ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮೊಳಗಿದ ದಲಿತ ಸಿಎಂ ಕೂಗು: ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚು
x

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮೊಳಗಿದ 'ದಲಿತ ಸಿಎಂ' ಕೂಗು: ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚು

ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳ ನಡುವೆ, ದಲಿತ ನಾಯಕರಿಗೇ ಪಟ್ಟ ಕಟ್ಟಬೇಕೆಂಬ ಒತ್ತಡಗಳು ಹೆಚ್ಚಾಗಿವೆ. ಈ ಬಗ್ಗೆ ಸಚಿವರು, ಶಾಸಕರು ಸಹ ಧ್ವನಿಗೂಡಿಸುತ್ತಿದ್ದಾರೆ.


ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ 'ದಲಿತ ಮುಖ್ಯಮಂತ್ರಿ' ಕೂಗು ಪ್ರತಿಧ್ವನಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಧಾರವಾದರೆ ಆ ಸ್ಥಾನಕ್ಕೆ ದಲಿತ ನಾಯಕರನ್ನೇ ಆಯ್ಕೆ ಮಾಡಬೇಕೆಂದು ಸಿಎಂ ಆಪ್ತ ವಲಯದ ಸಚಿವರು ಹಾಗೂ ಶಾಸಕರು ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಚಿವರಾದ ಸತೀಶ್‌ ಜಾರಕಿಹೊಳಿ, ಡಾ.ಜಿ. ಪರಮೇಶ್ವರ್‌, ಮಾಜಿ ಸಚಿವ ಕೆ.ಎನ್‌.ರಾಜಣ್ಣ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಹಲವರು ನೇರವಾಗಿಯೇ ದಲಿತ ಸಿಎಂ ಹಕ್ಕು ಪ್ರತಿಪಾದನೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ದಲಿತ ಸಿಎಂ ಕೂಗು ಹಾಗೂ ದಲಿತರಿಗೇ ಪಟ್ಟ ಕಟ್ಟುವ ಲಕ್ಷಣಗಳು ಗೋಚರಿಸುತ್ತಿವೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನಾರಾಯಣಸ್ವಾಮಿ ಅವರು, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಅಥವಾ ಸತೀಶ್ ಜಾರಕಿಹೊಳಿ ಅವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಲಿ ಎಂದು ಹೇಳುವುದರೊಂದಿಗೆ ಡಾ. ಜಿ. ಪರಮೇಶ್ವರ್ ಅವರ ಸಾಮರ್ಥ್ಯವನ್ನೂ ವಿಶ್ಲೇಷಿಸಿದ್ದಾರೆ.

ಪರಮೇಶ್ವರ್‌ ಅವರ ರಾಜಕೀಯ ಮುತ್ಸದ್ಧಿತನವನ್ನು ಯಾರೂ ಪ್ರಶ್ನಿಸುವಂತಿಲ್ಲ. ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದರಲ್ಲದೇ ಉಪಮುಖ್ಯಮಂತ್ರಿಯಾಗಿ ಮತ್ತು ಸಚಿವರಾಗಿಯೂ ಉತ್ತಮ ಆಡಳಿತ ನೀಡಿದ್ದಾರೆ. ಅವರಿಗೆ ಸಿಎಂ ಸ್ಥಾನ ನೀಡುವುದಾದರೆ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ

"ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಮುಂದುವರೆಸಿದರೆ ನಮಗೆ ಅಭ್ಯಂತರವಿಲ್ಲ. ಒಂದು ವೇಳೆ ಅವರನ್ನು ಬದಲಿಸುವ ಸಂದರ್ಭ ಎದುರಾದರೆ ಮಾತ್ರ ಹೈಕಮಾಂಡ್ ನಾಯಕರು, ದಲಿತ ನಾಯಕತ್ವದ ಬಗ್ಗೆ ಸೂಕ್ತ ತೀರ್ಮಾನ ಮಾಡಬೇಕು. ನಾಯಕತ್ವ ಬದಲಾವಣೆಯ ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ." ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕ ನಾರಾಯಣಸ್ವಾಮಿ ಅವರ ಈ ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು, "ನನ್ನನ್ನು ಸಿಎಂ ಮಾಡಿ ಎಂದು ಬೆಂಬಲಿಗರು ಹೇಳಿದರೆ ಬೇಡ ಎನ್ನಲಾಗಲ್ಲ. ನಾನು ಸಿಎಂ ಗಾದಿಗೆ ಲಾಬಿ ಮಾಡಿಲ್ಲ. ನನ್ನ‌ ಪರ ಮಾತನಾಡಿದರೆ ಬೇಡ ಎನ್ನಲು ಆಗಲ್ಲ" ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಚರ್ಚೆಯ ಬೆನ್ನಲ್ಲೇ 'ದಲಿತ ಕಾರ್ಡ್' ಮುನ್ನೆಲೆಗೆ ಬಂದಿರುವುದು ಹೊಸ ರಾಜಕೀಯ ತಿರುವು ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಾಯಕರಿಗೂ ಇದೆ ಆಸೆ

"ನಾನು ಸಿಎಂ ಆಗಲು ಎಲ್ಲಾ ಅರ್ಹತೆ ಹೊಂದಿದ್ದೇನೆ. ಹೈಕಮಾಂಡ್ ಅವಕಾಶ ನೀಡಿದರೆ ಜವಾಬ್ದಾರಿ ನಿಭಾಯಿಸಲು ಸಿದ್ಧ. ಆದರೆ ಸದ್ಯಕ್ಕೆ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ, ಅವರ ನಾಯಕತ್ವದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ." ಎಂದು ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿಕೆ ನೀಡಿದ್ದರು. ಇದರೊಂದಿಗೆ ತಮ್ಮ ನಿವಾಸಲ್ಲಿ ದಲಿತ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ಎಚ್.ಸಿ. ಮಹದೇವಪ್ಪ ಅವರೊಂದಿಗೆ ಸರಣಿ ಸಭೆಗಳು ನಡೆಸಿದ್ದರು. ಸತೀಶ್‌ ಜಾರಕಿಹೊಳಿ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, "ದಲಿತ ಸಿಎಂ ಆಗಬೇಕು ಎನ್ನುವುದು ಸಮುದಾಯದ ದಶಕಗಳ ಬೇಡಿಕೆ. ಇದರಲ್ಲಿ ತಪ್ಪೇನಿಲ್ಲ. ಹೈಕಮಾಂಡ್ ತೀರ್ಮಾನಿಸಿದರೆ ನಾವು ಸಿದ್ಧರಿದ್ದೇವೆ." ಎಂದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಸಚಿವ ಎಚ್‌.ಸಿ.ಮಹದೇವಪ್ಪ ಈ ಬಗ್ಗೆ ಮಾತನಾಡಿದ್ದು , "ಅರ್ಹತೆ ಇರುವ ಯಾರು ಬೇಕಾದರೂ ಸಿಎಂ ಆಗಬಹುದು. ದಲಿತ ಸಮುದಾಯಕ್ಕೆ ಈ ಅವಕಾಶ ಸಿಗಬೇಕು ಎನ್ನುವ ಆಶಯ ನ್ಯಾಯಯುತವಾದುದು." ಎಂದಿದ್ದರು.

ಸಚಿವ ಕೆ.ಎಚ್‌.ಮುನಿಯಪ್ಪ ಸಹ ಮಾಧ್ಯಮಗಳೊಂದಿಗೆ ಮಾತನಾಡಿ, "ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದವಿದ್ದರೆ, ಅದರ ನಡುವೆ ದಲಿತರಿಗೂ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಯೋಚಿಸಬೇಕು. ಹಿರಿಯ ದಲಿತ ನಾಯಕರಿಗೆ ಈ ಬಾರಿ ಆದ್ಯತೆ ಸಿಗಬೇಕು." ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌, ನೇರವಾಗಿ ಸಿದ್ದರಾಮಯ್ಯ ವಿರುದ್ಧವೇ ಅಸಮಾಧಾನ ವ್ಯಕ್ತ ಪಡಿಸಿದ್ದರು. "ಹಿಂದುಳಿದ ಮತ್ತು ದಲಿತ ವರ್ಗದ ನಾಯಕರನ್ನು ತುಳಿಯುವ ಕೆಲಸ ನಡೆಯುತ್ತಿದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸಾಮಾಜಿಕ ನ್ಯಾಯದ ಭಾಗವಾಗಬೇಕು." ಎಂದು ಹೇಳಿಕೆ ನೀಡಿದ್ದರು.

ಅಧಿಕಾರ ತ್ಯಾಗದ ಪರೋಕ್ಷ ಸುಳಿವು

ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಜೆಡಿಎಸ್‌ ನಾಯಕರ ಟೀಕೆಗೆ ಎಕ್ಸ್‌ ಖಾತೆಯಲ್ಲಿ ತಿರುಗೇಟು ನೀಡುವಾಗ, ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಬೆಳೆಸಿದೆ. ಆದರೆ, ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ಹೊರತುಪಡಿಸಿ ಯಾರಾದರೂ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದ ಪರವಾಗಿದೆ. ಈ ಸೈದ್ಧಾಂತಿಕ ಬದ್ಧತೆಯನ್ನು ಕೇವಲ ಮಾತಿನ ಮೂಲಕ ಮಾತ್ರವಲ್ಲ, ಕೃತಿಯ ಮೂಲಕವೂ ಮಾಡಿ ತೋರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು ಮುಖ್ಯಮಂತ್ರಿಗಳಾಗಿದ್ದಾರೆ. ಹಿಂದುಳಿದ ಜಾತಿಗೆ ಸೇರಿದ ನನ್ನನ್ನು ಗುರುತಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಜೆಡಿಎಸ್‌ ವಿರುದ್ಧ ಗುಡುಗಿದ್ದರು.

ಜಾತಿಯಿಂದ ಮಾತ್ರವಲ್ಲ, ಅರ್ಹತೆಯ ಬಲದಿಂದಲೇ ಮುಖ್ಯಮಂತ್ರಿಯಾಗುವಂತಹ ದಲಿತ ಸಮುದಾಯದ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಮುಂದೊಂದು ದಿನ ದಲಿತ ಸಮುದಾಯದಿಂದ ಯಾರಾದರೂ ರಾಜ್ಯದ ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ ಎಂಬ ಹೇಳಿಕೆ ಅಧಿಕಾರದ ತ್ಯಾಗ ಮಾಡುವ ಸಾಧ್ಯತೆಗಳ ಚರ್ಚೆಗೆ ನಾಂದಿ ಹಾಡಿತ್ತು.

ಇದಲ್ಲದೇ ಇತ್ತೀಚೆಗೆ,ಸಿದ್ದರಾಮಯ್ಯ ಅವರು "ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಆಸೆ ಪಡಬಹುದು, ಅದರಲ್ಲಿ ತಪ್ಪಿಲ್ಲ. ಆದರೆ ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ." ಎಂದಿದ್ದರು. ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಾವು ಕೂಡ ಮುಖ್ಯಮಂತ್ರಿಯಾಗಬೇಕೆಂಬ ಹಠದಿಂದ ದೆಹಲಿಯ ಹೈಕಮಾಂಡ್‌ ಕದ ತಟ್ಟುತ್ತಿದ್ದಾರೆ. ದಲಿತ ಸಿಎಂ ಕೂಗು ಸಹ ಡಿಕೆಶಿಗೆ ತಲೆನೋವಾಗಿ ಪರಿಣಮಿಸಿದೆ.

Read More
Next Story