
Karnataka legislative session: ಜಾಹೀರಾತು ವಿವಾದ-ಪ್ರತಿಪಕ್ಷ ನಾಯಕರು ವಾಕ್‌ಔಟ್!
ಕರ್ನಾಟಕ ವಿಧಾನಮಂಡಲ ಅಧಿವೇಶನದ 6ನೇ ದಿನದ ಕಲಾಪದಲ್ಲಿ ಮನರೇಗಾ ಯೋಜನೆ ಮತ್ತು ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ.
ರಾಜ್ಯ ವಿಧಾನಮಂಡಲ ಅಧಿವೇಶನದ ಆರನೇ ದಿನದ ಕಲಾಪಗಳು ಇಂದು ಆರಂಭವಾಗಿದ್ದು, ಜನಸಾಮಾನ್ಯರ ಸಮಸ್ಯೆಗಳು ಸದನದಲ್ಲಿ ಪ್ರತಿಧ್ವನಿಸುತ್ತಿವೆ. ಅಧಿವೇಶನ ವಿಸ್ತರಣೆ ಮತ್ತು ಪ್ರಮುಖ ಪ್ರಶ್ನೋತ್ತರ ಕಲಾಪದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ
Live Updates
- 29 Jan 2026 2:11 PM IST
ವಿಧಾನಸಭೆಯಲ್ಲಿ ಜಾಹೀರಾತು ಜಟಾಪಟಿ: ಸುನೀಲ್ ಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ
ರಾಜ್ಯ ವಿಧಾನಸಭೆಯಲ್ಲಿ ಇಂದು ಜಾಹೀರಾತು ನೀಡಿಕೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ಸರ್ಕಾರದ ಜಾಹೀರಾತುಗಳ ಕುರಿತು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ವಿಷಯ ಪ್ರಸ್ತಾಪಿಸುತ್ತಾ, ಜಾಹೀರಾತು ನೀಡಿಕೆಯ ವಿಚಾರದಲ್ಲಿ ಚರ್ಚೆ ಬಂದಾಗ ನಾವು ಖಂಡಿತಾ ಮಾತನಾಡುತ್ತೇವೆ. ಆದರೆ ಈಗ ಸರ್ಕಾರದಿಂದಲೇ ಇಂತಹ ಜಾಹೀರಾತುಗಳನ್ನು ನೀಡುತ್ತಿರುವುದು ಸರಿಯಲ್ಲ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಗಾಂಧೀಜಿಯವರೇ ಹೇಳಿದ್ದರು ಎಂದು ಟೀಕಿಸಿದರು. ಸುನೀಲ್ ಕುಮಾರ್ ಅವರ ಈ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇದೆಲ್ಲವೂ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಗಾಂಧೀಜಿಯವರ ವಿಚಾರಧಾರೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಕಾಂಗ್ರೆಸ್ ಬದಲಾಗಬೇಕು, ರಾಷ್ಟ್ರ ಇರುವವರೆಗೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಇರಬೇಕು ಎಂದೇ ಗಾಂಧೀಜಿ ಬಯಸಿದ್ದರು. ವಿರೋಧ ಪಕ್ಷದವರು ವಾಟ್ಸಾಪ್ ನೋಡಿ ಮಾಹಿತಿ ತಂದರೆ ಹೀಗೆ ಆಗುವುದು ಎಂದು ಟಾಂಗ್ ನೀಡಿದರು.
ಇದೇ ವೇಳೆ ಕರ್ನಾಟಕದ ತೆರಿಗೆ ಸಂಗ್ರಹದ ಬಗ್ಗೆ ಮಾತನಾಡಿದ ಖರ್ಗೆ, "ರಾಜ್ಯದಿಂದ 1,270 ಕೋಟಿ ರೂಪಾಯಿ ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಆಗಿದೆ ಎಂದು ಕೇಂದ್ರ ಸರ್ಕಾರವೇ ಸರ್ಟಿಫಿಕೇಟ್ ನೀಡಿದೆ. ನೀವು ಗಾಂಧೀಜಿ ಫೋಟೋ ದುರುಪಯೋಗ ಎನ್ನುತ್ತೀರಿ, ಆದರೆ ಕೇಂದ್ರ ಸರ್ಕಾರ ಕೂಡ ಗಾಂಧೀಜಿ ಫೋಟೋ ಬಳಸುತ್ತಿದೆ. ದೀನ್ ದಯಾಳ್ ಉಪಾಧ್ಯಾಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಹಲವು ಯೋಜನೆಗಳಿಗೆ ಇಟ್ಟಿದ್ದೀರಿ, ಅದಕ್ಕೆ ನಾವು ಎಂದಾದರೂ ವಿರೋಧ ಮಾಡಿದ್ದೇವಾ? ಎಂದು ಪ್ರಶ್ನಿಸಿದರು.
ಚರ್ಚೆಯ ನಡುವೆ ಗುಜರಾತ್ ಸರ್ಕಾರ ನೀಡಿದ್ದ ಜಾಹೀರಾತುಗಳನ್ನು ಪ್ರದರ್ಶಿಸಿದ ಸಚಿವರು "ಗುಜರಾತ್‌ನಲ್ಲಿ ಪ್ರಧಾನಿ ಮೋದಿಯವರ ಜನ್ಮದಿನಕ್ಕೆ ಶುಭಾಶಯ ಕೋರಿ ಸರ್ಕಾರಿ ಜಾಹೀರಾತು ನೀಡಲಾಗಿದೆ. ಕರ್ನಾಟಕದಲ್ಲಿ ಕೂಡ ಹಿಂದೆ ವ್ಯಾಕ್ಸಿನ್ ನೀಡಿದಾಗ ಯಡಿಯೂರಪ್ಪ ಹಾಗೂ ಮೋದಿ ಫೋಟೋ ಹಾಕಿ 'ಥ್ಯಾಂಕ್ಯೂ ಮೋದಿಜಿ' ಎಂದು ಜಾಹೀರಾತು ನೀಡಲಾಗಿತ್ತು. ಈಗ ನಮಗೆ ಬುದ್ಧಿ ಹೇಳಲು ಬರುತ್ತಿದ್ದೀರಿ" ಎಂದು ತಿರುಗೇಟು ನೀಡಿದರು. ಜಟಾಪಟಿ ಮುಂದುವರಿದಂತೆ ಸಚಿವ ಖರ್ಗೆ ಅವರು, "ನೀವು ಗಾಂಧೀಜಿ ಬದಲು ಗೋಡ್ಸೆಯನ್ನು ಪ್ರಚಾರ ಮಾಡುತ್ತಿದ್ದೀರಿ" ಎಂದು ಆರೋಪಿಸಿದರು. ಇದಕ್ಕೆ ಕೆರಳಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಇಲ್ಲಿ ಗೋಡ್ಸೆ ಹೆಸರನ್ನು ಏಕೆ ತರುತ್ತಿದ್ದೀರಿ?" ಎಂದು ಪ್ರಶ್ನಿಸುವುದರೊಂದಿಗೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
- 29 Jan 2026 2:09 PM IST
ಸದನದಿಂದ ಬಿಜೆಪಿ-ಜೆಡಿಎಸ್ ಸಭಾತ್ಯಾಗ: ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ
ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಹಾಗೂ ಕೇಂದ್ರದ ವಿರುದ್ಧದ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಇಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯಿಂದ ಸಭಾತ್ಯಾಗ ಮಾಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ನಡೆದ ಈ ಬಾಯ್ಕಾಟ್ ವೇಳೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು. ಸದನದಲ್ಲಿ ಮಾತನಾಡಿದ ಆರ್. ಅಶೋಕ್ ಅವರು, "ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ 'ತೆರಿಗೆ ಭಯೋತ್ಪಾದನೆ'ಯ ಆರೋಪ ಮಾಡುತ್ತಿದೆ. ಇದು ಕೇವಲ ರಾಜಕೀಯ ಪ್ರೇರಿತ ಆಟವಾಗಿದ್ದು, ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧವನ್ನು ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
- 29 Jan 2026 1:48 PM IST
ಅನ್ನಭಾಗ್ಯ ಯೋಜನೆ: ಜನವರಿ ತಿಂಗಳ ಬಾಕಿ ಹಣದ ಬಗ್ಗೆ ಸದನದಲ್ಲಿ ಗದ್ದಲ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಅನ್ನಭಾಗ್ಯ' ಯೋಜನೆಯಡಿ ಫಲಾನುಭವಿಗಳಿಗೆ ಜನವರಿ ತಿಂಗಳ ಹಣ ಪಾವತಿಯಾಗದ ವಿಚಾರ ಈಗ ವಿಧಾನಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಕುರಿತಾದ ಚರ್ಚೆಯ ಬೆನ್ನಲ್ಲೇ, ಈಗ ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ ಬಾಕಿ ಇರುವ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶ್ನೆ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಮಹೇಶ್ ಟೆಂಗಿನಕಾಯಿ, 2025ರ ಜನವರಿ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯದ ಸುಮಾರು 1.27 ಕೋಟಿ ಪಡಿತರ ಚೀಟಿದಾರರಿಗೆ ಒಟ್ಟು 657 ಕೋಟಿ ರೂ. ಹಣ ಇನ್ನೂ ಪಾವತಿಯಾಗಿಲ್ಲ. ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದರೂ ಇಷ್ಟು ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಅವರು ಸರ್ಕಾರದ ನಡೆಯನ್ನು ಪ್ರಶ್ನಿಸಿದರು. ಸರ್ಕಾರದ ಪರವಾಗಿ ಸಚಿವ ಮುನಿಯಪ್ಪ ಉತ್ತರ ಶಾಸಕರ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಯೋಜನೆಯ ಆರಂಭದ ದಿನಗಳಲ್ಲಿ ಎದುರಾದ ಅಕ್ಕಿ ಕೊರತೆಯ ಬಗ್ಗೆ ವಿವರಿಸಿದರು. ಕೇಂದ್ರ ಸರ್ಕಾರವು ಸ್ಟಾಕ್ ಇದ್ದರೂ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ನಾವು 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ಫಲಾನುಭವಿಗೆ 170 ರೂ.ಗಳನ್ನು ಡಿಬಿಟಿ ಮೂಲಕ ನೀಡುತ್ತಾ ಬಂದಿದ್ದೇವೆ. 2023ರ ಜುಲೈನಿಂದ 2024-25ರ ಅವಧಿಯವರೆಗೆ ಹಣವನ್ನು ಸಮರ್ಪಕವಾಗಿ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
- 29 Jan 2026 12:46 PM IST
ಸದನದಲ್ಲಿ ಜಾಹಿರಾತು ವಾಗ್ವಾದ: ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್, ಸುನಿಲ್ ಕುಮಾರ್ ವಾಗ್ದಾಳಿ
ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಜಾಹಿರಾತು ರಾಜಕೀಯದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೇಂದ್ರ ಸರ್ಕಾರದ ನೂತನ 'ವಿ ಜೀ ರಾಮ್ ಜಿ' ಕಾಯ್ದೆ ಹಾಗೂ ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡುತ್ತಿರುವ ಜಾಹಿರಾತುಗಳನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ವಿರುದ್ಧ ರಾಜ್ಯ ಸರ್ಕಾರ ಜನಸಾಮಾನ್ಯರ ತೆರಿಗೆ ಹಣದಲ್ಲಿ ಅವಹೇಳನಕಾರಿ ಜಾಹಿರಾತು ನೀಡುತ್ತಿದೆ ಎಂದು ಕಿಡಿಕಾರಿದರು. ಯಾರ ಅಪ್ಪನ ದುಡ್ಡು ಎಂದು ಈ ರೀತಿ ಜಾಹಿರಾತುಗಳನ್ನು ನೀಡುತ್ತಿದ್ದೀರಾ? ಜನಸಾಮಾನ್ಯರ ಕಷ್ಟದ ಹಣವನ್ನು ಪಕ್ಷದ ಪ್ರಚಾರಕ್ಕೆ ಮತ್ತು ಕೇಂದ್ರದ ವಿರುದ್ಧ ಸುಳ್ಳು ಹರಡಲು ಬಳಸುತ್ತಿರುವುದು ಸರಿಯೇ? ಎಂದು ಏಕವಚನದಲ್ಲೇ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರದ ಹಣ ದುರುಪಯೋಗವಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಇದೇ ವಿಚಾರವಾಗಿ ಧ್ವನಿಗೂಡಿಸಿದ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಕ್ಕೂಟ ವ್ಯವಸ್ಥೆಯ ಸಂಬಂಧ ಹೇಗಿರಬೇಕು ಎಂಬ ಬಗ್ಗೆ ಕನಿಷ್ಠ ಜ್ಞಾನ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು. "ನಿಮಗೆ ಕೇಂದ್ರದ ಯೋಜನೆಗಳ ವಿರುದ್ಧ ಅಸಮಾಧಾನವಿದ್ದರೆ ನಿಮ್ಮ ಪಕ್ಷದ ಅಕೌಂಟ್‌ನಿಂದ ಜಾಹಿರಾತು ನೀಡಿ. ಅದನ್ನು ಬಿಟ್ಟು ಸರ್ಕಾರದ ಬೊಕ್ಕಸದ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸುವುದು ಎಷ್ಟರ ಮಟ್ಟಿಗೆ ನ್ಯಾಯ? ನಾಳೆ ಇದೇ ರೀತಿ ರಾಜ್ಯ ಸರ್ಕಾರದ ಯೋಜನೆಗಳನ್ನು ವಿರೋಧಿಸಿ ಗ್ರಾಮ ಪಂಚಾಯಿತಿಗಳು ಜಾಹಿರಾತು ಕೊಟ್ಟರೆ ನೀವು ಒಪ್ಪಿಕೊಳ್ಳುತ್ತೀರಾ?" ಎಂದು ಸವಾಲು ಹಾಕಿದರು.
ಕೇಂದ್ರದ ಹೊಸ ಕಾಯ್ದೆಯನ್ನು ಗುರಿಯಾಗಿಸಿಕೊಂಡು ನೀಡಲಾದ ಜಾಹಿರಾತುಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿವೆ ಮತ್ತು ಇದು ಬಜೆಟ್ ಹಣದ ನೇರ ದುರ್ಬಳಕೆ ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿದವು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಸಹ ತಿರುಗೇಟು ನೀಡಲು ಮುಂದಾದಾಗ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
- 29 Jan 2026 11:28 AM IST
ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ವದಂತಿಗೆ ತೆರೆ – ಸದನದಲ್ಲಿ ಸ್ಪಷ್ಟನೆ ನೀಡಿದ ಸಚಿವರು
ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳಿಗೆ ಇಂದು ವಿಧಾನಸಭೆಯಲ್ಲಿ ಸ್ವತಃ ಸಚಿವರೇ ಸ್ಪಷ್ಟನೆ ನೀಡುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ. ಕಳೆದ ಕೆಲವು ಗಂಟೆಗಳಿಂದ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದ ಈ ಸುದ್ದಿಯು ಸದನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಈ ವಿಷಯವನ್ನು ಸದನದ ಗಮನಕ್ಕೆ ತಂದು, "ಸಚಿವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಅದರಲ್ಲೂ ಮುಖ್ಯಮಂತ್ರಿಗಳ ಪುತ್ರನ ಹಸ್ತಕ್ಷೇಪದಿಂದ ಬೇಸತ್ತು ಅವರು ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸಚಿವರು ಸದನಕ್ಕೆ ಸ್ಪಷ್ಟನೆ ನೀಡಬೇಕು" ಎಂದು ಒತ್ತಾಯಿಸಿದರು.
ಸುನೀಲ್ ಕುಮಾರ್ ಅವರ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ತಾನು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. "ನಾನು ಎಲ್ಲಿಯೂ ರಾಜೀನಾಮೆ ನೀಡಿಲ್ಲ, ಟಿವಿಯಲ್ಲಿ ಈ ಬಗ್ಗೆ ನಾನೇನಾದರೂ ಹೇಳಿಕೆ ನೀಡಿದ್ದೇನಾ?" ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ತಿಳಿಸಿದರು.
- 29 Jan 2026 11:05 AM IST
ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್‌ಗೆ ಬ್ರೇಕ್: ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಗುಡುಗು
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಬಿಜಿಯಾಗಿರುವುದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದರು. ಸರ್ಕಾರಿ ವೈದ್ಯರು ಆಪರೇಷನ್ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ, ಇಲ್ಲೂ ಕೆಲಸ ಮಾಡಿ ಅಲ್ಲೂ ಕ್ಲಿನಿಕ್ ನಡೆಸುತ್ತಾರೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರೇ ಸಿಗದಂತಾಗಿದೆ. ಇದೊಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಶಾಸಕರ ಆರೋಪಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರಿ ವೈದ್ಯರು ಖಾಸಗಿ ಪ್ರಾಕ್ಟೀಸ್ ಮಾಡುವುದಕ್ಕೆ ಕಡಿವಾಣ ಹಾಕಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು. ಹೊಸ ಆದೇಶದ ಪ್ರಕಾರ, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ಕೇವಲ ಹೊರರೋಗಿಗಳಿಗೆ ಮಾತ್ರ ನಿಗದಿತ ಅವಧಿಯ ನಂತರ ಸಲಹೆ ನೀಡಬಹುದು. ಅದು ಕೂಡ ತಾವು ಕೆಲಸ ಮಾಡುವ ಒಂದು ನಿರ್ದಿಷ್ಟ ಸ್ಥಳದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
- 29 Jan 2026 11:00 AM IST
ವಿಧಾನಸಭೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಆಕ್ರೋಶ
ವಿಧಾನಸಭೆ ಅಧಿವೇಶನದಲ್ಲಿ ಇಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವೈಖರಿ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯ ವಿರುದ್ಧ ಹರಿಹರ ಶಾಸಕ ಬಿ.ಪಿ. ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಇದು ಮಾಲಿನ್ಯ ನಿಯಂತ್ರಣ ಮಂಡಳಿಯೋ ಅಥವಾ ಕೇವಲ ಮಾಲಿನ್ಯ ಮಂಡಳಿಯೋ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಕ್ಷೇತ್ರದಲ್ಲಿರುವ ಎರಡು ಪ್ರಮುಖ ಕಾರ್ಖಾನೆಗಳು ಪರಿಸರ ನಿಯಮಗಳನ್ನು ಗಾಳಿಗೆ ತೂರಿ, ವಿಷಕಾರಿ ತ್ಯಾಜ್ಯ ನೀರನ್ನು ನೇರವಾಗಿ ಹೊರಬಿಡುತ್ತಿವೆ ಎಂದು ಶಾಸಕ ಹರೀಶ್ ದೂರಿದರು. ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಅವರು ಉತ್ತರಿಸಿ, "ಇಂಡಿಯನ್ ಪವರ್ ಎಂಬ ಕಾರ್ಖಾನೆ ಸದ್ಯ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಆದರೂ ಸದಸ್ಯರ ಗಮನಕ್ಕೆ ಬಂದ ಮೇಲೆ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅಲ್ಲಿ ತ್ಯಾಜ್ಯ ನೀರು ಇರುವುದು ಪತ್ತೆಯಾಗಿದ್ದು, ವರದಿ ಬರಲು ಒಂದು ವಾರ ಕಾಲಾವಕಾಶ ಬೇಕು. ಸದ್ಯಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಖಾನೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ವರದಿಯಲ್ಲಿ ಮಾಲಿನ್ಯ ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
- 29 Jan 2026 10:27 AM IST
ವಿಧಾನಮಂಡಲ ಅಧಿವೇಶನ ಎರಡು ದಿನ ವಿಸ್ತರಣೆ
ರಾಜ್ಯ ವಿಧಾನ ಮಂಡಲದ ಅಧಿವೇಶನ ಫೆ.3ರವರೆಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.

