
Sunil Kanugolu| ಸಿದ್ದರಾಮಯ್ಯ ಸಲಹೆಗಾರ ಸುನಿಲ್ ಕನುಗೋಲು ತಂತ್ರಕ್ಕೆ ಕೇರಳ ಎಡರಂಗ ʼಟ್ರೋಲ್ʼ ಮಂತ್ರ!
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕ ಮೂಲದ ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ಅವರನ್ನು ನಿಯೋಜಿಸಿದೆ. ಕೇರಳ ಆಡಳಿತಾರೂಢ ಎಡರಂಗ ಈಗ ನೇರ ಪ್ರಹಾರ ನಡೆಸಿದೆ.
ರಾಜಕೀಯ ಚದುರಂಗದಾಟದಲ್ಲಿ ತಂತ್ರಗಾರಿಕೆಯೇ ಗೆಲುವಿನ ನಿರ್ಣಾಯಕ ಅಂಶ ಎಂಬುದು ಹಿಂದಿನ ಹಲವಾರು ಫಲಿತಾಂಶಗಳಲ್ಲಿ ಸಾಬೀತಾಗಿದೆ. ಅಂತೆಯೇ 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಪಡೆದಾಗ ಸುನೀಲ್ ಕನುಗೋಲು ಎಂಬ ಚುನಾವಣಾ ತಂತ್ರಜ್ಞರ ಹೆಸರು ಮುನ್ನೆಲೆಗೆ ಬಂತು.
ಇದೀಗ ಅವರಿಗೆ ಕೇರಳ ವಿಧಾನಸಭಾ ಚುನಾವಣೆ 2026 ಹಾಗೂ ಅಸ್ಸಾಂ ಚುನಾವಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ವಹಿಸಿದೆ. ಮೂಲತಃ ಕರ್ನಾಟಕದ ಬಳ್ಳಾರಿ ಜಿಲ್ಲೆಯವರಾದ ಸುನೀಲ್ ಕನುಗೋಲು ಅವರು ಕೇರಳ ರಾಜಕೀಯ ರಣರಂಗ ಪ್ರವೇಶಿಸುತ್ತಿದ್ಧಂತೆ ಅಲ್ಲಿನ ಆಡಳಿತಾರೂಢ ಎಡಪಕ್ಷಗಳ ಪ್ರಬಲ ಟೀಕೆಗಳನ್ನು ಎದುರಿಸಿದ್ದಾರೆ.
ʼಅವರೊಬ್ಬ ಅಸಮರ್ಥʼ ಎಂಬುದು ಮೊದಲ ಟೀಕೆಯಾದರೆ, ಪ್ರಧಾನಿ ನರೇಂದ್ರ ಮೋದಿ ಟೀಮ್ನಲ್ಲಿ ಕೆಲಸ ಮಾಡಿದವರು ಎಂಬ ಎರಡನೇ ಬಲವಾದ ಆರೋಪ. ಈ ಎಲ್ಲ ಹಿನ್ನೆಲೆಯಲ್ಲಿ ಸುನಿಲ್ ಕನುಗೋಲು ಹೆಸ ಮತ್ತೊಮ್ಮೆ ಯಶಸ್ಸು ಸಾಧಿಸುವರೇ ಎಂಬ ಚರ್ಚೆಗಳು ಶುರುವಾಗಿವೆ.
ಕರ್ನಾಟಕ ಮಾಡೆಲ್ ತಂತ್ರಗಾರಿಕೆ
ಅಂದ ಹಾಗೆ ಸುನೀಲ್ ಕನುಗೋಲು ಅವರು ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದದ್ದು ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಭರ್ಜರಿ ಗೆಲುವಿನ ಮೂಲಕ. ಬಿಜೆಪಿಯ ಆಡಳಿತದ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವಲ್ಲಿ ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ತೆರೆಮರೆಯ ತಂತ್ರಗಳು ನಿಖರವಾಗಿ ಕೆಲಸ ಮಾಡಿದ್ದವು ಎಂದು ಆಗ ವಿಶ್ಲೇಷಣೆಗಳನ್ನು ಮಾಡಲಾಗಿತ್ತು.
ವಿಶೇಷವಾಗಿ ಕರ್ನಾಟಕದಲ್ಲಿ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಆರ್ಥಿಕ ಸ್ಥಿತಿಗತಿ, ಭ್ರಷ್ಟಾಚಾರದಂತಹ ವಿಷಯಗಳ ಮುನ್ನೆಲೆಗೆ ಬರುವಂತೆ ಮಾಡಿದ್ದಲ್ಲದೆ ಬರದಂತೆ ತಡೆದು, ಆಕರ್ಷಕ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿಸುವ ಮೂಲಕ ಮತದಾರರನ್ನು ಸೆಳೆಯುವಲ್ಲಿ ಕನುಗೋಲು ಯಶಸ್ವಿಯಾಗಿದ್ದರು. ಇದೀಗ ಅದೇ ಕರ್ನಾಟಕ ಮಾಡೆಲ್ ಮತ್ತು ತೆಲಂಗಾಣದ ಗೆಲುವಿನ ಸೂತ್ರವನ್ನು ಕೇರಳದಲ್ಲಿಯೂ ಅಳವಡಿಸಿಕೊಳ್ಳಲು ಕಾಂಗ್ರೆಸ್ ಯೋಜನೆ ರೂಪಿಸಿದಂತಿದೆ. ಸತತ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರವನ್ನು ಮಣಿಸಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಕನುಗೋಲು ಹೆಜ್ಜೆ ಇಟ್ಟಿದ್ದಾರೆ.
ಭರ್ಜರಿ ಕ್ಷೇತ್ರ ಕಾರ್ಯ
ಹೊಸ ಜವಾಬ್ದಾರಿಯನ್ನು ಹೊತ್ತಿರುವ ಸುನೀಲ್ ಕನುಗೋಲು ಅವರ ತಂಡ ಜನವರಿಯಿಂದಲೇ ಕೇರಳದಲ್ಲಿ ಬೀಡುಬಿಟ್ಟಿದೆ. ರಾಜ್ಯದಾದ್ಯಂತ ಮತದಾರರ ನಾಡಿಮಿಡಿತ ತಿಳಿಯಲು ವ್ಯಾಪಕ ಸಮೀಕ್ಷೆಗಳನ್ನು ನಡೆಸಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮತ್ತು ಪ್ರಚಾರದ ರೂಪುರೇಷೆಗಳ ವಿಷಯದಲ್ಲಿ ಕೇರಳ ಕಾಂಗ್ರೆಸ್ ಕನುಗೋಲು ಅವರ ಸಲಹೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.
ಇದರ ಭಾಗವಾಗಿಯೇ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ 'ಲಕ್ಷ್ಯ 2026' ಎಂಬ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಮುಂಬರುವ ಚುನಾವಣೆಯನ್ನು ಎದುರಿಸಲು ಸಿದ್ಧಪಡಿಸಿದ ಸಮಗ್ರ ಕ್ರಿಯಾಯೋಜನೆಯನ್ನು ಈ ವೇದಿಕೆಯಲ್ಲಿ ಮಂಡಿಸಲಾಗಿದೆ. ಎಡರಂಗ ಮತ್ತು ಸಂಯುಕ್ತ ರಂಗಗಳ ನಡುವಿನ ನೇರ ಹಣಾಹಣಿಯ ಜೊತೆಗೆ ಕೆಲವೆಡೆ ಬಿಜೆಪಿ ಕೂಡ ತನ್ನ ಅಸ್ತಿತ್ವವನ್ನು ಪ್ರದರ್ಶಿಸುತ್ತಿರುವ ಕೇರಳದ ಸಂಕೀರ್ಣ ರಾಜಕೀಯ ಸನ್ನಿವೇಶದಲ್ಲಿ ಕನುಗೋಲು ಅವರ ಪ್ರತಿಯೊಂದು ನಡೆಯೂ ಕುತೂಹಲ ಕೆರಳಿಸಿದೆ. ಕನುಗೋಲು ಅವರ ಕಾಂಗ್ರೆಸ್ ಚುನಾವಣಾ ತಂತ್ರ ಹಾಗೂ ಸಮೀಕ್ಷೆಯು ಮುಂಬರುವ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ 90 ಕ್ಕೂ ಹೆಚ್ಚು ಸ್ಥಾನಗಳು ಒಲಿಯಲಿವೆ ಎಂಬ ವಿಶ್ವಾಸವನ್ನು ಮೂಡಿಸಿದೆ. ಆದರೆ, ಗೆಲುವು ಅಷ್ಟು ಸುಲಭವೇ?
ನಾಯಕರ ಟೀಕಾಪ್ರಹಾರ
ಕರ್ನಾಟಕದಲ್ಲಿ ತೆರೆಮರೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡಿದ್ದ ಸುನೀಲ್ ಕನುಗೋಲು ಅವರಿಗೆ ಕೇರಳದಲ್ಲಿ ಮಾತ್ರ ಆರಂಭದಲ್ಲೇ ಪ್ರಬಲ ವಿರೋಧ ವ್ಯಕ್ತವಾಗಿದೆ. ಆಡಳಿತಾರೂಢ ಸಿಪಿಎಂ ನೇತೃತ್ವದ ಎಡರಂಗದ ನಾಯಕರು ಕನುಗೋಲು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸತತವಾಗಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಕನುಗೋಲು ವಿರುದ್ಧ ಮೊದಲ ಟೀಕಾಪ್ರಹಾರ ನಡೆಸಿದ್ದರು. ತದನಂತರ ಅಲ್ಲಿನ ಶಾಸಕ ಎಂ. ಸ್ವರಾಜ್ ಅವರು ಕನುಗೋಲು ಅವರ ಸಮೀಕ್ಷಾ ವರದಿಯನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿದೆ ಎಂಬುದನ್ನು ಪತ್ತೆಹಚ್ಚಲು ಕಾಂಗ್ರೆಸ್ ಪಕ್ಷವು ಕನುಗೋಲು ಅವರಿಗೆ 50 ಕೋಟಿ ರೂಪಾಯಿ ನೀಡಿದೆ ಎಂದು ಟೀಕಿಸಿದ್ದಾರೆ.
"ಈ ಮೂರ್ಖತನದ ಸಂಶೋಧನೆಗೆ ಕೋಟಿಗಟ್ಟಲೆ ಸುರಿಯುವ ಬದಲು ನಮ್ಮನ್ನೇ ಕೇಳಿದ್ದರೆ, ಒಂದು ನಯಾಪೈಸೆ ಖರ್ಚಿಲ್ಲದೆ ಈ ಮಾಹಿತಿ ನೀಡುತ್ತಿದ್ದೆವು," ಎಂದು ಸ್ವರಾಜ್ ವ್ಯಂಗ್ಯವಾಡಿದ್ದಾರೆ. ಇದರ ಬೆನ್ನಲ್ಲೇ ಎಡರಂಗದ ಸೋಶಿಯಲ್ ಮೀಡಿಯಾ ತಂಡಗಳು ಎಲ್‌ಡಿಎಫ್ ಟ್ರೋಲ್ ಕಾರ್ಯಾಚರಣೆಯ ಮುಖಾಂತರ ಕನುಗೋಲು ತಂಡವನ್ನು ಆರಂಭದಲ್ಲೇ ತಬ್ಬಿಬ್ಬು ಮಾಡುವ ತಂತ್ರ ಅನುಸರಿಸುತ್ತಿವೆ.
ಮೋದಿ ಏಜೆಂಟ್ ಆರೋಪ
ಕೇರಳದಲ್ಲಿ ಸುನೀಲ್ ಕನುಗೋಲು ಅವರಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗುತ್ತಿರುವುದು ಅವರ ಹಿಂದಿನ ವೃತ್ತಿಪರ ಸಂಬಂಧಗಳು. ಆರಂಭದಲ್ಲಿ ಮಲಯಾಳಂ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟಗೊಂಡಿದ್ದವು. ಇವೆಲ್ಲವೂ ಪ್ರಚಾರ ತಂತ್ರ, ಸ್ವಯಂ ಪ್ರಶಂಸೆ ಎಂಬುದು ಎಡಪಕ್ಷಗಳ ಆರೋಪ. ಅಲ್ಲದೆ, ತಮ್ಮ ಕುರಿತು ಬರೆಸಿಕೊಂಡಿದ್ದ ಪಿಆರ್ ಲೇಖನಗಳೇ ಈಗ ಅವರಿಗೆ ತಿರುಗುಬಾಣವಾಗಿದೆ ಎಂದೂ ಲೇವಡಿ ಮಾಡುತ್ತಿದ್ದಾರೆ.
ಈ ಹಿಂದೆ ದೇಶ ಕಂಡ ಯಶಸ್ವಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ತಂಡದಲ್ಲಿದ್ದ ಕನುಗೋಲು ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಕೆಲಸ ಮಾಡಿದ್ದರು ಎಂಬ ವಿಚಾರವನ್ನೇ ಎಡರಂಗ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಐವತ್ತು ಕೋಟಿ ರೂಪಾಯಿ ನೀಡಿ ಬುಕ್ ಮಾಡಿರುವ ಈ ವ್ಯಕ್ತಿ ʼನರೇಂದ್ರ ಮೋದಿಯ ಏಜೆಂಟ್ʼ ಎಂದು ಎಲ್ ಡಿ ಎಫ್ ಸೈಬರ್ ವಿಭಾಗ ವ್ಯಾಪಕವಾಗಿ ಟೀಕಿಸುತ್ತಿದೆ.
ಕರ್ನಾಟಕದಲ್ಲಿ ಪ್ರತಿಪಕ್ಷಗಳ ಮೌನ!
ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕ ಸರ್ಕಾರದ ಸಲಹೆಗಾರರಾಗಿರುವ ಕನುಗೋಲು ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕಚೇರಿ ಹೊಂದಿದ್ದಾರೆ. ಚುನಾವಣಾ ಕಾರ್ಯಕ್ಕೆ ಅನ್ಯ ರಾಜ್ಯಗಳನ್ನು ಸುತ್ತುವ ಅವರು ಬೆಂಗಳೂರಿನ ಕಚೇರಿಗೆ ಹಾಜರಾಗದೆ ಸರ್ಕಾರಿ ಖಜಾನೆಯಿಂದ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ ಎಂಬ ಆರೋಪವನ್ನು ಕೇರಳದ ನಾಯಕರು ಮಾಡುತ್ತಿದ್ದಾರೆ.
"ಸುನೀಲ್ ಅವರು ಕೇರಳದ ಚುನಾವಣಾ ರಾಜಕೀಯದಲ್ಲಿ ತೊಡಗಿಕೊಂಡಿರುವುದರ ಬಗ್ಗೆ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸಂಪೂರ್ಣ ಮೌನ ವಹಿಸಿದೆ. ಅದಕ್ಕೆ ಅವರು ಮೋದಿಯ ಏಜೆಂಟ್ ಆಗಿರುವುದೇ ಕಾರಣ," ಎಂದು ಎಡಪಕ್ಷಗಳ ನೇತಾರರು ಆರೋಪಿಸಿದ್ದಾರೆ.
ಕನುಗೋಲು ಎಲ್ಲಿಯವರು?
ಸುನೀಲ್ ಕನುಗೋಲು ಅವರು ಕೌಟುಂಬಿಕ ಬೇರುಗಳು ಬಳ್ಳಾರಿ ಮೂಲದ್ದು. ಆದರೆ, ಅವರು ಬೆಳೆದದ್ದು ಮತ್ತು ಪ್ರಾಥಮಿಕ ಶಿಕ್ಷಣವನ್ನು ಪಡೆದದ್ದು ತಮಿಳುನಾಡಿನ ಚೆನ್ನೈನಲ್ಲಿ. ತರುವಾಯ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳಿದ ಅವರು, ಅಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಅಮೆರಿಕಾದಲ್ಲಿನ ಕಾರ್ಪೊರೇಟ್ ವೃತ್ತಿಯನ್ನು ತೊರೆದು ಭಾರತಕ್ಕೆ ಮರಳಿದ ಬಳಿಕ, ಪ್ರಶಾಂತ್ ಕಿಶೋರ್ ತಂಡದಲ್ಲಿ ರಾಜಕೀಯ ತಂತ್ರಜ್ಞರಾಗಿ ಹೊಸ ಅಧ್ಯಾಯವನ್ನು ಆರಂಭಿಸಿದ್ದರು. ಪ್ರಸ್ತುತ ಅವರು ಸಿಎಂ ಸಿದ್ದರಾಮಯ್ಯ ರಾಜಕೀಯ ಸಲಹೆಗಾರ ಹುದ್ದೆಯಲ್ಲಿದ್ದು, ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕೃತ ಕಚೇರಿಯನ್ನೂ ನೀಡಲಾಗಿದೆ.

