
'ಪ್ರೀತಿಸಿದ್ದು ಕಾಂಗ್ರೆಸ್‌ನ, ಮದುವೆಯಾಗಿದ್ದು ಮೋದಿಯನ್ನ': ರಾಜ್ಯಸಭೆಯಲ್ಲಿ ಖರ್ಗೆ-ದೇವೇಗೌಡರ 'ಲಗ್ನ' ಚಕಮಕಿ!
ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಪತ್ರವೊಂದನ್ನು ಹಂಚಿಕೊಂಡಿರುವ ಅವರು, 2018ರಲ್ಲಿ ಕರ್ನಾಟಕದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಒಂದು 'ಬಲವಂತದ ಮದುವೆ' ಎಂದಿದ್ದಾರೆ.
ರಾಜ್ಯಸಭೆಯ ನಿವೃತ್ತ ಸದಸ್ಯರ ಬೀಳ್ಕೊಡುಗೆ ಸಮಾರಂಭವು ಕರ್ನಾಟಕದ ಇಬ್ಬರು ಹಿರಿಯ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್.ಡಿ. ದೇವೇಗೌಡರ ನಡುವಿನ ಸ್ವಾರಸ್ಯಕರ 'ಮದುವೆ' ಚರ್ಚೆಗೆ ಸಾಕ್ಷಿಯಾಗಿದೆ. ರಾಜಕೀಯದ ಜಂಜಾಟಗಳ ನಡುವೆಯೂ ಈ ಹಿರಿಯ ನಾಯಕರು ಸಿಡಿಸಿದ ಹಾಸ್ಯ ಚಟಾಕಿಗಳು ಇಡೀ ಸದನದಲ್ಲಿ ನಗೆಯಲೆ ಮೂಡಿಸಿದವು. ಕಲಾಪದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಸ್ತುತ ಎನ್‌ಡಿಎ ಮೈತ್ರಿಕೂಟದಲ್ಲಿರುವ ದೇವೇಗೌಡರನ್ನು ಉಲ್ಲೇಖಿಸಿ, "ನೀವು ಪ್ರೀತಿಸಿದ್ದು ಕಾಂಗ್ರೆಸ್ ಪಕ್ಷವನ್ನು, ಆದರೆ ಮದುವೆಯಾಗಿದ್ದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು" ಎಂದು ಕಾಲೆಳೆದರು. ಖರ್ಗೆಯವರ ಈ ಮಾರ್ಮಿಕ ಹಾಗೂ ಹಾಸ್ಯಭರಿತ ಮಾತಿಗೆ ಇಡೀ ರಾಜ್ಯಸಭೆ ಒಮ್ಮೆಲೆ ಗೊಳ್ಳೆಂದು ನಕ್ಕಿತು.
ಖರ್ಗೆಯವರ ಈ 'ಲವ್ ಆ್ಯಂಡ್ ಮ್ಯಾರೇಜ್' ಕಮೆಂಟ್‌ಗೆ ಮಾಜಿ ಪ್ರಧಾನಿ ದೇವೇಗೌಡರು ಅಷ್ಟೇ ತಮಾಷೆಯಾಗಿ, ಆದರೆ ರಾಜಕೀಯ ಅರ್ಥಗರ್ಭಿತವಾಗಿ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಪತ್ರವೊಂದನ್ನು ಹಂಚಿಕೊಂಡಿರುವ ಅವರು, 2018ರಲ್ಲಿ ಕರ್ನಾಟಕದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಒಂದು 'ಬಲವಂತದ ಮದುವೆ' ಎಂದು ಹೇಳಿಕೊಂಡಿದ್ದಾರೆ. ಮದುವೆಯಾದ ಮೇಲೆ ಆ ಸಂಬಂಧದಲ್ಲಿ ಯಾವುದೇ ಪ್ರೀತಿ ಉಳಿಯಲಿಲ್ಲ, ಬದಲಾಗಿ ನಿರಂತರ ಕಿರುಕುಳ ಹಾಗೂ ದೌರ್ಜನ್ಯಗಳೇ ತುಂಬಿದ್ದವು ಎಂದು ಅವರು ಹಾಸ್ಯದ ಲೇಪನದೊಂದಿಗೆ ಹಳೆಯ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ನಿಮ್ಮೊಂದಿಗೆ ಬಲವಂತವಾಗಿ ಮಾಡಿದ್ದ ಆ ಮದುವೆಯಲ್ಲಿ ನೆಮ್ಮದಿ ಇರಲಿಲ್ಲ ಎಂದು ಅವರು ಕಾಂಗ್ರೆಸ್ ನಾಯಕರ ಮಾತಿಗೆ ಎದಿರೇಟು ನೀಡಿದ್ದಾರೆ.
ಸ್ಥಿರ ದ ಸಂಬಂಧದತ್ತ ಹೆಜ್ಜೆ ಹಾಕಿದ ಅನಿವಾರ್ಯತೆ
ಆ ಬಲವಂತದ ಮದುವೆ ಮುರಿದುಬೀಳಲು ಕಾರಣಗಳೇನು ಎಂಬುದನ್ನೂ ದೇವೇಗೌಡರು ತಮ್ಮ ಪ್ರತಿಕ್ರಿಯೆಯಲ್ಲಿ ಹಾಸ್ಯಭರಿತವಾಗಿಯೇ ವಿವರಿಸಿದ್ದಾರೆ. 2019ರಲ್ಲಿ ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಿದ್ದರಿಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ 'ಸಂಸಾರ' ಪತನಗೊಂಡಿತು. ಒಟ್ಟಿಗೆ ಸಂಸಾರ ಮಾಡಬೇಕಾದವರೇ ಕೈಕೊಟ್ಟು ಹೋದಾಗ, ಅನಿವಾರ್ಯವಾಗಿ ಜೆಡಿಎಸ್ ಪಕ್ಷವು ಭವಿಷ್ಯದ ದೃಷ್ಟಿಯಿಂದ ಹೆಚ್ಚು 'ಸ್ಥಿರವಾದ ಹಾಗೂ ನೆಮ್ಮದಿಯ ಸಂಬಂಧವನ್ನು' ಹುಡುಕಬೇಕಾಯಿತು ಎಂದು ಅವರು ಬಿಜೆಪಿ ಜೊತೆಗಿನ ತಮ್ಮ ಪ್ರಸ್ತುತ ರಾಜಕೀಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ 'ಆಪರೇಷನ್ ಕಮಲ'ದ ಕಾಲದ ಕಹಿ ನೆನಪುಗಳನ್ನು ನೆನಪಿಸುತ್ತಲೇ, ಖರ್ಗೆಯವರ ಹಾಸ್ಯಕ್ಕೆ ಅಷ್ಟೇ ಚತುರತೆಯಿಂದ ಗೌಡರು ಜವಾಬು ನೀಡಿದ್ದು, ರಾಜಕೀಯ ವಲಯದಲ್ಲಿ ಈ 'ಮದುವೆ ಪ್ರಹಸನ' ಭಾರಿ ಚರ್ಚೆಗೆ ಗ್ರಾಸವಾಗಿದೆ.

