
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಟಚ್: ಉಳಿತಾಯ ಯೋಜನೆಯಾ, ಚುನಾವಣೆ ಗಿಮಿಕ್ಕಾ?
ಇನ್ನು ಮುಂದೆ ಸರ್ಕಾರವೇ ಉಚಿತವಾಗಿ ನೀಡುವ ಸ್ಮಾರ್ಟ್ ಕಾರ್ಡ್ ಹೊಂದಿದ್ದರೆ ಮಾತ್ರ ಕಂಡೆಕ್ಟರ್ ಶೂನ್ಯ ದರದ ಉಚಿತ ಟಿಕೆಟ್ ವಿತರಣೆ ಮಾಡುತ್ತಾರೆ. ಇಲ್ಲದೇ ಹೋದರೆ ಹಣ ಕೇಳುವುದು ಖಚಿತ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ ಯೋಜನೆ'ಗೆ ಹೊಸ ರೂಪ ನೀಡಲು ಕಳೆದ ಗುರುವಾರ ನಡೆದ (ಫೆಬ್ರುವರಿ 12) ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು ಮುಂದೆ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್ ಬದಲಿಗೆ 'ಸ್ಮಾರ್ಟ್ ಕಾರ್ಡ್' ಹೊಂದುವುದು ಕಡ್ಡಾಯ. ಈ ತೀರ್ಮಾನ ಪ್ರಕಟವಾದ ಮರುಕ್ಷಣವೇ ಸರ್ಕಾರದ ನಿರ್ಧಾರ ಹಿಂದಿನ ಲೆಕ್ಕಾಚಾರಗಳ ಚರ್ಚೆ ಶುರುವಾಗಿದೆ. ಪ್ರಮುಖವಾಗಿ ಇದು ಬಜೆಟ್ಗೆ ಮೊದಲು ದುಡ್ಡು ಉಳಿಸುವ ಯೋಜನೆಯಾ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಜನಮನ ತಲುಪುವ ರಾಜಕೀಯ ಗಿಮಿಕ್ಕಾ ಎಂಬ ಪ್ರಶ್ನೆಗಳು ಎದ್ದಿವೆ.
ಕಳೆದ ಎರಡೂವರೆ ವರ್ಷಗಳಿಂದ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ (ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ) ಉಚಿತವಾಗಿ ಪ್ರಯಾಣಿಸಲು ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ತೋರಿಸಿದರೆ ಸಾಕಾಗಿತ್ತು. ನಗರದೊಳಗೆ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿಯಲ್ಲಿ ಸ್ಲೀಪರ್ ಹಾಗೂ ಐಷಾರಾಮಿ ಬಸ್ಹೊ ರತುಪಡಿಸಿ ಉಳಿದ ಎಲ್ಲ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿತ್ತು. ಇನ್ನು ಮುಂದೆ ಸರ್ಕಾರವೇ ಉಚಿತವಾಗಿ ನೀಡುವ ಸ್ಮಾರ್ಟ್ ಕಾರ್ಡ್ಕೊ ತೋರಿಸಿದರೆ ಮಾತ್ರ ಕಂಡೆಕ್ಟರ್ ಶೂನ್ಯ ದರದ ಉಚಿತ ಟಿಕೆಟ್ ವಿತರಣೆ ಮಾಡುತ್ತಾರೆ. ಇಲ್ಲದೇ ಹೋದರೆ ಹಣ ಕೇಳುವುದು ಖಚಿತ.
ಶಕ್ತಿ ಯೋಜನೆ ಜಾರಿಯಾದ ದಿನದಿಂದಲೂ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸರ್ಕಾರ ಯೋಜಿಸಿತ್ತು. ಅದನ್ನು ಜಾರಿ ತರುವ ದಿನವನ್ನೂ ಪ್ರದರ್ಶಿಸಿದ್ದರು. ಆದರೆ, ನಂತರದಲ್ಲಿ ಅದು ಜಾರಿಯಾಗಲಿಲ್ಲ. ಆಧಾರ್ ಕಾರ್ಡ್ ಮೂಲಕವೇ ಪ್ರಯಾಣ ಮಾಡಲು ಅವಕಾಶ ನೀಡಲಾಗಿತ್ತು. ಈಗ ಬಜೆಟ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ಇಂಥದ್ದೊಂದು ತೀರ್ಮಾನ ಯಾಕೆ ಕೈಗೊಂಡಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿವೆ.
ರಾಜಕೀಯ ಲೆಕ್ಕಾಚಾರವೇನು?
ನಿರೀಕ್ಷೆಗಳು ಸರಿಯಾದರೆ, ರಾಜ್ಯದಲ್ಲಿ ಶೀಘ್ರದಲ್ಲೇ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ಅಲ್ಲದೆ, ಬೆಂಗಳೂರು ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಆಡಳಿತಾರೂಢ ಸರ್ಕಾರ ಪ್ರಯತ್ನ ಪಡಲಿದೆ ಎಂಬುದು ಮಿಥ್ಯೆ ಅಲ್ಲ. ಜತೆಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ಗಳಿಗೂ ಚುನಾವಣೆ ನಡೆಯಬೇಕಾಗಿದೆ.
ಇದೀಗ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಮುದ್ರಿಸುವ ಮೂಲಕ ಪ್ರತಿ ಮನೆಗೂ ಸರ್ಕಾರದ ಸಾಧನೆ ಮತ್ತು ಗ್ಯಾರಂಟಿ ಯೋಜನೆ ತಲುಪಿಸುವ ತಂತ್ರಗಾರಿಕೆ ಅಡಗಿದೆ ಎಂಬುದೇ ಈಗ ಚರ್ಚೆಯ ವಿಷಯ.
ಉಚಿತ ಬಸ್ ಸೇವೆಯನ್ನು ರಾಜ್ಯದ ಬಹುತೇಕ ನಿವಾಸಿಗಳು ಬಳಸುತ್ತಿದ್ದಾರೆ. ಅವರಿಗೆಲ್ಲರಿಗೂ ಕಾರ್ಡ್ ಕೊಟ್ಟರೆ ಅವರೆಲ್ಲರ ಮನೆಗಳಿಗೆ ಕಾಂಗ್ರೆಸ್ ಸರ್ಕಾರದ ಸಾಧನೆಯೊಂದರ ದೊಡ್ಡ ಗುರುತು ತಲುಪಿದಂತೆ ಎಂಬುದೇ ಸರ್ಕಾರದ ಯೋಜನೆ ಎಂದು ಹೇಳಲಾಗುತ್ತಿದೆ.
ಮತ್ತೆ ವೆಚ್ಚ ಯಾಕೆ?
ಯಾವುದೇ ಸರ್ಕಾರಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡುವುದು ತಪ್ಪಲ್ಲ. ಆದರೆ, ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ನಿರ್ಧಾರಗಳು ಸಹಜವಾಗಿ ರಾಜಕೀಯ ಪ್ರೇರಿತ ಎಂಬ ಅನುಮಾನ ಮೂಡಿಸುತ್ತವೆ. ಆಧಾರ್ ಕಾರ್ಡ್ ಈಗಾಗಲೇ ಎಲ್ಲರ ಬಳಿ ಇರುವಾಗ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸ ಕಾರ್ಡ್ ಮಾಡಿಸುವುದು ಆರ್ಥಿಕವಾಗಿ ಹೊರೆಯಾಗಬಹುದು.
ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕರಾದ ಬೆಲಗೂರು ಸಮೀವುಲ್ಲಾ ಅವರು 'ದ ಫೆಡರಲ್ ಕರ್ನಾಟಕʼದ ಜತೆ ಮಾತನಾಡುತ್ತಾ, ಇದರಲ್ಲಿ ರಾಜಕೀಯ ಲಾಭಕ್ಕಿಂತ ದುಡ್ಡು ಉಳಿಸುವ ತಂತ್ರವೇ ಹೆಚ್ಚು ಎಂದು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಅದರಲ್ಲೂ ಶಕ್ತಿ ಯೋಜನೆ ಈಗಾಗಲೇ ದೊಡ್ಡ ಮಟ್ಟಿನ ಖ್ಯಾತಿ ಪಡೆದುಕೊಂಡಿದೆ. ಹೀಗಾಗಿ ಅದರಲ್ಲಿ ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುವರಿ ಜನಪ್ರಿಯತೆ ತಂದುಕೊಡುವಂಥದ್ದು ಏನೂ ಇಲ್ಲ. ಆದರೆ, ಅನುದಾನ ಉಳಿತಾಯವೇ ಪ್ರಮುಖ ಕಾರಣವಾಗಿರಬಹುದು ಎಂದು ಹೇಳುತ್ತಾರೆ.
ರಾಜ್ಯ ಸರ್ಕಾರವು ಸುಮಾರ 1.25 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹದ ನಿರೀಕ್ಷೆಯಲ್ಲಿತ್ತು. ಆದರೆ, ಸರ್ಕಾರದ ನಿರೀಕ್ಷೆ ಉಲ್ಟಾ ಹೊಡೆದಿದ್ದು ಕೇವಲ 90 ಸಾವಿರ ಕೋಟಿ ರೂಪಾಯಿಯಷ್ಟೇ ಸಂಗ್ರಹವಾಗಿದೆ. ಉಳಿದ 25 ಸಾವಿರ ಕೋಟಿ ರೂಪಾಯಿ ಉಳಿತಾಯಕ್ಕೆ ನಾನಾ ಮಾರ್ಗಗಳನ್ನು ಹುಡುಕಬೇಕಾಗಿದೆ. ಹೀಗಾಗಿ ಉಚಿತ ಯೋಜನೆಗಳ ದುರುಪಯೋಗ ತಡೆ ಹಾಗೂ ಒಂದು ನಿಯಂತ್ರಣ ಹೇರುವುದು ಸರ್ಕಾರದ ಮುಂದಿನ ಅನಿವಾರ್ಯ ಆಯ್ಕೆಯಾಗಿದೆ. ಅದಕ್ಕೆ ಪೂರಕವಾಗಿ ಸ್ಮಾರ್ಟ್ ಕಾರ್ಡ್ ತಂದರೆ ಅನಗತ್ಯ ಪ್ರಯಾಣ, ಇನ್ನಿತರ ಕಡಿವಾಣ ಹಾಕುವ ಉದ್ದೇಶವೂ ಇರಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಸ್ಮಾರ್ಟ್ ಕಾರ್ಡ್ ಮೂಲಕ ಜನ ಮಾನಸದಲ್ಲಿ ಇನ್ನಷ್ಟು ಗಟ್ಟಿಯಾಗುವ ಪ್ರಯತ್ನವನ್ನೂ ಅಲ್ಲಗೆಳೆದಿಲ್ಲ. ಅದೊಂದು ಸಣ್ಣ ಕಾರಣವಾದರೂ ದುಡ್ಡಿನ ಕೊರತೆ ನಿವಾರಣೆ ದೊಡ್ಡ ಪ್ರೇರಣೆಯಾಗಿರಬಹುದು ಎಂದು ಹೇಳುತ್ತಾರೆ.
ಪ್ರತಿಪಕ್ಷಗಳ ನಾಯಕರು ಹೇಳುವುದೇನು?
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರದ ತೀರ್ಮಾನದ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯೆ ನೀಡಿ "ಈಗಾಗಲೇ ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಸಂಚರಿಸುತ್ತಿದ್ದಾರೆ. ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗ ಈಗ ಏಕಾಏಕಿ ಸ್ಮಾರ್ಟ್ ಕಾರ್ಡ್ ನೀಡುವ ಅವಶ್ಯಕತೆ ಏನಿದೆ ಎಂಬುದು ಅರ್ಥವಾಗುತ್ತಿಲ್ಲ," ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದ ಅವರು "ಸರ್ಕಾರ ಸ್ಮಾರ್ಟ್ ಕಾರ್ಡ್ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಾವು ಬೇಡ ಎಂದು ಹೇಳುವುದಿಲ್ಲ. ಆದರೆ, ಈ ನಿರ್ಧಾರದ ಹಿಂದೆ ಸರ್ಕಾರದ ಉದ್ದೇಶವೇನು ಎಂಬುದು ಸ್ಪಷ್ಟವಾಗಬೇಕು. ಮುಂದಿನ ದಿನಗಳಲ್ಲಿ ಇದರ ಅಸಲಿ ಕಾರಣ ಹೊರಬರಲಿದೆ," ಎಂದು ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಸರ್ಕಾರ ಪಾರದರ್ಶಕತೆಗಾಗಿ ಸ್ಮಾರ್ಟ್ ಕಾರ್ಡ್ ತರುತ್ತಿದ್ದೇವೆ ಎಂದು ಹೇಳುತ್ತಿದೆ. ಅದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಈ ಹಿಂದೆ ಇದ್ದಂತೆಯೇ ಎಲ್ಲಾ ಮಹಿಳೆಯರಿಗೂ ಬಸ್‌ನಲ್ಲಿ ಉಚಿತವಾಗಿ ಸಂಚರಿಸುವ ಅವಕಾಶ ಮುಂದುವರಿಯಬೇಕು. ಯಾವುದೇ ಮಹಿಳೆಯರಿಗೆ ಇದರಿಂದ ತೊಂದರೆಯಾಗಬಾರದು," ಎಂದು ಒತ್ತಾಯಿಸಿದ್ದಾರೆ.
"ಈ ಸ್ಮಾರ್ಟ್ ಕಾರ್ಡ್ ಯೋಜನೆಗೆ ಎಷ್ಟು ವೆಚ್ಚವಾಗುತ್ತದೆ? ಮತ್ತು ಈ ಕಾರ್ಡ್‌ಗಳನ್ನು ಗ್ರಾಮೀಣ ಭಾಗದ ಮಹಿಳೆಯರಿಗೆ ಹೇಗೆ ತಲುಪಿಸುತ್ತಾರೆ? ಎಂಬುದನ್ನು ಕಾದು ನೋಡಬೇಕು. ಸ್ಮಾರ್ಟ್ ಕಾರ್ಡ್ ಜಾರಿಯಾದ ನಂತರವಷ್ಟೇ ಇದರ ನಿಜವಾದ ಸಾಧಕ-ಬಾಧಕಗಳು ತಿಳಿಯಲಿವೆ," ಎಂದು ಹೇಳಿದರು.
ಇದೇ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿನ ವಿಪರೀತ ಜನಸಂದಣಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುರೇಶ್ ಬಾಬು, "ಮೊದಲು ಬಸ್‌ಗಳಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಹೆಚ್ಚು ಬಸ್‌ಗಳನ್ನು ಒದಗಿಸಬೇಕು. ಸ್ವತಃ ಆಡಳಿತ ಪಕ್ಷದ ಮುಖಂಡರೇ ಈ ಬಗ್ಗೆ ದನಿ ಎತ್ತಿದ್ದಾರೆ. ಸರ್ಕಾರ ಸ್ಮಾರ್ಟ್ ಕಾರ್ಡ್‌ಗಿಂತ ಮೊದಲು ಬಸ್‌ಗಳ ಸಂಖ್ಯೆ ಹೆಚ್ಚಿಸುವ ಕಡೆಗೆ ಗಮನ ಹರಿಸಲಿ," ಎಂದು ಸಲಹೆ ನೀಡಿದ್ದಾರೆ.

