There is no change in leadership at the moment, DKSHs Delhi visit has no special significance: H.C. Mahadevappa
x

ಸಚಿವ ಎಚ್‌.ಸಿ. ಮಹದೇವಪ್ಪ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

ಡಿಕೆಶಿ ದೆಹಲಿ ಯಾತ್ರೆಗೆ ವಿಶೇಷ ಅರ್ಥ ಬೇಡ: ಎಚ್‌.ಸಿ. ಮಹದೇವಪ್ಪ

ʼವಿಬಿ ಜಿ ರಾಮ್‌ ಜಿʼ ಕಾಯ್ದೆಯ ವಿರುದ್ಧ ಶಾಸಕರು ಈಗಷ್ಟೇ ಹೋರಾಟ ಮುಗಿಸಿ ಕ್ಷೇತ್ರಗಳಿಗೆ ತೆರಳಿದ್ದಾರೆ. ಶಾಸಕರು ವಿದೇಶಕ್ಕೆ ಹೋದರೆ ಬೇಡವೆನ್ನಲು ಸಾಧ್ಯವೇ ಎಂದು ಸಚಿವ ಎಚ್‌.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ.


Click the Play button to hear this message in audio format

ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ 'ಅಧಿಕಾರ ಹಂಚಿಕೆ'ಯ ಕಿಡಿ ಮತ್ತೆ ಸ್ಫೋಟಗೊಂಡಿದೆ. ನಾಯಕತ್ವ ಬಿಕ್ಕಟ್ಟು ಹಾಗೂ ಅಧಿಕಾರ ಹಂಚಿಕೆ ಕುರಿತು ವಿಪಕ್ಷಗಳು ಹಾಗೂ ಕಾಂಗ್ರೆಸ್‌ನ ಸಚಿವರು ಮತ್ತು ಶಾಸಕರು ವಿಭಿನ್ನ ಹೇಳಿಕೆಗಳು ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಸಿಎಂ ಸಿದ್ದರಾಮಯ್ಯ ನಿಧಾನವಾದರೂ ಅಧಿಕಾರ ಬಿಟ್ಟುಕೊಡುತ್ತಾರೆ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌ ಬುಧವಾರ(ಫೆ.11)ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಎಚ್‌,ಸಿ, ಮಹದೇವಪ್ಪ, "ಯಾರು ಏನು ಹೇಳಿದ್ದಾರೋ ಅವರನ್ನೇ ಕೇಳಿ, ನನಗೆ ಏನೂ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಬಜೆಟ್‌ ಸಿದ್ದತೆ ಮಾಡುತ್ತಿರುವ ಸಿಎಂ,ಇಲಾಖಾವಾರು ಮುಖ್ಯಸ್ಥರನ್ನು ಕರೆದು ಚರ್ಚೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಧಿಕಾರ ಬಿಟ್ಟುಕೊಡುವ ವಿಚಾರ ಸದ್ಯಕ್ಕಿಲ್ಲ" ಎಂದು ತಿಳಿಸಿದರು.

ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ʼವಿಬಿ ಜಿ ರಾಮ್‌ ಜಿʼ ಕಾಯ್ದೆಯ ವಿರುದ್ಧ ಶಾಸಕರು ಈಗಷ್ಟೇ ಹೋರಾಟ ಮುಗಿಸಿ ಕ್ಷೇತ್ರಗಳಿಗೆ ತೆರಳಿದ್ದಾರೆ. ಶಾಸಕರು ವಿದೇಶಕ್ಕೆ ಹೋದರೆ ಬೇಡವೆನ್ನಲು ಸಾಧ್ಯವೇ ? ದೇಶ ಸುತ್ತಬೇಕು ಇಲ್ಲವೇ ಕೋಶ ಓದಬೇಕಲ್ಲವೇ ಎಂದು ಪ್ರಶ್ನಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್‌ ವರಿಷ್ಠರಾದ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿರಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು. ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಎಲ್ಲವನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದ್ದು, ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿದರು.

ಸೋನಿಯಾ ಗಾಂಧಿ ಭೇಟಿಯಾದ ಡಿಕೆಶಿ

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯ ಜನಪಥ ರಸ್ತೆಯಲ್ಲಿರುವ ಗಾಂಧಿ ಕುಟುಂಬದ ನಿವಾಸಕ್ಕೆ ಗುರುವಾರ(ಫೆ.12) ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಲಭ್ಯ ಮಾಹಿತಿಯಂತೆ, ಈ ಭೇಟಿ ವೇಳೆ ಸುಮಾರು 20 ನಿಮಿಷಗಳ ಕಾಲ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ರಾಹುಲ್‌ ಗಾಂಧಿಯನ್ನು ಭೇಟಿಯಾಗಿದ್ದರೆ ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಸ್ಪಷ್ಟತೆ ನೀಡುವಂತೆ ಮನವಿ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ "ಸ್ಪಷ್ಟತೆ ಬೇಕು" ಎನ್ನುವ ಧೋರಣೆ ಹೊಂದಿದ್ದಾರೆ ಎನ್ನಲಾಗಿದ್ದು, ಪಕ್ಷದೊಳಗಿನ ಅನಿಶ್ಚಿತತೆ ಮುಂದುವರಿದರೆ ಸಂಘಟನೆ, ಚುನಾವಣಾ ಸಿದ್ಧತೆ ಮತ್ತು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಅವರ ಸಮ್ಮುಖದಲ್ಲಿಯೇ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಸ್ಪಷ್ಟ ನಿಲುವು ಪ್ರಕಟಿಸುವಂತೆ ರಾಹುಲ್ ಗಾಂಧಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ ಮಾಹಿತಿ ಹೊರಬಿದ್ದಿದೆ.

Read More
Next Story