
ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಸೂಚಿಸಿದರೆ ಪದತ್ಯಾಗಕ್ಕೂ ಸೈ: ಸಿದ್ದರಾಮಯ್ಯ ಪರ ಕೆ.ಎನ್. ರಾಜಣ್ಣ ಭರ್ಜರಿ ಬ್ಯಾಟಿಂಗ್
ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಇದರಲ್ಲಿ ಪಕ್ಷದ ಭವಿಷ್ಯ ಅಡಗಿದೆ ಎಂದು ಹೇಳುವ ಮೂಲಕ ಡಿಕೆಶಿಯನ್ನು ಸಿಎಂ ಗಾದಿಯಲ್ಲಿ ಕೂರಿಸುವ ಪ್ರಯತ್ನಕ್ಕೆ ರಾಜಣ್ಣ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಮಾಜಿ ಸಚಿವ ಹಾಗೂ ಸಿಎಂ ಆಪ್ತ ಕೆ.ಎನ್. ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. "ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ತ್ಯಜಿಸಲು ಸಿದ್ಧರಾಗಿದ್ದಾರೆ ಹಾಗೂ ಮುಂದುವರಿಯಲೂ ಸಿದ್ಧರಾಗಿದ್ದಾರೆ" ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಜೊತೆಗೆ ಸಿಎಂ ಗಾದಿಗಾಗಿ ಕಸರತ್ತು ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ನಾಯಕತ್ವದ ಕುರಿತ ಗೊಂದಲಗಳನ್ನು ಹೈಕಮಾಂಡ್ ಕೂಡಲೇ ಬಗೆಹರಿಸಬೇಕು. ಗೊಂದಲ ಮುಂದುವರಿಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು, ಇದು ರಾಜ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಇದರಲ್ಲಿ ಪಕ್ಷದ ಭವಿಷ್ಯ ಅಡಗಿದೆ ಎಂದು ಹೇಳುವ ಮೂಲಕ ಡಿಕೆಶಿಯನ್ನು ಸಿಎಂ ಗಾದಿಯಲ್ಲಿ ಕೂರಿಸುವ ಪ್ರಯತ್ನಕ್ಕೆ ರಾಜಣ್ಣ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ನಿರ್ಧಾರಕ್ಕೆ ಸಿಎಂ ಬದ್ಧ
ಸಿಎಂ ಸಿದ್ದರಾಮಯ್ಯನವರ ಮನಸ್ಥಿತಿ ಬಗ್ಗೆ ವಿವರಿಸಿದ ರಾಜಣ್ಣ, "ಮುಖ್ಯಮಂತ್ರಿಗಳು ಓಪನ್ ಮೈಂಡ್ (ಮುಕ್ತ ಮನಸ್ಸು) ನಲ್ಲಿದ್ದಾರೆ. ನಾವೆಲ್ಲಾ ಸಭೆ ಮಾಡಿದಾಗಲೂ, 'ರಾಹುಲ್ ಗಾಂಧಿಯವರು ಏನು ಸೂಚನೆ ನೀಡುತ್ತಾರೋ ಅದನ್ನು ಚಾಚೂತಪ್ಪದೆ ಪಾಲಿಸುತ್ತೇನೆ. ರಾಹುಲ್ ಗಾಂಧಿ ಅವರ ತೀರ್ಮಾನದಂತೆ ನಡೆಯೋಣ, ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಬೇಕು' ಎಂದು ಸಿಎಂ ನಮ್ಮ ಬಳಿ ಹೇಳಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಕಳೆದುಕೊಂಡವರು ಮತ್ತೆ ಗಳಿಸುತ್ತಾರೆ ಎಂಬ ಸತ್ಯ ಅವರಿಗೆ ಗೊತ್ತಿದೆ" ಎಂದರು. ಆದರೂ, ಸಿದ್ದರಾಮಯ್ಯನವರ ಬೆನ್ನಿಗೆ ಬಲವಾಗಿ ನಿಂತಿರುವ ಆಪ್ತರು, ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ನಾವೆಲ್ಲರೂ ಹೈಕಮಾಂಡ್‌ಗೆ ಒಕ್ಕೊರಲಿನಿಂದ ಒತ್ತಾಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ದಲಿತ ಸಿಎಂ, ಅಹಿಂದ ಅಸಮಾಧಾನದ ಬಗ್ಗೆ ಅಚ್ಚರಿಯ ನುಡಿ
ಇದೇ ವೇಳೆ ತಮ್ಮ ಹಳೆಯ ನಿಲುವನ್ನು ಸಮರ್ಥಿಸಿಕೊಂಡ ರಾಜಣ್ಣ, "ರಾಜ್ಯದಲ್ಲಿ ದಲಿತರು ಸಿಎಂ ಆಗಬೇಕು ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಪ್ರಸ್ತುತ ಅಹಿಂದ ವರ್ಗದವರು ನಿಜವಾಗಿಯೂ ಸಮಾಧಾನವಾಗಿಲ್ಲ. 2013-18ರ ಅವಧಿಯಲ್ಲಿದ್ದ ಸಿದ್ದರಾಮಯ್ಯನವರಿಗೂ, ಈ ಅವಧಿಯ ಸಿದ್ದರಾಮಯ್ಯನವರಿಗೂ ಬಹಳ ವ್ಯತ್ಯಾಸವಿದೆ" ಎಂದು ಅಚ್ಚರಿಯ ಮಾತುಗಳನ್ನಾಡಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳ ಕಾಲಾವಕಾಶವಿದ್ದು, ರಾಜಕಾರಣದಲ್ಲಿ ಬಹಳಷ್ಟು ನೀರು ಹರಿಯಬೇಕಾದ ಸಮಯವಿದೆ. ಮುಂದಿನ ರಾಜಕೀಯ ಹೇಗಾಗಬಹುದು ಎಂದು ಈಗಲೇ ಊಹಿಸಲು ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಪಕ್ಷದ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಕೆ.ಎನ್. ರಾಜಣ್ಣ ಭರವಸೆ ವ್ಯಕ್ತಪಡಿಸಿದರು.

