
ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಅಮಾನತು ಸಮರ್ಥಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ
ಪಕ್ಷದ ತೀರ್ಮಾನವೇ ಅಂತಿಮ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಒಬ್ಬ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಅಮಾನತು ಪ್ರಕರಣವು ತೀವ್ರ ಚರ್ಚೆಗೆ ಕಾರಣವಾಗಿದೆ. ಪಕ್ಷದ ಶಿಸ್ತು ಮತ್ತು ಸಿದ್ಧಾಂತಗಳ ಬಗ್ಗೆ ಅತ್ಯಂತ ಕಠಿಣ ಹಾಗೂ ಸ್ಪಷ್ಟವಾದ ನಿಲುವು ತಳೆದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪಕ್ಷದೊಳಗಿನ ಆಂತರಿಕ ಶಿಸ್ತು ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ಖಚಿತ ಎಂಬುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಅಮಾನತಿನ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ವಿಷಯದಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಯಾವುದೇ ಒಬ್ಬ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅಥವಾ ದೀರ್ಘಕಾಲದವರೆಗೆ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದರೂ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು ಎಂದು ತಿಳಿಸಿದರು.
ಪಕ್ಷವು ಒಂದು ಕಾರ್ಯಸೂಚಿಯನ್ನು ನೀಡಿದಾಗ ಅಥವಾ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಿದಾಗ, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತ ಮತ್ತು ನಾಯಕನ ಕರ್ತವ್ಯ. ಪಕ್ಷದ ಆಶಯಗಳಿಗೆ ವಿರುದ್ಧವಾಗಿ ನಡೆಯುವುದು ಅಥವಾ ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಒಪ್ಪುವಂತಹದ್ದಲ್ಲ. ರಾಜಕೀಯದಲ್ಲಿ ವ್ಯಕ್ತಿಗಿಂತ ಸಂಘಟನೆ ಮುಖ್ಯ. ಪಕ್ಷ ಹೇಳಿದ ಕೆಲಸಗಳನ್ನು ಪ್ರತಿಯೊಬ್ಬರೂ ಮಾಡಬೇಕಾಗುತ್ತದೆ. ಇದರ ವಿರುದ್ಧ ಕೈಗೊಳ್ಳುವ ಯಾವುದೇ ನಡೆಯನ್ನು ಪಕ್ಷ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ತನ್ನದೇ ಆದ ಇತಿಹಾಸ ಮತ್ತು ತತ್ವಗಳನ್ನು ಹೊಂದಿದೆ. ಈ ತತ್ವಗಳನ್ನು ಮೀರಿದಾಗ ಅಥವಾ ಪಕ್ಷದ ಆದೇಶಗಳನ್ನು ಉಲ್ಲಂಘಿಸಿದಾಗ ಶಿಸ್ತು ಕ್ರಮ ಅನಿವಾರ್ಯವಾಗುತ್ತದೆ. ಅಬ್ದುಲ್ ಜಬ್ಬಾರ್ ಅವರ ಅಮಾನತು ಕೂಡ ಇಂತಹದ್ದೇ ಒಂದು ಶಿಸ್ತು ಕ್ರಮದ ಭಾಗವಾಗಿದೆ ಎಂಬುದನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ
ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿದೆ. ಬೇರೆ ಪಕ್ಷಗಳಲ್ಲಿ ಸಾಮಾಜಿಕ ನ್ಯಾಯ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇದೆ. ಕಾಂಗ್ರೆಸ್ ಪಕ್ಷವು ಎಲ್ಲ ಸಮುದಾಯಗಳನ್ನು, ವಿಶೇಷವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಮಾನವಾಗಿ ಕಾಣುತ್ತದೆ. ಪ್ರತಿಯೊಬ್ಬರಿಗೂ ಅವರ ಅರ್ಹತೆ ಮತ್ತು ನಿಷ್ಠೆಯ ಆಧಾರದ ಮೇಲೆ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಈ ನಿಟ್ಟಿನಲ್ಲಿ ಪಕ್ಷವು ನೀಡುವ ಅವಕಾಶಗಳನ್ನು ಗೌರವಿಸುವುದು ಮತ್ತು ಪಕ್ಷದ ನಿರ್ಧಾರಗಳಿಗೆ ತಲೆಬಾಗುವುದು ಪ್ರಬುದ್ಧ ರಾಜಕಾರಣಿಯ ಲಕ್ಷಣ. ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೂ ಕಡೆಗಣಿಸುವುದಿಲ್ಲ. ಎಲ್ಲರಿಗೂ ಸ್ಥಾನ ಮಾನ ನೀಡಲಾಗುತ್ತದೆ. ಆದರೆ, ಈ ಅವಕಾಶಗಳು ಸಿಗಬೇಕೆಂದರೆ ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ಇರಬೇಕು. ವ್ಯಕ್ತಿಗತ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ದೊಡ್ಡದಾದಾಗ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದರು.

