Siddaramaiah is the countrys powerful CM: K.C. Venugopal debunks rumours of leadership change
x

ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್‌ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

ಸಿದ್ದರಾಮಯ್ಯ ‘ಪವರ್‌ಫುಲ್’ ಸಿಎಂ, ಸದ್ಯ ಸ್ಥಾನ ಖಾಲಿ ಇಲ್ಲ; ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಎಳೆದ ಹೈಕಮಾಂಡ್

ನಾಯಕತ್ವ ಬದಲಾವಣೆಯ ಸಂದರ್ಭ ಬಂದರೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ಶಾಸಕರು ನಿರ್ಧರಿಸಲಿದ್ದಾರೆ. ಸಿಎಂ ಬದಲಾವಣೆ ವಿಷಯದಲ್ಲಿ ಶಾಸಕರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಹೊಸ ತಿರುವು ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಿತ್ತಾಟಕ್ಕೆ ತೆರೆ ಎಳೆದಿರುವ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕದಲ್ಲಿ ಸದ್ಯ‌ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

"ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸದ್ಯ ದೇಶದ ಅತ್ಯಂತ ಪ್ರಭಾವಶಾಲಿ ಮುಖ್ಯಮಂತ್ರಿಗಳಲ್ಲಿ ಒಬ್ಬರು," ಎಂದು ಬಣ್ಣಿಸಿರುವ ಅವರು, ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆ.ಸಿ. ವೇಣುಗೋಪಾಲ್ ಹೇಳಿದ್ದೇನು?

ಕೇರಳದಲ್ಲಿ ನಡೆದ ‘ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಭಾಗವಹಿಸಿದ್ದ ವೇಣುಗೋಪಾಲ್ ಅವರಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುವಾಗ, ಹೊಸ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಆಡಳಿತ ಮತ್ತು ಜನಪ್ರಿಯತೆಯನ್ನು ಗಮನಿಸಿದರೆ ದೇಶದ ಪ್ರಭಾವಶಾಲಿ ಸಿಎಂಗಳ ಸಾಲಿನಲ್ಲಿ ನಿಲ್ಲುತ್ತಾರೆ. ಸದ್ಯಕ್ಕಂತೂ ಸಿಎಂ ಸ್ಥಾನ ಖಾಲಿ ಇಲ್ಲ, ಒಂದು ವೇಳೆ ಭವಿಷ್ಯದಲ್ಲಿ ನಾಯಕತ್ವ ಬದಲಾವಣೆಯ ಸಂದರ್ಭ ಬಂದರೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ಶಾಸಕರು ನಿರ್ಧರಿಸಲಿದ್ದಾರೆ. ಸಿಎಂ ಬದಲಾವಣೆ ವಿಷಯದಲ್ಲಿ ಶಾಸಕರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪುನರುಚ್ಚರಿಸಿದರು.

ನಾಯಕತ್ವ ಬದಲಾವಣೆ ಕಗ್ಗಂಟು

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಚರ್ಚೆಗಳು ಅರಂಭವಾಗಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದವನ್ನು ಪ್ರಸ್ತಾಪಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಸಿಎಂ ಸ್ಥಾನಕ್ಕಾಗಿ ಹಕ್ಕು ಪ್ರತಿಪಾದಿಸಿತ್ತು.

ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಬಣದ ಸಚಿವರು ಹಾಗೂ ಶಾಸಕರು, ಸಿದ್ದರಾಮಯ್ಯ ಅವರನ್ನು ಎಲ್ಲ ಶಾಸಕರು ಸರ್ವಾನುಮತದಿಂದ ಸಿಎಂ ಸ್ಥಾನಕ್ಕೆ ಅಯ್ಕೆ ಮಾಡಿದ್ದೇವೆ. ಅಧಿಕಾರ ಹಂಚಿಕೆ ಒಪ್ಪಂದದ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದಿದ್ದರು. ಆದರೆ, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಸಿಎಂ ಬದಲಾವಣೆಯ ಮಾತುಗಳು ಬಲವಾದವು. ಡಿಸಿಎಂ ಪರ ಶಾಸಕರು, ಖುದ್ದು ಡಿಸಿಎಂ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಹೈಕಮಾಂಡ್ ಕದ ತಟ್ಟಿದ್ದರು. ಇದಕ್ಕೆ ಪರ್ಯಾಯವಾಗಿ ಸಿಎಂ ಪರ ಸಚಿವರು ಕೂಡ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡಬಾರದು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಒಂದು ವೇಳೆ ಸಿಎಂ ಸ್ಥಾನ ಬದಲಾಬಣೆಗೆ ಹೈಕಮಾಂಡ್ ನಿರ್ಧರಿಸಿದರೆ ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದರು.

ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ತೀವ್ರಗೊಂಡಾಗ ಸಚಿವರಾದ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ ಪಾಟೀಲ್ ಹೆಸರುಗಳು ಮುಂಚೂಣಿಗೆ ಬಂದಿದ್ದವು. ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಯಕರ ನಡುವೆ ಸರಣಿ ಸಭೆಗಳು ನಡೆದಿದ್ದು ಹೈಕಮಾಂಡ್ ಮಟ್ಟದಲ್ಲಿ ಆತಂಕ ಮೂಡಿಸಿತ್ತು. ಅಲ್ಲದೇ ಸಿಎಂ ಸ್ಥಾನ ಬದಲಾವಣೆ ಕುರಿತ ಶಾಸಕರು, ಬಣಗಳ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದವು. ಕಾಂಗ್ರೆಸ್ ನಲ್ಲಿ ಉದ್ಭವಿಸಿರುವ ಆಂತರಿಕ ಕಲಹವನ್ನು ಅರಿತ ವೇಣುಗೋಪಾಲ್ ಅವರು ಈಗ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ಮೂಲಕ ಭಿನ್ನಮತೀಯರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಒಗ್ಗಟ್ಟಿನ ಮಂತ್ರ ಜಪಿಸಿದ ಹೈಕಮಾಂಡ್

ಕೆ.ಸಿ. ವೇಣುಗೋಪಾಲ್ ಅವರ ಈ ಹೇಳಿಕೆಯು ಸಿದ್ದರಾಮಯ್ಯ ಬಣಕ್ಕೆ ಆನೆ ಬಲ ನೀಡಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ಸಿನ ನಡುವೆ ನಾಯಕತ್ವದ ಬಗ್ಗೆ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂಬ ಸಂದೇಶವನ್ನು ದೆಹಲಿ ನಾಯಕರು ರವಾನಿಸಿದ್ದಾರೆ. ಶಾಸಕರು ಮತ್ತು ಹೈಕಮಾಂಡ್ ಒಮ್ಮತವಿಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳುವ ಮೂಲಕ, ಸದ್ಯಕ್ಕೆ ಸಿದ್ದರಾಮಯ್ಯ ಅವರ ಕುರ್ಚಿ ಭದ್ರವಾಗಿದೆ ಎಂಬ ಸೂಚನೆ ನೀಡಿದ್ದಾರೆ.

Read More
Next Story