Dissatisfaction with portfolio allocation: Minister Krishna Bhairegowda suddenly flies to Delhi
x

ಸಚಿವ ಕೃಷ್ಣಭೈರೇಗೌಡ

ಖಾತೆ ಹಂಚಿಕೆ ಅಸಮಾಧಾನ: ದಿಢೀರ್ ದೆಹಲಿಗೆ ಹಾರಿದ ಸಚಿವ ಕೃಷ್ಣ ಭೈರೇಗೌಡ

ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಚಿವ ಬೋಸರಾಜು ಪುತ್ರ ರವಿ ಬೋಸರಾಜು ಅವರು ಕೂಡ ಕೃಷ್ಣ ಭೈರೇಗೌಡ ಅವರ ಜೊತೆ ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸ ಮಾಡಿಕೊಟ್ಟಿದೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಭಿನ್ನಮತದ ಹೊಗೆಯಾಡುತ್ತಿದ್ದು, ಸಚಿವ ಕೃಷ್ಣ ಭೈರೇಗೌಡ ಅವರು ದಿಢೀರ್ ದೆಹಲಿ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ. ತಮಗೆ ಹಂಚಿಕೆಯಾಗಿರುವ ಖಾತೆ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಬೆನ್ನಲ್ಲೇ, ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ರಾಜಧಾನಿಗೆ ತೆರಳಿದ್ದಾರೆ.

ಮೂಲಗಳ ಪ್ರಕಾರ, ಕೃಷ್ಣ ಭೈರೇಗೌಡ ಅವರು ಬಿಡಿಎ ಮತ್ತು ಬಿಎಂಆರ್‌ಡಿಎ ಒಳಗೊಂಡ ಪ್ರಭಾವಿ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಖಾತೆಗೆ ತೀವ್ರ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ತಮಗೆ ಸಿಕ್ಕಿರುವ ಖಾತೆಯ ಬಗ್ಗೆ ತೃಪ್ತಿಯಿಲ್ಲದ ಕಾರಣ, ಹೈಕಮಾಂಡ್ ಮಟ್ಟದಲ್ಲೇ ಮಾತುಕತೆ ನಡೆಸಿ ಖಾತೆ ಬದಲಾವಣೆ ಮಾಡಿಸಿಕೊಳ್ಳುವ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಬೆಂಬಲಿಗರೊಂದಿಗೆ ದೆಹಲಿ ಪ್ರವಾಸ

ವಿಶೇಷವೆಂದರೆ ಸಚಿವ ಕೃಷ್ಣ ಭೈರೇಗೌಡ ಅವರು ಒಬ್ಬರೇ ದೆಹಲಿಗೆ ಹೋಗಿಲ್ಲ. ತಮ್ಮ ಆಪ್ತರು ಹಾಗೂ ಬೆಂಬಲಿಗರ ದಂಡಿನೊಂದಿಗೇ ವಿಮಾನವೇರಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಚಿವ ಬೋಸರಾಜು ಪುತ್ರ ರವಿ ಬೋಸರಾಜು ಅವರು ಕೂಡ ಕೃಷ್ಣ ಭೈರೇಗೌಡ ಅವರ ಜೊತೆ ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸ ಮಾಡಿಕೊಟ್ಟಿದೆ.

ಇಂದು ಅಥವಾ ನಾಳೆ ದೆಹಲಿಯಲ್ಲಿ ಎಐಸಿಸಿ (AICC) ಪ್ರಮುಖ ನಾಯಕರನ್ನು ಭೇಟಿಯಾಗಲಿರುವ ಕೃಷ್ಣ ಭೈರೇಗೌಡ ತಂಡ, ತಮ್ಮ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಡಲಿದ್ದು, ವರಿಷ್ಠರು ಈ ಭಿನ್ನಮತ ಶಮನಗೊಳಿಸುತ್ತಾರಾ ಎಂಬ ಕುತೂಹಲ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿದೆ.

ಜೂ. 10ಕ್ಕೆ ಸಿಎಂ ದೆಹಲಿ ಪ್ರವಾಸ

ಇತ್ತ ಸಚಿವರ ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸಹ ಬುಧವಾರ (ಜೂ. 10) ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ಎರಡು ದಿನಗಳ ಕಾಲ ಅವರು ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಜೂ. 11 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ನೀತಿ ಆಯೋಗದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳುವುದು ಸಿಎಂ ಅವರ ಅಧಿಕೃತ ಪ್ರವಾಸದ ಮುಖ್ಯ ಉದ್ದೇಶವಾಗಿದೆ.

ಹೈಕಮಾಂಡ್ ಜೊತೆ ಚರ್ಚೆ

ಅಧಿಕೃತ ಸಭೆಯ ಜೊತೆ ಜೊತೆಗೆ, ಎಐಸಿಸಿ (AICC) ಹೈಕಮಾಂಡ್ ನಾಯಕರನ್ನು ಡಿ.ಕೆ. ಶಿವಕುಮಾರ್ ಭೇಟಿಯಾಗಲಿದ್ದಾರೆ. ಸದ್ಯ ಸೃಷ್ಟಿಯಾಗಿರುವ ಖಾತೆ ಅಸಮಾಧಾನ ಶಮನ ಹಾಗೂ ಮುಂಬರುವ ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More
Next Story