
ಬೆಂಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದ ಹೈವೋಲ್ಟೇಜ್ ಸಭೆ; ಉಭಯ ಪಕ್ಷಗಳಲ್ಲಿ ಕೌತುಕ
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯವರು ಹೈಕಮಾಂಡ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕೆ ತಂತ್ರ ರೂಪಿಸಿದರೆ, ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್ ತನ್ನ ಆಂತರಿಕ ಅಸಮಾಧಾನ ಶಮನಗೊಳಿಸಲು ಕಸರತ್ತು ನಡೆಸಿದೆ.
ಕರ್ನಾಟಕ ರಾಜ್ಯ ರಾಜಕಾರಣ ಭಾನುವಾರ ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಮುಂದಿನ ರಾಜಕೀಯ ಚದುರಂಗದಾಟಕ್ಕೆ ಈಗಿನಿಂದಲೇ ಕೌಂಟ್‌ಡೌನ್ ಆರಂಭಿಸಿದ್ದಾರೆ. ಎರಡೂ ಪಕ್ಷದ ಹಿರಿಯ ನಾಯಕರು ಭಾನುವಾರ(ಮೇ 24) ಮಹತ್ವದ "ಹೈವೋಲ್ಟೇಜ್" ಸಭೆಗಳನ್ನು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಪಕ್ಷ ಸಂಘಟನೆಗೆ ಖಡಕ್ ಸೂಚನೆ
ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದು, ಪಕ್ಷದ ಸಂಘಟನೆಗೆ ಸೂಚನೆ ನೀಡಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಉಪಾಹಾರ ಸೇವಿಸಿದ ಬಳಿಕ ನಿತಿನ್ ನಬಿನ್ ಅವರು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಬಳಿಕ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯದ ಎಲ್ಲಾ ಬಿಜೆಪಿ ಶಾಸಕರು, ಸಂಸದರು ಮತ್ತು ಕೋರ್ ಕಮಿಟಿ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿ, ಸಂಘಟನೆಯ ಪಾಠ ಮಾಡಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆಯೂ ನಿತಿನ್ ನಬಿನ್ ಅವರು ನಾಯಕರ ಅಭಿಪ್ರಾಯಗಳನ್ನು ಆಲಿಸಿದ್ದು, ಶೀಘ್ರದಲ್ಲೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಯಕರಿಗೆ ಹೈಕಮಾಂಡ್ ಟಾಸ್ಕ್ ಏನು?
"ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಸಾಧನೆಗಳನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು, ಹಗರಣಗಳು ಮತ್ತು ಜನವಿರೋಧಿ ನೀತಿಗಳನ್ನು ಜನರ ಮುಂದೆ ಬಹಿರಂಗಪಡಿಸಿ ಬೀದಿಗಿಳಿದು ಹೋರಾಟ ಮಾಡಬೇಕು," ಎಂದು ನಿತಿನ್ ನಬಿನ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಅವರು ನೀಲನಕ್ಷೆ ಸಿದ್ಧಪಡಿಸಿದರು.
ದೇವನಹಳ್ಳಿಯಲ್ಲಿ ʼಕೈʼ ನಾಯಕರ ಮಂಥನ
ಈ ನಡುವೆ, ದೇವನಹಳ್ಳಿ ರೆಸಾರ್ಟ್ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಸಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಳಂಬದ ಅಸಮಾಧಾನದ ನಡುವೆ ಶಾಸಕಾಂಗ ಪಕ್ಷದ ಸಭೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಎಸ್‌ಐಆರ್‌ನಂತಹ ಪ್ರಮುಖ ನೀತಿಗಳ ಹಿನ್ನೆಲೆಯಲ್ಲಿ ಶಾಸಕರು ಕ್ಷೇತ್ರದಲ್ಲಿ ವಹಿಸಬೇಕಾದ ಎಚ್ಚರಿಕೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಪ್ರಸ್ತುತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಶಾಸಕಾಂಗ ಸಭೆ ನಡೆಸಿರುವುದು ನಾಯಕತ್ವ ಬದಲಾವಣೆ ಕುರಿತು ಚರ್ಚೆ ಇಂಬು ನೀಡಿದೆ.
ಇನ್ನು ಸಚಿವ ಸಂಪುಟ ಪುನಾರಚನೆ ವಿಳಂಬವಾಗುತ್ತಿರುವುದು ಹಿರಿಯ ಶಾಸಕರ ಅಸಮಾಧಾನ ಕಾರಣವಾಗಿದ್ದು, ಹಲವರು ಬಹಿರಂಗವಾಗಿಯೇ ಹೈಕಮಾಂಡ್ ನಾಯಕರ ಬಳಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಕರ್ನಾಟಕ ನಾಯಕತ್ವ ಗೊಂದಲ ಬಗೆಹರಿಸುವಂತೆ ಸೂಚಿಸಿದ್ದರು. ಹೀಗಿರುವಾಗ ಶಾಸಕಾಂಗ ಪಕ್ಷದ ಸಭೆ ನಡೆಸಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ಒಂದೆಡೆ ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯವರು ಹೈಕಮಾಂಡ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕೆ ತಂತ್ರ ರೂಪಿಸಿದರೆ, ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್ ತನ್ನ ಆಂತರಿಕ ಅಸಮಾಧಾನ ಶಮನಗೊಳಿಸಲು ಕಸರತ್ತು ನಡೆಸಿದೆ. ಒಟ್ಟಾರೆ ಈ ಎರಡೂ ಸಭೆಗಳು ಕರ್ನಾಟಕ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ದಿಕ್ಸೂಚಿಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

