CM Chair Fight|ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಕುತ್ತು? ಹೈಕಮಾಂಡ್‌ಗೆ ಅಹಿಂದ ಚಳುವಳಿ ಪತ್ರ ಬರೆದಿದ್ದು ಯಾಕೆ?
x
ಅಹಿಂದ ನಾಯಕರಿಂದ ಕಾಂಗ್ರೆಸ್​​ ಹೈಕಮಾಂಡ್​​ಗೆ ಪತ್ರ.

CM Chair Fight|ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಕುತ್ತು? ಹೈಕಮಾಂಡ್‌ಗೆ ಅಹಿಂದ ಚಳುವಳಿ ಪತ್ರ ಬರೆದಿದ್ದು ಯಾಕೆ?

ರಾಜ್ಯದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳ ಕಲ್ಯಾಣದ ಹಿತದೃಷ್ಟಿಯಿಂದ ಸಿದ್ದರಾಮಯ್ಯನವರ ನಾಯಕತ್ವ ಸುದೀರ್ಘ ಕಾಲಕ್ಕೆ ಅತ್ಯಗತ್ಯವಾಗಿದೆ ಎಂದು ಅಹಿಂದ ಪ್ರತಿಪಾದಿಸಿದೆ.


Click the Play button to hear this message in audio format

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ 'ಅಹಿಂದ ಚಳುವಳಿ' ಸಂಘಟನೆಯು ಕಾಂಗ್ರೆಸ್ ಹೈಕಮಾಂಡ್‌ಗೆ ಮಹತ್ವದ ಪತ್ರವೊಂದನ್ನು ಬರೆದಿದ್ದು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಪೂರ್ಣಾವಧಿಗೆ ಮುಂದುವರಿಸುವಂತೆ ಬಲವಾಗಿ ಆಗ್ರಹಿಸಿದೆ. ಈ ಪತ್ರದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಮತ್ತೆ ಕುತ್ತು ಬಂದಿದೆಯೇ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೆ, ಬಜೆಟ್​ ನಡುವೆಯೇ ಸಿಎಂ ಸ್ಥಾನ ಬದಲಾವಣೆಗೆ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ರಾಜ್ಯದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳ ಕಲ್ಯಾಣದ ಹಿತದೃಷ್ಟಿಯಿಂದ ಸಿದ್ದರಾಮಯ್ಯನವರ ನಾಯಕತ್ವ ಸುದೀರ್ಘ ಕಾಲಕ್ಕೆ ಅತ್ಯಗತ್ಯವಾಗಿದೆ ಎಂದು ಸಂಘಟನೆ ಪ್ರತಿಪಾದಿಸಿದೆ. ಮಾರ್ಚ್ 23ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಮನವಿ ಪತ್ರ ರವಾನಿಸಲಾಗಿದೆ.


ಸಿದ್ದರಾಮಯ್ಯ ರಾಜೀನಾಮೆ ನೀಡಿದರೂ ಒಪ್ಪಬಾರದು ಎಂಬ ಮನವಿ

ರಾಜ್ಯದಲ್ಲಿ ಅಹಿಂದ ವರ್ಗದ ಜನರು ನೆಮ್ಮದಿಯಿಂದ ಮೂರು ಹೊತ್ತಿನ ಊಟ ಮಾಡುವಂತಾಗಲು ಹಾಗೂ ಮಹಿಳೆಯರ ಸಾಮಾಜಿಕ ಸಬಲೀಕರಣಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಪ್ರಮುಖ ಕಾರಣವಾಗಿದೆ ಎಂದು ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿದೆ. ಒಂದು ವೇಳೆ ಪಕ್ಷದ ಆಂತರಿಕ ಒತ್ತಡ, ರಾಜಕೀಯ ಸನ್ನಿವೇಶಗಳು ಅಥವಾ ಇತರ ತಂತ್ರಗಾರಿಕೆಗಳಿಗೆ ಮಣಿದು ಸಿದ್ದರಾಮಯ್ಯ ಅವರು ಖುದ್ದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಹೈಕಮಾಂಡ್ ಬಳಿ ಅನುಮತಿ ಕೇಳಿದರೂ, ಯಾವುದೇ ಕಾರಣಕ್ಕೂ ಆ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಅಹಿಂದ ವರ್ಗವು ಕಾಂಗ್ರೆಸ್ ಪಕ್ಷದ ಕಾಯಂ ವೋಟ್ ಬ್ಯಾಂಕ್ ಆಗಿರುವುದರಿಂದ, ಈ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವುದು ಪಕ್ಷದ ಅತಿ ದೊಡ್ಡ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಲಾಗಿದೆ.

ಪರ್ಯಾಯ ನಾಯಕರಾಗಿ ಕೆ.ಎನ್. ರಾಜಣ್ಣ ಹೆಸರು ಪ್ರಸ್ತಾಪ

ರಾಜ್ಯದ ರಾಜಕೀಯ ಚಿತ್ರಣದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಅತ್ಯಂತ ಪ್ರತಿಕೂಲ ಬೆಳವಣಿಗೆಗಳು ಎದುರಾದರೆ, ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಮತ್ತೋರ್ವ ಅಹಿಂದ ನಾಯಕರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಹಿರಿಯ ರಾಜಕಾರಣಿ, ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಮುಂದಿನ ನಾಯಕತ್ವಕ್ಕೆ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ಪರ್ಯಾಯವಾಗಿ ಆಯ್ಕೆ ಮಾಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯಾಗುವುದೇ ಆದರೆ, ಆ ಅಧಿಕಾರ ಅಹಿಂದ ವರ್ಗದ ಕೈತಪ್ಪಿ ಹೋಗಬಾರದು ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ಹೈಕಮಾಂಡ್‌ಗೆ ರವಾನಿಸಲಾಗಿದೆ.

ಅಸಮಾನತೆಯ ಕಳವಳ

ದೇಶದಲ್ಲಿ ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಯಲ್ಲಿದ್ದರೂ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಇಂದಿಗೂ ಮೇಲ್ವರ್ಗದವರ ಪ್ರಾಬಲ್ಯವೇ ಮುಂದುವರಿದಿದೆ ಎನ್ನುವುದನ್ನು ಪತ್ರದಲ್ಲಿ ಅಂಕಿ-ಅಂಶಗಳ ಸಮೇತ ವಿವರಿಸಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಅಂದಾಜು ಶೇಕಡಾ 80ರಷ್ಟಿರುವ ಅಹಿಂದ ಸಮುದಾಯದ ಕೇವಲ 100 ಶಾಸಕರು ಮಾತ್ರ ಆಯ್ಕೆಯಾಗಿದ್ದರೆ, ಕೇವಲ ಶೇಕಡಾ 20ರಷ್ಟಿರುವ ಮೇಲ್ವರ್ಗ ಹಾಗೂ ಜಮೀನ್ದಾರಿ ವರ್ಗದ ಬರೋಬ್ಬರಿ 122 ಶಾಸಕರಿದ್ದಾರೆ ಎಂಬ ದತ್ತಾಂಶವನ್ನು ಹೈಕಮಾಂಡ್ ಮುಂದಿಡಲಾಗಿದೆ.

ಇದರ ಜೊತೆಗೆ ದೇಶದಲ್ಲಿ ಹೆಚ್ಚುತ್ತಿರುವ ಸಂಪತ್ತಿನ ಅಸಮಾನತೆ, ನಿರುದ್ಯೋಗ, ಹಾಗೂ ಖಾಸಗೀಕರಣದಿಂದಾಗಿ ಮೀಸಲಾತಿಗೆ ಆಗುತ್ತಿರುವ ಕುತ್ತು ಅಹಿಂದ ವರ್ಗದ ಆದಾಯದ ಮೂಲಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುದರ ಬಗ್ಗೆಯೂ ಸುದೀರ್ಘವಾಗಿ ಕಳವಳ ವ್ಯಕ್ತಪಡಿಸಲಾಗಿದೆ.

Read More
Next Story