
ಸಿಎಂ ಕುರ್ಚಿ ಕಿತ್ತಾಟದಲ್ಲಿ ನಾಯಿ ಜಗಳ ; ಬೀದಿ ನಾಯಿ, ನಿಯತ್ತಿನ ನಾಯಿ ಎಂಬ ಕಿತ್ತಾಟ
ಮುಖ್ಯಮಂತ್ರಿ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಪರೋಕ್ಷವಾಗಿ ನಾಯಿ ಎಂದಿರುವ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಡಿಸಿಎಂ, ಬಮೂಲ್ ಅಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಖುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಗುದ್ದಾಟಗಳು ಈಗ ಸ್ವಪಕ್ಷದ ನಾಯಕರಲ್ಲೆ ಬಿರುಕು ಮೂಡುವಂತೆ ಮಾಡಿದೆ. ಮುಖ್ಯಮಂತ್ರಿ ಖುರ್ಚಿಯ ಹೇಳಿಕೆಗಳು ಈಗ ಅತ್ಯಂತ ಕೀಳುಮಟ್ಟಕ್ಕಿಳಿದಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ಶಾಸಕರುಗಳು ಈಗ ಬೀದಿ ರಂಪಾಟಕ್ಕಿಳಿದಿದ್ದು, "ನಾಯಿ ಬಾಲದಿಂದ ಹಿಡಿದು, ಬೀದಿ ನಾಯಿ, ನಿಯತ್ತಿನ ನಾಯಿ" ವರೆಗೂ ವಾಗ್ದಾಳಿಗಳು ನಡೆಯುತ್ತಿದೆ. ಈ ವರೆಗೂ ಸೌಜನ್ಯಯುತವಾಗಿ ನಡೆಯುತ್ತಿದ್ದ ಕುರ್ಚಿಕಾಳಗ ಇದೇ ಮೊದಲ ಭಾರಿಗೆ ಪ್ರಾಣಿಗಳ ಮಟ್ಟಕ್ಕಿಳಿದಿದೆ. ಅದರಲ್ಲೂ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಯಿಂದ 'ನಾಯಿ ಕಾಳಗ' ಶುರುವಾಗಿದ್ದು, ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರುಗಳ ವರೆಗೂ ನಾಯಿ ರಗಳೆ ಸದ್ದು ಮಾಡುತ್ತಿದೆ.
ಸಚಿವರು ಹೇಳಿದ್ದೆನು?
ನಾಯಕತ್ವ ಬದಲಾವಣೆ ಸಂಬಂಧ ಶಾಸಕರ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸುವ ವೇಳೆ ಇಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ..? ಕೋರ್ಟ್ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಅಂತ ಪದೇಪದೆ ಹೇಳುತ್ತಿದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ ಎಂದು ಪರೋಕ್ಷವಾಗಿ ವ್ಯಂಗ್ಯ ಬಾಣ ಎಸೆದಿದ್ದರು.
ಹೈಕೋರ್ಟ್ ಹೇಳಿದ್ದನ್ನು ನಾನು ಹೇಳಿದೆ ಅಷ್ಟೇ. ನಾಯಕರು ನಾಯಿಗಳು ಅಂತ ನಾನು ಹೇಳಿದ್ದೀನಾ? ಹೈಕಮಾಂಡ್‌ಗೆ ನಿರ್ದೇಶನ ಕೊಡುವವರು ಯಾರು? ನಾನಾ ನೀವಾ? ನಾಯಿ ಬಾಲವನ್ನು ಅಲ್ಲಾಡಿಸಬಹುದು, ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.
ಸಚಿವರು ಹೈಕಮಾಂಡ್ ಭಾಗ
ಸಚಿವ ಎಚ್.ಸಿ.ಮಹದೇವಪ್ಪ ಅವರ ನಾಯಿ ಹೇಳಿಕೆಗೆ ಪ್ರತಿಕ್ರಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು ಬಹಳ ದೊಡ್ಡವರು. ಈಗ ಅವರೂ ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ಬಗ್ಗೆ ಪಕ್ಷವೇ ತೀರ್ಮಾನ ಮಾಡಲಿ. ನಾಯಕರ ಹೇಳಿಕೆ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ಳುತ್ತಾರೆ. ನಾನು ಮಹದೇವಪ್ಪನಿಗೆ ಹಾಗೂ ಬೇರೆಯವರಿಗೆ ಉತ್ತರ ನೀಡಲು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯನವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ. ಈ ತೀರ್ಮಾನ ಏನು ಎಂಬುದು ಸಮಯ ಬಂದಾಗ ತಿಳಿಯುತ್ತದೆ. ಇದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟು ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನಕ್ಕೆ ಸಂದೇಶ ನೀಡುತ್ತಾರೆ” ಎಂದಿದ್ದಾರೆ.
ನಿಯತ್ತಿನ ನಾಯಿಗಳು
ಎಚ್.ಸಿ.ಮಹದೇವಪ್ಪ ಅವರಿಗೆ ಟಾಂಗ್ ನೀಡಿರುವ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, “ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ಸ್ಮರಣೆ ಮಾಡಿಕೊಂಡು, ಅದನ್ನು ತೀರಿಸುವ ನಾಯಿಗಳು” ಎಂದಿದ್ದಾರೆ.. "ಎಚ್.ಸಿ.ಮಹದೇವಪ್ಪ ಅವರು ಯಾರನ್ನು ಉಲ್ಲೇಖಿಸಿ ನಾಯಿ ಬಾಲದ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ. ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ. ನಿಯತ್ತಿನ ನಾಯಿಗಳು” ಎಂದು ವಾಗ್ದಾಳಿ ನಡೆಸಿದ್ದಾರೆ.
ಹೊರಗಡೆಯಿಂದ ಬಂದವರು ಬೀದಿ ನಾಯಿಗಳೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಹಾಗೆಂದು ಹೇಳಿಲ್ಲ. ಕಟ್ಟಾ ಕಾಂಗ್ರೆಸಿಗರು ಋಣ ತೀರಿಸುವ ವ್ಯಕ್ತಿತ್ವ ಹೊಂದಿರುವವರು. ಈ ನಾಯಿಗಳು ಬೀದಿ ನಾಯಿಗಳೇ ಆಗಿರಲಿ, ಸಾಕಿದ ನಾಯಿಗಳೇ ಆಗಿರಲಿ, ಯಜಮಾನನ ಋಣ ತೀರಿಸುತ್ತವೆಯೇ ಹೊರತು, ಬೇರೆ ರೀತಿ ಮಾಡುವುದಿಲ್ಲ. ಅದು ನಿಯತ್ತಿನ ನಾಯಿಗಳ ಸ್ವಭಾವ. ನಿಯತ್ತಿಗಾಗಿಯೇ ಜನ ನಾಯಿಗಳನ್ನು ಸಾಕುತ್ತಾರೆ. ಬೇರೆಯವರು ನಮ್ಮ ಋಣ ತೀರಿಸುತ್ತಾರೋ ಇಲ್ಲವೋ, ನಾಯಿ ನಮ್ಮ ಋಣ ತೀರಿಸುತ್ತದೆ ಎಂಬ ಕಾರಣಕ್ಕೆ ನಾಯಿ ಸಾಕುತ್ತಾರೆ. ಬೀದಿ ನಾಯಿಗೆ ಊಟ ಹಾಕುತ್ತಾರೆ. ನಾಯಿ ನಿಯತ್ತಿನ ಬಗ್ಗೆ ಅನೇಕ ಗಾದೆಗಳು, ನಾಣ್ನುಡಿಗಳಿವೆ” ಎಂದು ಸ್ಪಷ್ಟನೆ ನೀಡಿದರು.

