
Assembly Session|ಖಾದರ್ ಖದರ್: ಸದನ ಕಲಾಪ ಗೈರಾಗುವ ಶಾಸಕರಿಗೆ ʼಬಯೋಮೆಟ್ರಿಕ್ʼ ಬಿಸಿ
ಕಲಾಪದ ಅವಧಿಯಲ್ಲಿ ಶಾಸಕರ ಉಪಸ್ಥಿತಿಯನ್ನು ಪತ್ತೆಹಚ್ಚಲು ಇದರಿಂದ ಸುಲಭವಾಗುತ್ತದೆ. ಶಾಸಕರ ದಿನಭತ್ಯೆಯ ಲೆಕ್ಕಾಚಾರವನ್ನೂ ಈ ಡಿಜಿಟಲ್ ದಾಖಲೆಯ ಆಧಾರದ ಮೇಲೆಯೇ ನಡೆಸಲಾಗುತ್ತದೆ!
ವಿಧಾನಸಭಾ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಮತ್ತು ಸದನದ ಕಲಾಪಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಕ್ಕೆ ಉತ್ತರ ಎಂಬಂತೆ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಹತ್ವದ ಸುಧಾರಣೆಯೊಂದಕ್ಕೆ ಮುಂದಾಗಿದ್ದಾರೆ. ಆ ಮೂಲಕ ಶಾಸಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಮುಂದಿನ ಅಧಿವೇಶನದಿಂದ ಶಾಸಕರಿಗೆ ಬೆರಳಚ್ಚು ಆಧಾರಿತ ‘ಬಯೋ-ಮೆಟ್ರಿಕ್’ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಯು.ಟಿ. ಖಾದರ್ ನಿರ್ಧರಿಸಿದ್ದಾರೆ.
ಇಲ್ಲಿಯವರೆಗೆ ಶಾಸಕರು ಸದನಕ್ಕೆ ಬಂದಾಗ ಪ್ರವೇಶ ದ್ವಾರದಲ್ಲಿ ಇಡಲಾಗುತ್ತಿದ್ದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿದ್ದರು. ಈ ಪದ್ಧತಿಯಲ್ಲಿ ಹಲವು ಲೋಪದೋಷಗಳಿದ್ದವು. ಕೆಲ ಶಾಸಕರು ಸದನಕ್ಕೆ ಬಂದು ಸಹಿ ಮಾಡಿದ ತಕ್ಷಣವೇ ಹೊರಟುಹೋಗುತ್ತಿದ್ದರು. ಇದರಿಂದ ಸದನದಲ್ಲಿ ಗಂಭೀರ ಚರ್ಚೆಗಳು ನಡೆಯುವಾಗ ಜನಪ್ರತಿನಿಧಿಗಳ ಸಂಖ್ಯೆ ಕ್ಷೀಣಿಸುತ್ತಿತ್ತು. ಈಗಿನ ಹೊಸ ವ್ಯವಸ್ಥೆಯು ಈ ಪ್ರವೃತ್ತಿಗೆ ಬ್ರೇಕ್ ಹಾಕುವ ನಿರೀಕ್ಷೆಯಿದೆ.
ಏನಿದು ಬದಲಾವಣೆ?
ವಿಧಾನಸಭೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬಯೋ-ಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಶಾಸಕರು ಸದನವನ್ನು ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ತಮ್ಮ ಬೆರಳಚ್ಚು ಹಾಜರಾತಿಯನ್ನು ಬಯೋಮೆಟ್ರಿಕ್ ಯುಂತ್ರದಲ್ಲಿ ದಾಖಲಿಸುವುದು ಅನಿವಾರ್ಯವಾಗಲಿದೆ. ಇದರಿಂದ ಶಾಸಕರು ಸದನದ ಕಲಾಪದಲ್ಲಿ ಎಷ್ಟು ಹೊತ್ತು ಪಾಲ್ಗೊಂಡಿದ್ದರು ಎಂಬುದು ಅಧಿಕೃತವಾಗಿ ಸ್ಪೀಕರ್ ಕಚೇರಿ ಕೈಸೇರಲಿದೆ.
"ಈ ವ್ಯವಸ್ಥೆಯಿಂದ ಶಾಸಕರು ಸದನದ ಒಳಗಿದ್ದ ನಿಖರ ಸಮಯ ದಾಖಲಾಗುತ್ತದೆ. ಕಲಾಪದ ಅವಧಿಯಲ್ಲಿ ಅವರ ಉಪಸ್ಥಿತಿಯನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಶಾಸಕರ ದಿನಭತ್ಯೆಯ ಲೆಕ್ಕಾಚಾರವನ್ನೂ ಈ ಡಿಜಿಟಲ್ ದಾಖಲೆಯ ಆಧಾರದ ಮೇಲೆಯೇ ನಡೆಸಲಾಗುತ್ತದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಕೆ ಈ ಕಟ್ಟುನಿಟ್ಟಿನ ಕ್ರಮ?
ಕಲಾಪದ ವೇಳೆ ಶಾಸಕರ ಗೈರುಹಾಜರಿ ಮತ್ತು ಶೂನ್ಯ ವೇಳೆಯಂತಹ ಸಂದರ್ಭಗಳಲ್ಲಿ ಸದನ ಖಾಲಿ ಹೊಡೆಯುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ಕೇಳಿಬರುತ್ತಿದ್ದವು. ಜನರ ಸಮಸ್ಯೆಗಳನ್ನು ಚರ್ಚಿಸಲು ಆರಿಸಿ ಬಂದ ಪ್ರತಿನಿಧಿಗಳು ಸದನದಲ್ಲಿ ಹೆಚ್ಚು ಸಮಯ ಕಳೆಯಬೇಕು. ಆದರೆ ಅದು ಹಾಗಾಗುತ್ತಿಲ್ಲ ಎಂಬುದು ಜನರ ಅಕ್ರೋಶವಾಗಿತ್ತು. ಇದಕ್ಕೆ ಸ್ಪಂದಿಸಿರುವ ಸ್ಪೀಕರ್ ಖಾದರ್, ಕಲಾಪದ ಶಿಸ್ತಿನ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಲ್ಲದೆ, ತಂತ್ರಜ್ಞಾನದ ಮೂಲಕ ಶಾಸಕರನ್ನು ನೇರ ಹೊಣೆಗಾರರನ್ನಾಗಿ ಮಾಡಲು ಮುಂದಾಗಿದ್ದಾರೆ.
ಡಿಜಿಟಲ್ ಕ್ರಾಂತಿಯ ಹಾದಿಯಲ್ಲಿ ವಿಧಾನಮಂಡಲ
ಲೋಕಸಭೆಯಲ್ಲಿ ಈಗಾಗಲೇ ಇಂತಹ ಸುಧಾರಿತ ಪದ್ಧತಿಗಳಿದ್ದು, ಕರ್ನಾಟಕವೂ ಈಗ ಆ ಸಾಲಿಗೆ ಸೇರ್ಪಡೆಗೊಳ್ಳುತ್ತಿದೆ. ಕೇವಲ ಹಾಜರಾತಿಯಷ್ಟೇ ಅಲ್ಲದೆ, ಸಂಪೂರ್ಣ ವಿಧಾನಸಭೆಯನ್ನು ಪೇಪರ್-ಲೆಸ್ (Paperless) ಮಾಡುವ 'ಇ-ವಿಧಾನ' ಯೋಜನೆಯ ಭಾಗವಾಗಿಯೂ ಈ ಕ್ರಮವನ್ನು ನೋಡಲಾಗುತ್ತಿದೆ.
ಈ ಬದಲಾವಣೆಗೆ ಶಾಸಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ? ಇದು ಸದನದ ಗುಣಮಟ್ಟವನ್ನು ನಿಜಕ್ಕೂ ಹೆಚ್ಚಿಸುತ್ತದೆಯೇ ಎಂಬುದು ಮುಂದಿನ ಅಧಿವೇಶನದಲ್ಲಿ ಸಾಬೀತಾಗಬೇಕಿದೆ.

