
ಸಿಎಂ ಸಿದ್ದರಾಮಯ್ಯ ಬಣದ 25 ಶಾಸಕರು ನಾಳೆ ಆಸ್ಟ್ರೇಲಿಯಾ ಪ್ರವಾಸಕ್ಕೆ; ಹೈಕಮಾಂಡ್‌ಗೆ ಸಂದೇಶ?
ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಈ ಎಲ್ಲ ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಎಂದು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರ ಯಾತ್ರೆಯು ಎಲ್ಲರ ಗಮನ ಸೆಳೆದಿದೆ.
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಗುಸುಗುಸು ಮತ್ತು ಚರ್ಚೆಗಳು ತಾರಕಕ್ಕೇರಿರುವ ಸಂದರ್ಭದಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದ ಶಾಸಕರ ದಂಡು ಒಟ್ಟಾಗಿ ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ನಾಳೆ (ಮಂಗಳವಾರ) ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಂಗ್ರೆಸ್‌ನ ಬರೋಬ್ಬರಿ 22 ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ. ವಿಶೇಷವೆಂದರೆ, ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಈ ಎಲ್ಲ ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಎಂದು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರವಾಸವು ಕೇವಲ ಮೋಜಿನ ಯಾತ್ರೆಯೋ ಅಥವಾ ಹೈಕಮಾಂಡ್‌ಗೆ ಪರೋಕ್ಷವಾಗಿ ಶಕ್ತಿ ಪ್ರದರ್ಶನದ ಸಂದೇಶ ರವಾನಿಸುವ ತಂತ್ರವೋ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ.
ಒಟ್ಟು 11 ದಿನಗಳ ಕಾಲ ಈ ಶಾಸಕರು ಆಸ್ಟ್ರೇಲಿಯಾದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಅಥವಾ ನಾಯಕತ್ವದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲೇ, ಸಿಎಂ ಬಣದ ಶಾಸಕರೆಲ್ಲರೂ ಒಟ್ಟಾಗಿ ವಿದೇಶಕ್ಕೆ ತೆರಳುತ್ತಿರುವುದು ಸಹಜವಾಗಿಯೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎರಡು ತಿಂಗಳ ಹಿಂದೆಯೇ ಸ್ಕೆಚ್!
ಕಾಂಗ್ರೆಸ್ ಮೂಲಗಳ ಪ್ರಕಾರ ಈ ಪ್ರವಾಸ ದಿಢೀರ್ ಎಂದು ಆಯೋಜನೆಯಾದದ್ದಲ್ಲ. ಸುಮಾರು ಎರಡು ತಿಂಗಳ ಹಿಂದೆಯೇ ಸಿಎಂ ಬಣದ ಪ್ರಮುಖ ನಾಯಕರೊಬ್ಬರು ಶಾಸಕರ ಜೊತೆ ಮಾತನಾಡಿ ಈ ವಿದೇಶ ಪ್ರವಾಸವನ್ನು ನಿಗದಿಪಡಿಸಿದ್ದರು. ಮಧ್ಯಂತರದಲ್ಲಿ ರಾಜಕೀಯ ಬೆಳವಣಿಗೆಗಳಿಂದಾಗಿ ಕೆಲವು ಶಾಸಕರು ಪ್ರವಾಸದಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಮತ್ತೆ ಎಲ್ಲರೂ ಒಗ್ಗೂಡಿ ಪೂರ್ವನಿಗದಿತ ಪ್ಲಾನ್‌ನಂತೆ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಶಾಸಕರ ಸ್ಪಷ್ಟನೆ ಏನು?
ಪ್ರವಾಸದ ಕುರಿತು ಉಂಟಾಗಿರುವ ಗೊಂದಲಗಳಿಗೆ ಪ್ರತಿಕ್ರಿಯಿಸಿರುವ ಪ್ರವಾಸ ನಿರತ ಶಾಸಕರೊಬ್ಬರು, "ಈ ಪ್ರವಾಸ ಮುಂಚೆಯೇ ನಿಗದಿಯಾಗಿತ್ತು. ಪ್ರಸ್ತುತ ನಾಯಕತ್ವ ಬದಲಾವಣೆಯ ಯಾವುದೇ ಗೊಂದಲಗಳಿಲ್ಲ. ಹೀಗಿರುವಾಗ ಪ್ರವಾಸವನ್ನು ಏಕೆ ರದ್ದು ಮಾಡಬೇಕು? ನಾವು ಪೂರ್ವನಿಗದಿಯಂತೆ ಹೋಗುತ್ತಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ, ಸಿಎಂ ಆಪ್ತ ಶಾಸಕರ ಈ ನಡೆ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

