
ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ವಿಧಾಪರಿಷತ್ ಗಣಿತ: ಡಿಕೆಶಿ ಚದುರಂಗದಾಟಕ್ಕೆ ಎಚ್‌ಡಿಕೆ ಚೆಕ್‌ಮೇಟ್!
ಒಬ್ಬ ಅಭ್ಯರ್ಥಿ ಗೆಲ್ಲಲು 28 ಮತ ಅಗತ್ಯವಿದೆ. 134 ಶಾಸಕರ ಬಲವಿರುವ ಕಾಂಗ್ರೆಸ್‌ನ ನಾಲ್ಕು ಅಭ್ಯರ್ಥಿಗಳಗ ಗೆಲುವಿಗೆ 112 ಮತ ಬೇಕು. ಐದನೇ ಅಭ್ಯರ್ಥಿ ಗೆಲುವಿನಲ್ಲಿ ಕುದುರೆ ವ್ಯಾಪಾರ ಆಗಲಿದೆಯೇ?
ರಾಜ್ಯ ರಾಜಕಾರಣದಲ್ಲಿ ಈಗ ವಿಧಾನ ಪರಿಷತ್ ಚುನಾವಣೆಯ ಜಿದ್ದಾಜಿದ್ದಿನ ಆಟ ಶುರುವಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯು ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಆರಂಭದಲ್ಲಿ ಅತ್ಯಂತ ಸರಳವಾಗಿ ನಡೆಯಲಿದೆ ಎಂದು ಭಾವಿಸಲಾಗಿದ್ದ ಈ ಚುನಾವಣೆ, ಜೆಡಿಎಸ್ ಅಭ್ಯರ್ಥಿಯ ಅನಿರೀಕ್ಷಿತ ಪ್ರವೇಶದಿಂದಾಗಿ ಈಗ ಅಡ್ಡಮತದಾನ ಮತ್ತು ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಿದೆ.
ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು
ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಸಂಖ್ಯಾಬಲದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ನಾಲ್ಕು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಅವಕಾಶವಿತ್ತು. ಆದರೆ, ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ, ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸಿದೆ.
ಕಾಂಗ್ರೆಸ್ ಪರವಾಗಿ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣ ಕಮನಕೂರು, ಮಳವಳ್ಳಿ ಶಿವಣ್ಣ ಹಾಗೂ ಪಿ.ವಿ. ಮೋಹನ್ ಮೊದಲ ನಾಲ್ಕು ಅಭ್ಯರ್ಥಿಗಳಾಗಿದ್ದರೆ, ವಿನಯ್ ಕಾರ್ತಿಕ್ ಐದನೇ ಅಭ್ಯರ್ಥಿಯಾಗಿದ್ದಾರೆ. ಇತ್ತ ಬಿಜೆಪಿಯಿಂದ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಕಣದಲ್ಲಿದ್ದಾರೆ.
ಸಂಖ್ಯಾಬಲದ ಲೆಕ್ಕಾಚಾರ ಹೀಗಿದೆ
ಪ್ರಸ್ತುತ ವಿಧಾನಸಭೆಯಲ್ಲಿ ಒಟ್ಟು 222 ಸದಸ್ಯರಿದ್ದಾರೆ (ಇಬ್ಬರು ಶಾಸಕರ ನಿಧನ ಮತ್ತು ಅನರ್ಹತೆಯಿಂದಾಗಿ ಸ್ಥಾನಗಳು ಖಾಲಿ ಇವೆ). ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 28 ಮತಗಳ ಅಗತ್ಯವಿದೆ. ಕಾಂಗ್ರೆಸ್ 134 ಶಾಸಕರ ಬಲ ಹೊಂದಿರುವ ಕಾಂಗ್ರೆಸ್‌ಗೆ ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಿಸಲು 112 ಮತಗಳು ಬೇಕು. ಇನ್ನುಳಿದ 22 ಮತಗಳೊಂದಿಗೆ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರನ್ನು ಗೆಲ್ಲಿಸಲು ಕಾಂಗ್ರೆಸ್‌ಗೆ ಇನ್ನೂ 6 ಮತಗಳ ಕೊರತೆಯಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ
ಬಿಜೆಪಿ ಬಳಿ 62 ಶಾಸಕರಿದ್ದಾರೆ. ಇಬ್ಬರು ಅಭ್ಯರ್ಥಿಗಳ ಗೆಲುವಿಗೆ 56 ಮತಗಳನ್ನು ಬಳಸಿದ ಬಳಿಕ ಬಿಜೆಪಿಯ ಬಳಿ 6 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. 18 ಶಾಸಕರನ್ನು ಹೊಂದಿರುವ ಜೆಡಿಎಸ್, ಬಿಜೆಪಿಯ ಈ 6 ಮತಗಳನ್ನು ಪಡೆದರೆ ಒಟ್ಟು ಬಲ 24ಕ್ಕೆ ಏರಲಿದೆ. ಆಗ ಗೆಲುವಿಗೆ ಕೇವಲ 4 ಮತಗಳ ಅವಶ್ಯಕತೆ ಇರುತ್ತದೆ.
ಅಡ್ಡಮತದಾನದ ಭೀತಿ
ಈ ಚುನಾವಣೆಯು 'ಗೌಪ್ಯ ಮತದಾನ'ದ ಮೂಲಕ ನಡೆಯುವುದರಿಂದ ರಾಜಕೀಯ ಪಕ್ಷಗಳಿಗೆ ಅಡ್ಡಮತದಾನದ ಭೀತಿ ಎದುರಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಶಾಸಕರು ಹಾಗೂ ಪಕ್ಷೇತರರ ಮತಗಳು ಇಲ್ಲಿ ನಿರ್ಣಾಯಕವಾಗಲಿವೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ತಂತ್ರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗೋವಿಂದರಾಜು ಅವರ ಮೂಲಕ 'ಚೆಕ್‌ಮೇಟ್' ನೀಡಲು ಮುಂದಾಗಿದ್ದು, ಜೂ. 18ರಂದು ನಡೆಯುವ ಮತದಾನದ ಫಲಿತಾಂಶವು ರಾಜ್ಯ ರಾಜಕಾರಣದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ನಿರ್ಧರಿಸಲಿದೆ. ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರೆ, ಜೆಡಿಎಸ್ ತನ್ನ ಅಸ್ತಿತ್ವ ಮತ್ತು ಮೈತ್ರಿಯ ಬಲ ಪ್ರದರ್ಶಿಸಲು ಈ ಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ.

