
ವಿಧಾನ ಪರಿಷತ್ ಚುನಾವಣೆ ಇಂದು: ಕಾಂಗ್ರೆಸ್-ಜೆಡಿಎಸ್ ನಡುವೆ 7ನೇ ಸ್ಥಾನಕ್ಕೆ ತೀವ್ರ ಪೈಪೋಟಿ
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ. ಕಾಂಗ್ರೆಸ್ 4, ಬಿಜೆಪಿ 2 ಸ್ಥಾನ ಗೆಲ್ಲುವ ಸಾಧ್ಯತೆ. 7ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ, ಅಡ್ಡಮತದಾನದ ಭೀತಿ ನಡುವೆ ರಾಜಕೀಯ ಕುತೂಹಲ ಹೆಚ್ಚಳ.
ರಾಜ್ಯ ರಾಜಕೀಯದ ಗಮನ ಸೆಳೆದಿರುವ ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ ನಡೆಯಲಿದೆ. 7 ಸ್ಥಾನಗಳಿಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಸಂಖ್ಯಾಬಲದ ಲೆಕ್ಕಾಚಾರ ಪ್ರಕಾರ ಕಾಂಗ್ರೆಸ್ 4 ಸ್ಥಾನಗಳು ಹಾಗೂ ಬಿಜೆಪಿ 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆದರೆ ಉಳಿದ ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಸವಾಲು
ವಿಧಾನಸಭೆಯಲ್ಲಿ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ಗೆ ಸವಾಲು ಹಾಕಿದೆ. ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲಾ ರೀತಿಯ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದು, ಅಡ್ಡಮತದಾನದ ಭೀತಿ ಹಿನ್ನೆಲೆಯಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿದೆ.
ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ
ಗುರುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ವಿಧಾನಸೌಧದ ಸುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿಯಾಗಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ರೆಸಾರ್ಟ್‌ನಿಂದ ನೇರವಾಗಿ ಮತದಾನಕ್ಕೆ ಶಾಸಕರು
ಅಡ್ಡಮತದಾನದ ಆತಂಕದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ತಂಗಿಸಲಾಗಿದೆ. ಅಲ್ಲಿಂದಲೇ ಎಲ್ಲಾ ಶಾಸಕರು ಒಟ್ಟಾಗಿ ಬಸ್ ಮೂಲಕ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡುವ ಸಾಧ್ಯತೆ ಇದೆ.
ಗೆಲುವಿಗೆ ಬೇಕು 28 ಮತಗಳು
224 ಸದಸ್ಯರ ವಿಧಾನಸಭೆಯಲ್ಲಿ ಪ್ರಸ್ತುತ 222 ಸದಸ್ಯರಿದ್ದಾರೆ. ಮಾಜಿ ಸಚಿವ ಡಿ. ಸುಧಾಕರ್ ನಿಧನ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅನರ್ಹತೆಯಿಂದ ಎರಡು ಸ್ಥಾನಗಳು ಖಾಲಿಯಾಗಿವೆ. ಪ್ರತಿ ಅಭ್ಯರ್ಥಿಯ ಗೆಲುವಿಗೆ ಕನಿಷ್ಠ 28 ಮತಗಳ ಅಗತ್ಯವಿದೆ. ಸ್ಪೀಕರ್ ಸೇರಿ ಕಾಂಗ್ರೆಸ್ ಬಳಿ 136 ಸದಸ್ಯರ ಬಲವಿದ್ದು, ಪಕ್ಷೇತರರ ಬೆಂಬಲವೂ ಇದೆ. ಜೊತೆಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಪೈಕಿ ಸೋಮಶೇಖರ್ ಮತ್ತು ಹೆಬ್ಬಾರ್ ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರುವುದರಿಂದ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಇದರಿಂದ ಕಾಂಗ್ರೆಸ್ ಒಟ್ಟು 141 ಮತಗಳ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದೆ.
ಬಿಜೆಪಿಯು ಪ್ರಸ್ತುತ 62 ಶಾಸಕರ ಬಲ ಹೊಂದಿದೆ. ಈ ಸಂಖ್ಯಾಬಲದ ಆಧಾರದಲ್ಲಿ ಇಬ್ಬರು ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತಗಳನ್ನು ಹಂಚಿದರೆ ಬಿಜೆಪಿಗೆ ನಾಲ್ಕು ಹೆಚ್ಚುವರಿ ಮತಗಳು ಉಳಿಯಲಿವೆ.
18 ಶಾಸಕರ ಬಲ ಹೊಂದಿರುವ ಜೆಡಿಎಸ್‌ಗೆ ಬಿಜೆಪಿ ಹೆಚ್ಚುವರಿ ಮತಗಳ ಬೆಂಬಲ ಸಿಗುವ ನಿರೀಕ್ಷೆಯಿದೆ. ಅಲ್ಲದೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ ಬೆಂಬಲ ನೀಡುವ ಸಾಧ್ಯತೆಗಳೂ ಚರ್ಚೆಯಲ್ಲಿವೆ.
ಎಲ್ಲರ ಚಿತ್ತ 7ನೇ ಸ್ಥಾನದತ್ತ
ಸಂಖ್ಯಾಬಲದ ಲೆಕ್ಕಾಚಾರ ಪ್ರಕಾರ ಕಾಂಗ್ರೆಸ್ 4 ಸ್ಥಾನ ಹಾಗೂ ಬಿಜೆಪಿ 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಆದರೆ 7ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅಡ್ಡಮತದಾನ, ಹೆಚ್ಚುವರಿ ಮತಗಳ ವರ್ಗಾವಣೆ ಮತ್ತು ಸ್ವತಂತ್ರ ಸದಸ್ಯರ ಬೆಂಬಲ ಅಂತಿಮ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರುವ ಸಾಧ್ಯತೆ ಇದೆ.

