Congress attacks former Prime Minister Deve Gowda for missing ticket; Council election fight intensifies!
x

ಸಾಂದರ್ಭಿಕ ಚಿತ್ರ

ಮಾಜಿ ಪ್ರಧಾನಿ ದೇವೇಗೌಡಗೆ ಟಿಕೆಟ್‌ ಮಿಸ್ಸಿಂಗ್‌, ಕಾಂಗ್ರೆಸ್ ವಾಗ್ದಾಳಿ; ಪರಿಷತ್ ಚುನಾವಣೆಗೆ ಜಿದ್ದಾಜಿದ್ದಿ!

ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಎನ್‌ಡಿಎ ಟಿಕೆಟ್ ನಿರಾಕರಿಸಿ, ಬಿಜೆಪಿಯ ಜಿಲ್ಲಾ ಮಟ್ಟದ ನಾಯಕ ಎಂ. ನಾಗರಾಜ ಅವರಿಗೆ ಮಣೆ ಹಾಕಿರುವುದು ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ದೊಡ್ಡ ಜಟಾಪಟಿಗೆ ಕಾರಣವಾಗಿದೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ಏಕಕಾಲಕ್ಕೆ ಹಲವು ಮಹತ್ವದ ವಿದ್ಯಮಾನಗಳು ಜರುಗುತ್ತಿದ್ದು, ಒಂದೆಡೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಮೈತ್ರಿ ಮತ್ತು ಆಡಳಿತ ಪಕ್ಷಗಳ ನಡುವೆ ವಾಗ್ದಾಳಿಗೆ ಕಾರಣವಾಗಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕಸರತ್ತು ಶುರುವಾಗಿದೆ. ಇದರ ನಡುವೆ, ಸಚಿವ ಕೃಷ್ಣ ಬೈರೇಗೌಡ ಅವರ ಖಾತೆ ಅಸಮಾಧಾನ ಮತ್ತು ರಾಜ್ಯದಲ್ಲಿ ಹೊಸ ರೌಡಿ ನಿಗ್ರಹ ದಳ ರಚನೆ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿದೆ.

ದೇವೇಗೌಡರಿಗೆ ಟಿಕೆಟ್ ನಿರಾಕರಣೆ: ಕಾಂಗ್ರೆಸ್‌ ತೀವ್ರ ವಾಗ್ದಾಳಿ

ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಎನ್‌ಡಿಎ ಟಿಕೆಟ್ ನಿರಾಕರಿಸಿ, ಬಿಜೆಪಿಯ ಜಿಲ್ಲಾ ಮಟ್ಟದ ನಾಯಕ ಎಂ. ನಾಗರಾಜ ಅವರಿಗೆ ಮಣೆ ಹಾಕಿರುವುದು ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ದೊಡ್ಡ ಜಟಾಪಟಿಗೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಆಕ್ರೋಶ ಹೊರಹಾಕಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, "ಕೇವಲ ಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆಯವರಿಗೆ ಆದ ಅವಮಾನವನ್ನು ಸಹಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ಇದೇ ಬಿಜೆಪಿ ದೇವೇಗೌಡರನ್ನು ಸೋಲಿಸಿತ್ತು. ಆದರೆ ಕಾಂಗ್ರೆಸ್ ಪಕ್ಷವು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಅವರನ್ನು ಗೌರವದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿತ್ತು. ಸಚಿವ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಬಿಜೆಪಿಯ ನಿರಂತರ ಅವಮಾನಗಳನ್ನು ಸಹಿಸಿಕೊಳ್ಳುತ್ತಿರುವುದು ಆಶ್ಚರ್ಯಕರ," ಎಂದು ಲೇವಡಿ ಮಾಡಿದ್ದಾರೆ.

ಪರಿಷತ್ ಚುನಾವಣೆ: ಮೈತ್ರಿಕೂಟ ತಿರುಗೇಟು

ಜೂ. 18 ರಂದು ನಡೆಯಲಿರುವ 7 ವಿಧಾನ ಪರಿಷತ್ ಸ್ಥಾನಗಳ ಚುನಾವಣೆ ಈಗ ತೀವ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಭಾವಿಸಿತ್ತು. ಆದರೆ, ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ, ಎನ್‌ಡಿಎ ಮೈತ್ರಿಕೂಟದಿಂದ 3ನೇ ಅಭ್ಯರ್ಥಿಯಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿಯ ತಿರುಗೇಟು ನೀಡಿದ್ದಾರೆ.

ಪ್ರಸ್ತುತ 7 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗೆಲುವಿಗೆ 28 ಶಾಸಕರ ಮತಗಳ ಅಗತ್ಯವಿದ್ದು, ಮೈತ್ರಿಕೂಟಕ್ಕೆ ಬಿಜೆಪಿ 62 , ಜೆಡಿಎಸ್ 18 , ಜನಾರ್ದನ ರೆಡ್ಡಿ ಹಾಗೂ ಯತ್ನಾಳ್ ಸೇರಿದಂತೆ ಇನ್ನೂ 4 ರಿಂದ 5 ಹೆಚ್ಚುವರಿ ಮತಗಳ ಕೊರತೆಯಿದೆ. ಈ ಕೊರತೆ ನೀಗಿಸಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ತಂತ್ರಗಾರಿಕೆ ನಡೆಯುತ್ತಿದ್ದು, ತೆರೆಮರೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಕಸರತ್ತು ಆರಂಭವಾಗಿದೆ ಎನ್ನಲಾಗಿದೆ.

ಸಚಿವ ಸ್ಥಾನಕ್ಕಾಗಿ ದೆಹಲಿ ಮಟ್ಟದ ಲಾಬಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಮೊದಲ ಹಂತವಾಗಿ 13 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಬಾಕಿ ಉಳಿದಿರುವ 20 ಸ್ಥಾನಗಳಿಗಾಗಿ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಶುರುವಾಗಿದೆ. 60ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಹಿರಿಯ ಶಾಸಕರು ತಮಗೆ ಮೊದಲ ಆದ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ದೌಡಾಯಿಸುತ್ತಿದ್ದರೆ, ಇನ್ನುಳಿದವರು ಸಿಎಂ ಮತ್ತು ಡಿಸಿಎಂ ಮನೆ ಕದ ತಟ್ಟುತ್ತಿದ್ದಾರೆ. ಮತ್ತೊಂದೆಡೆ, ಅಲ್ಪಸಂಖ್ಯಾತರ ಕೋಟಾದಡಿ ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಸಮುದಾಯದವರು ಪ್ರತಿಭಟನೆ ನಡೆಸಿ ಒತ್ತಡ ಹೇರುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ.

ಖಾತೆ ಅಸಮಾಧಾನ ಕೃಷ್ಣ ಬೈರೇಗೌಡ ಪಟ್ಟು!

ರಾಮಲಿಂಗಾರೆಡ್ಡಿ ಅವರ ಬೆಂಗಳೂರು ಅಭಿವೃದ್ಧಿ ಖಾತೆ ವಿವಾದ ಸುಖಾಂತ್ಯ ಕಾಣುವ ಬೆನ್ನಲ್ಲೇ, ಸಚಿವ ಕೃಷ್ಣ ಬೈರೇಗೌಡ ಹೈಕಮಾಂಡ್‌ಗೆ ಹೊಸ ತಲೆನೋವು ತಂದಿಟ್ಟಿದ್ದಾರೆ. ತಮಗೆ ನೀಡಿರುವ ಬೆಂಗಳೂರು ಅಭಿವೃದ್ಧಿ ಖಾತೆಯೊಳಗೆ ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳನ್ನು ಸೇರಿಸದಿದ್ದರೆ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. "ಅವೆರಡೂ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆಗೆ ಯಾವುದೇ ಬೆಲೆ ಇರುವುದಿಲ್ಲ," ಎಂದು ಕಡ್ಡಿ ಮುರಿದಂತೆ ಹೇಳಿರುವ ಅವರನ್ನು ಮನವೊಲಿಸಲು ಉಸ್ತುವಾರಿ ಸುರ್ಜೇವಾಲ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸುತ್ತಿದ್ದಾರೆ.

'ರೌಡಿ ನಿಗ್ರಹ ದಳ' ರಚನೆಗೆ ಡಿಜಿಪಿ ಆದೇಶ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಮ್.ಎ. ಸಲೀಂ ಅವರು ರಾಜ್ಯಾದ್ಯಂತ 'ರೌಡಿ ನಿಗ್ರಹ ದಳ' ರಚನೆಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಪ್ರತಿ ವಲಯದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಹಾಗೂ ಪ್ರತಿ ಠಾಣಾ ಮಟ್ಟದಲ್ಲಿ ಸ್ಥಳೀಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ಸ್ಕ್ವಾಡ್‌ಗಳು ಕಾರ್ಯನಿರ್ವಹಿಸಲಿವೆ.

ಕಠಿಣ ಕಾನೂನು ಪ್ರಯೋಗ

ಹೊಸ ರೌಡಿಗಳ ವಿರುದ್ಧ ತಕ್ಷಣ ರೌಡಿ ಶೀಟ್ ತೆರೆಯುವುದು, ಹಳೆ ರೌಡಿಗಳ ಮೇಲೆ ನಿಗಾ ಇಡುವುದು ಮತ್ತು ಗ್ಯಾಂಗ್‌ಗಳ ವಿರುದ್ಧ 'ಕೋಕಾ' ಹಾಗೂ ಗುಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹಫ್ತಾ ವಸೂಲಿ, ಗ್ಯಾಂಗ್‌ವಾರ್‌ಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಡಿಜಿಪಿ, ಅಧಿಕಾರಿಗಳು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story