
ಸಿಎಲ್‌ಪಿ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಜೆಡಿಎಸ್‌ನಿಂದ ಶಾಸಕರಿಗೆ ಆಮಿಷದ ಕರೆ: ಸಿಎಲ್‌ಪಿ ಸಭೆಯಲ್ಲಿ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್!
ವಿಧಾನಪರಿಷತ್ ಚುನಾವಣೆಯ ಹೊಸ್ತಿಲಲ್ಲಿ ಐದನೇ ಅಭ್ಯರ್ಥಿಯ ಗೆಲುವು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಈ ಬೆನ್ನಲ್ಲೇ ಶಾಸಕರಿಗೆ ಗಾಳ ಹಾಕಲಾಗುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಪರೇಷನ್ ಹಸ್ತ ಹಾಗೂ ರಾಜಕೀಯ ಆಮಿಷಗಳದ್ದೇ ಸದ್ದು ಕೇಳಿಬರುತ್ತಿದೆ. ಮಂಗಳವಾರ ತಡರಾತ್ರಿಯವರೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ನಾಯಕರಿಂದ ಕಾಂಗ್ರೆಸ್ ಶಾಸಕರಿಗೆ ಆಮಿಷದ ಕರೆಗಳು ಬರುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯ ಹೊಸ್ತಿಲಲ್ಲಿ ಐದನೇ ಅಭ್ಯರ್ಥಿಯ ಗೆಲುವು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಈ ಬೆನ್ನಲ್ಲೇ ಶಾಸಕರಿಗೆ ಗಾಳ ಹಾಕಲಾಗುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಹೆಸರು ಬಹಿರಂಗಪಡಿಸಿದ ಸಿಎಂ
ಸಿಎಲ್‌ಪಿ ಸಭೆಯಲ್ಲಿ ಅತ್ಯಂತ ಗಂಭೀರವಾಗಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಜೆಡಿಎಸ್ ಕಡೆಯಿಂದ ದೂರವಾಣಿ ಕರೆ ಬಂದಿರುವುದನ್ನು ನೇರವಾಗಿ ಪ್ರಸ್ತಾಪಿಸಿದರು. ಕೇವಲ ಗೋಪಾಲಕೃಷ್ಣ ಮಾತ್ರವಲ್ಲದೆ, ಪಕ್ಷದ ಇನ್ನುಳಿದ ಕೆಲವು ಶಾಸಕರಿಗೂ ಜೆಡಿಎಸ್ ನಾಯಕರ ಕಡೆಯಿಂದ ಇಂತಹ ಆಮಿಷದ ಕರೆಗಳು ಬಂದಿರುವ ಸಾಧ್ಯತೆ ದಟ್ಟವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಸಕರಿಗೆ ಸಿಎಂ ಖಡಕ್ ವಾರ್ನಿಂಗ್
"ಯಾವುದೇ ಕಾರಣಕ್ಕೂ ವಿರೋಧ ಪಕ್ಷಗಳ ಆಮಿಷಗಳಿಗೆ ಬಲಿಯಾಗಬೇಡಿ. ನಮ್ಮ ಪ್ರತಿಯೊಬ್ಬ ಶಾಸಕರ ಮತವೂ ಪಕ್ಷಕ್ಕೆ ಅತ್ಯಮೂಲ್ಯವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪುಗಳಿಗೂ ಅವಕಾಶ ನೀಡಬಾರದು. ಹೈಕಮಾಂಡ್ ಹಾಗೂ ಪಕ್ಷ ಯಾವ ಅಭ್ಯರ್ಥಿಗೆ ಮತ ಚಲಾಯಿಸಲು ಸೂಚಿಸುತ್ತದೆಯೋ, ಅವರಿಗೇ ಕಡ್ಡಾಯವಾಗಿ ಮತ ಹಾಕಬೇಕು. ಯಾರೂ ಕೂಡ ಅಡ್ಡ ಮತದಾನ ಮಾಡುವ ಸಾಹಸಕ್ಕೆ ಕೈಹಾಕಬೇಡಿ." ಎಂದು ಸೂಚನೆ ನೀಡಿದರು.
ಒಗ್ಗಟ್ಟಿನ ಮಂತ್ರ ಜಪಿಸಿದ ಡಿಕೆಶಿ
ಪಕ್ಷದಲ್ಲಿ ಅಸಮಾಧಾನವಿದೆ ಎಂಬ ಮಾಧ್ಯಮಗಳ ಹಾಗೂ ವಿರೋಧ ಪಕ್ಷಗಳ ವರದಿಗಳನ್ನು ಸಿಎಂ ತಳ್ಳಿಹಾಕಿದರು. "ನಾನು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಂಪೂರ್ಣವಾಗಿ ಒಗ್ಗಟ್ಟಿನಿಂದ ಇದ್ದೇವೆ. ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ನಮಗೆ ಎಷ್ಟೇ ಪ್ರಚೋದನೆ ನೀಡಿದರೂ, ನಮ್ಮ ನಡುವಿನ ಒಗ್ಗಟ್ಟನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನಲ್ಲಿ ನಡೆದಿರುವ ಈ ಅಧಿಕಾರ ಹಸ್ತಾಂತರ ಇಡೀ ದೇಶಕ್ಕೆ ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಶಾಸಕರೂ ಒಗ್ಗಟ್ಟು ಕಾಯ್ದುಕೊಳ್ಳಬೇಕು," ಎಂದು ಕರೆ ನೀಡಿದರು.
'ಪ್ರತಿಯೊಬ್ಬರ ಮೇಲೆ ಕಣ್ಣಿಟ್ಟಿದ್ದೇವೆ!'
ಶಾಸಕರಿಗೆ ಎಚ್ಚರಿಕೆಯ ಜೊತೆಗೆ ಭರವಸೆಯನ್ನೂ ನೀಡಿರುವ ಮುಖ್ಯಮಂತ್ರಿಗಳು, "ನಾವು ಪ್ರತಿಯೊಬ್ಬ ಶಾಸಕರ ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಎಚ್ಚರಿಸಿದ್ದಾರೆ. ಅದೇ ಹೊತ್ತಿಗೆ, ಶಾಸಕರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಲಿದೆ. ಶಾಸಕರ ಕ್ಷೇತ್ರಗಳ ಕೋರಿಕೆಗಳನ್ನು ಹಾಗೂ ಬೇಡಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಸವಾಲುಗಳಿರುವುದು ನಿಜ, ಆದರೆ ಎಲ್ಲವನ್ನೂ ತೂಗಿಸಿಕೊಂಡು ಹೋಗಲು ಎಲ್ಲ ಶಾಸಕರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.
ಜನಪ್ರಿಯ ಯೋಜನೆಗಳ ಸದ್ಬಳಕೆಗೆ ಸೂಚನೆ
ಸರ್ಕಾರ ಜಾರಿಗೆ ತರುತ್ತಿರುವ ಜನಪರ ಯೋಜನೆಗಳ ಕುರಿತು ಮಾತನಾಡಿದ ಸಿಎಂ, "ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ಅದರೊಂದಿಗೆ 'ಭಾರತ್ ಜೋಡೋ ಯುವಕ ಸಂಘ'ಕ್ಕೆ ಹತ್ತು ಲಕ್ಷ ರೂ. ನೀಡುವಂತಹ ವಿನೂತನ ಯೋಜನೆಗಳನ್ನು ತರುತ್ತಿದ್ದೇವೆ. ಜನರಿಗಾಗಿ ಇನ್ನೂ ಹತ್ತು ಹಲವು ಯೋಜನೆಗಳನ್ನು ತರಲಿದ್ದೇವೆ. ಇಷ್ಟೆಲ್ಲಾ ಉತ್ತಮ ಯೋಜನೆಗಳಿದ್ದೂ, ಇದನ್ನು ನಾವು ಜನರಿಗೆ ತಲುಪಿಸಿ ಸದ್ಬಳಕೆ ಮಾಡಿಕೊಳ್ಳದಿದ್ದರೆ ನಮ್ಮಂತ ಮೂರ್ಖರು ಯಾರೂ ಇರಲ್ಲ" ಎಂದು ಸ್ವಪಕ್ಷದ ಶಾಸಕರಿಗೆ ಜನಪ್ರಿಯ ಯೋಜನೆಗಳ ಪ್ರಚಾರ ನಡೆಸುವಂತೆ ಕಿವಿಮಾತು ಹೇಳಿದರು.

