ವರ್ಷಾಂತ್ಯದೊಳಗೆ ಪಂಚಾಯತ್ ಚುನಾವಣೆ; 4,000 ಹುದ್ದೆಗಳ ಭರ್ತಿಗೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ
x

ಸಾಂದರ್ಭಿಕ ಚಿತ್ರ

ವರ್ಷಾಂತ್ಯದೊಳಗೆ ಪಂಚಾಯತ್ ಚುನಾವಣೆ; 4,000 ಹುದ್ದೆಗಳ ಭರ್ತಿಗೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿರುವ 1,400 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಶೀಘ್ರದಲ್ಲೇ ಆರಂಭವಾಗಲಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು ಆದೇಶಿಸಲಾಗಿದೆ ಎಂದರು.


Click the Play button to hear this message in audio format

ವರ್ಷದ ಕೊನೆಯೊಳಗೆ ರಾಜ್ಯದ ಎಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುವುದು ಹಾಗೂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 4,000 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬೆಂಗಳೂರಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (KRIDL) ಸಭಾಂಗಣದಲ್ಲಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಪರಿಚಯಾತ್ಮಕ ಸಭೆ ನಡೆಸಿದ ಬಳಿಕ ಅವರು, ಅಧಿಕಾರ ವಿಕೇಂದ್ರೀಕರಣವು ದಿವಂಗತ ರಾಜೀವ್ ಗಾಂಧೀ ಅವರ ಕನಸಾಗಿತ್ತು. ಅದನ್ನು ನನಸು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. "ಮುಂದಿನ 8 ವಾರಗಳಲ್ಲಿ ಪಂಚಾಯತ್‌ಗಳ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಇದಾದ ಬಳಿಕ ರಾಜ್ಯ ಚುನಾವಣೆ ಆಯೋಗವು ಚುನಾವಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದೆ" ಎಂದು ಸ್ಪಷ್ಟಪಡಿಸಿದರು.

ಸಚಿವ ಈಶ್ವರ್‌ ಖಂಡ್ರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೆಪಿಎಸ್‌ಸಿ, ಕೆಇಎ ಮೂಲಕ ನೇಮಕಾತಿ

ಇಲಾಖೆಯಲ್ಲಿ ಒಟ್ಟು 25,540 ಮಂಜೂರಾದ ಹುದ್ದೆಗಳಿದ್ದು, ಸದ್ಯ 8,770 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಎ, ಬಿ, ಸಿ ಮತ್ತು ಡಿ ವರ್ಗದ ಒಟ್ಟು 4,000 ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (KPSC) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಅತ್ಯಂತ ಪಾರದರ್ಶಕವಾಗಿ ಭರ್ತಿ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿರುವ 1,400 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಶೀಘ್ರದಲ್ಲೇ ಆರಂಭವಾಗಲಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು ಆದೇಶಿಸಲಾಗಿದೆ ಎಂದರು.

ಕಲುಷಿತ ನೀರು ಪೂರೈಕೆಯಾದರೆ ಕಠಿಣ ಕ್ರಮ

ಇತ್ತೀಚೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಕಲುಷಿತ ನೀರು ಸೇವಿಸಿ ಮುಗ್ಧ ಜನರು ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವುದು ಪಂಚಾಯ್ತಿಗಳ ಮೊದಲ ಕರ್ತವ್ಯ ಎಂದರು. ಜಲಮೂಲಗಳು ಕಲುಷಿತಗೊಳ್ಳದಂತೆ ತಡೆಯಲು ಮತ್ತು ನಿಯಮಿತವಾಗಿ 'ಎನ್‌ಎಬಿಎಲ್‌' (NABL) ಮಾನ್ಯತೆ ಪಡೆದ ಲ್ಯಾಬ್‌ಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇ-ಸ್ವತ್ತು ಸರ್ವರ್ ಸಮಸ್ಯೆಗೆ ಮುಕ್ತಿ

ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ಅರ್ಜಿ ಸಲ್ಲಿಸಿದವರಿಗೆ ಖಾತಾ ವಿಳಂಬವಾಗುತ್ತಿರುವ ದೂರುಗಳು ಬಂದಿದ್ದು, ತಕ್ಷಣವೇ ಸರ್ವರ್ ಸಮಸ್ಯೆ ಬಗೆಹರಿಸಲು ತಾಂತ್ರಿಕ ತಂಡಕ್ಕೆ ಸೂಚಿಸಲಾಗಿದೆ. ಇದರೊಂದಿಗೆ ಇಲಾಖೆಯ ವ್ಯಾಪ್ತಿಯ ಕೆರೆ ಒತ್ತುವರಿ ತೆರವುಗೊಳಿಸುವುದು, ಸರ್ಕಾರಿ ಆಸ್ತಿಗಳನ್ನು ರಕ್ಷಿಸಲು ಜಿಯೋ ಟ್ಯಾಗ್ ಮಾಡುವುದು ಮತ್ತು ನರೇಗಾ ಯೋಜನೆಯಡಿ ರಸ್ತೆ ಬದಿಯಲ್ಲಿ ನೆಟ್ಟಿರುವ ಸಸಿಗಳ ಸಾಮಾಜಿಕ ಅರಣ್ಯೀಕರಣ ಆಡಿಟ್ ನಡೆಸಲು ಸಚಿವರು ಕಠಿಣ ನಿರ್ದೇಶನ ನೀಡಿದರು.

Read More
Next Story