
ಡಿಸಿಎಂ ಡಿ.ಕೆ. ಶಿವಕುಮಾರ್
Iran War Impact | ಎಲ್‌ಪಿಜಿ ಪೂರೈಕೆ ವ್ಯತ್ಯಯ, ಬಿಜೆಪಿ ಸಂಸದರ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ
ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರವೇ ಇದಕ್ಕೆ ಪೂರ್ಣ ಹೊಣೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದ ಪರಿಣಾಮ ಈಗ ನೇರವಾಗಿ ಕನ್ನಡಿಗರ ಅಡುಗೆ ಮನೆಯ ಮೇಲೆ ತಟ್ಟಿದೆ. ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ರಾಜ್ಯಾದ್ಯಂತ ಎಲ್‌ಪಿಜಿ ಕೊರತೆ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಹೋಟೆಲ್‌ಗಳು, ಪಿಜಿ ಮತ್ತು ಹಾಸ್ಟೆಲ್‌ಗಳು ಅನಿಲವಿಲ್ಲದೆ ಪರದಾಡುತ್ತಿದ್ದು, ಅನಿವಾರ್ಯವಾಗಿ ಮೆನು ಬದಲಾವಣೆ ಮಾಡಲಾಗುತ್ತಿದೆ. ಹಲವೆಡೆ ಗ್ಯಾಸ್ ಸಿಲಿಂಡರ್ ಸಿಗದೆ ಮತ್ತೆ ಹಳೆಯ ಕಾಲದಂತೆ ಸೌದೆ ಒಲೆ ಹಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಉಂಟಾಗಿರುವ ಈ ಗಂಭೀರ ಪರಿಸ್ಥಿತಿಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜ್ಯದ ಇತರೆ ವಿಚಾರಗಳ ಬಗ್ಗೆ ಮಾತನಾಡುವ ಬಿಜೆಪಿಯ ಸಂಸದರು, ಅಡುಗೆ ಅನಿಲ ಕೊರತೆಯ ಬಗ್ಗೆ ಸಂಸತ್ತಿನಲ್ಲಿ ಯಾಕೆ ಧ್ವನಿ ಎತ್ತುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ. ಹಳ್ಳಿ ಜನ, ರೈತರು ಮತ್ತು ಹೋಟೆಲ್ ಮಾಲೀಕರು ಅನುಭವಿಸುತ್ತಿರುವ ಕಷ್ಟಕ್ಕೆ ಕೇಂದ್ರ ಸರ್ಕಾರವೇ ಪೂರ್ಣ ಹೊಣೆ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ವಿದೇಶಾಂಗ ನೀತಿ ಮತ್ತು ಇಂಧನ ಬಿಕ್ಕಟ್ಟು
ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಖಂಡಿಸಿದ ಡಿಸಿಎಂ, ಇಂಧನ ಬೆಲೆ ಏರಿಕೆ ಮತ್ತು ಪೂರೈಕೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ಕೈಕಟ್ಟಿದಂತಾಗಿದೆ ಎಂದು ತಿಳಿಸಿದರು. "ಕೇಂದ್ರ ಸರ್ಕಾರವು ಈ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ. ಈಗಾಗಲೇ ಗ್ಯಾಸ್ ಚಾಲಿತ ಆಟೋಗಳು ರಸ್ತೆಗಿಳಿಯದೆ ಬಂದ್ ಆಗಿವೆ, ದಿನೇ ದಿನೇ ಸಮಸ್ಯೆ ಬಿಗಡಾಯಿಸುತ್ತಿದೆ. ನಾಗರಿಕರಿಗೆ ಅನುಕೂಲ ಮಾಡಿಕೊಡುವುದು ಕೇಂದ್ರದ ಜವಾಬ್ದಾರಿ," ಎಂದು ಅವರು ಎಚ್ಚರಿಸಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸಚಿವರಿಗೆ ಪತ್ರ ಬರೆದು ತುರ್ತು ಪೂರೈಕೆಗೆ ಮನವಿ ಮಾಡಿದ್ದಾರೆ.
ರಾಜ್ಯಕ್ಕೆ ಬೇಕಿದೆ ಲಕ್ಷಾಂತರ ಸಿಲಿಂಡರ್: ಆಮದಿನ ಮೇಲೆಯೇ ಅವಲಂಬನೆ
ರಾಜ್ಯದ ಎಲ್‌ಪಿಜಿ ಬೇಡಿಕೆಯ ಅಂಕಿಅಂಶಗಳು ಬೆಚ್ಚಿಬೀಳಿಸುವಂತಿವೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಮಾಹಿತಿಯಂತೆ, ರಾಜ್ಯದಲ್ಲಿ ಪ್ರತಿದಿನ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್‌ಗಳು ಹಾಗೂ ಗೃಹ ಬಳಕೆಗೆ ಸುಮಾರು 3.50 ಲಕ್ಷ ಸಿಲಿಂಡರ್‌ಗಳ ಅಗತ್ಯವಿದೆ. ಭಾರತದಲ್ಲಿ ಎಲ್‌ಪಿಜಿ ಉತ್ಪಾದನೆ ಕೇವಲ ಶೇ. 30 ರಷ್ಟಿದ್ದು, ಉಳಿದ ಶೇ. 70 ರಷ್ಟು ಅನಿಲಕ್ಕಾಗಿ ನಾವು ಅಮೆರಿಕ, ರಷ್ಯಾ ಮತ್ತು ಗಲ್ಫ್ ರಾಷ್ಟ್ರಗಳನ್ನೇ ನಂಬಿಕೊಂಡಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಯುದ್ಧವು ಈ ಆಮದು ಸರಪಳಿಯನ್ನು ಕಡಿದು ಹಾಕಿರುವುದು ಬಿಕ್ಕಟ್ಟು ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದೆ.

