್ಟನೆ ನೀಡಿರುವ ಶಾಸಕ ಎಚ್‌.ಸಿ. ಬಾಲಕೃಷ್ಣ, "ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆ ಹಾಗೂ ಬಣ ರಾಜಕೀಯದ ಚರ್ಚೆಗಳಿಗೆ ಹೈಕಮಾಂಡ್ ಶೀಘ್ರವೇ ತೆರೆ ಎಳೆಯಬೇಕು. ʼಬಣ ರಾಜಕೀಯ' ಎಂದು ಬಿಂಬಿಸುತ್ತಿರುವ ವಿರೋಧ ಪಕ್ಷಗಳ ಆರೋಪ ನಿರಾಧಾರವಾದದ್ದು," ಎಂದು ತಿಳಿಸಿದ್ದಾರೆ.

ಬಣ ರಾಜಕೀಯ ಇಲ್ಲ

"ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಔತಣಕೂಟ ಏರ್ಪಡಿಸಲಾಗಿತ್ತು. ಇದರಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಅನೇಕ ಮಂತ್ರಿಗಳು ಮತ್ತು ಹಿರಿಯರು ಬಂದು ಆಶೀರ್ವಾದ ಮಾಡಿದ್ದಾರೆ. ಲೋಕಾಭಿರಾಮವಾಗಿ ಚರ್ಚೆ ನಡೆದಿದೆಯೇ ಹೊರತು, ಡಿ.ಕೆ. ಶಿವಕುಮಾರ್ ಪರ ಶಾಸಕರ ಸಂಖ್ಯೆ ಹೆಚ್ಚಿಸುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ," ಎಂದರು.

"ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಾಯಕತ್ವದ ಕುರಿತ ಸಣ್ಣಪುಟ್ಟ ಚರ್ಚೆಗಳಿಂದ ಪಕ್ಷಕ್ಕೆ ಹಾನಿಯಾಗಬಾರದು. ನಾವು ಹಳ್ಳಿಗಳಿಗೆ ಹೋದಾಗ 'ಏನಾಗುತ್ತಿದೆ?' ಎಂದು ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಿರುವಾಗ ಈ ಗೊಂದಲಗಳಿಗೆ ಹೈಕಮಾಂಡ್ ತಕ್ಷಣವೇ ಅಂತಿಮ ತೀರ್ಮಾನ ಕೈಗೊಳ್ಳಬೇಕು," ಎಂದು ಒತ್ತಾಯಿಸಿದರು.

ಬಿಜೆಪಿಯಲ್ಲಿ ಮೂರು ಬಣ

"ರಾಜ್ಯ ಬಿಜೆಪಿಯಲ್ಲಿ ಒಬ್ಬ ರಾಜ್ಯಾಧ್ಯಕ್ಷನನ್ನು ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಣ, ಶಾಸಕ ಯತ್ನಾಳ್ ಬಣ ಹಾಗೂ ಶಾಸಕ ರಮೇಶ್‌ ಜಾರಕಿಹೊಳಿ ಅವರ ಇನ್ನೊಂದು ಬಣವಿದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡಬೇಡಿ," ಎಂದು ವ್ಯಂಗ್ಯವಾಡಿದರು.

ಹೈಕಮಾಂಡ್‌ ತೀರ್ಮಾನ ಅಂತಿಮ

"ಐದು ರಾಜ್ಯಗಳ ಚುನಾವಣೆ ಮುಗಿದ ಬಳಿಕ, ಬಹುಶಃ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಹೈಕಮಾಂಡ್ ರಾಜ್ಯ ರಾಜಕೀಯದ ಗೊಂದಲದ ಬಗ್ಗೆ ಮಧ್ಯಪ್ರವೇಶಿಸಬಹುದು. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ. 'ಎರಡು ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ' ಎಂದು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಲಿ ಎಂಬುದೇ ನಮ್ಮ ಆಶಯ," ಎಂದು ತಿಳಿಸಿದರು.

Read More
Next Story