
Cabinet Reshuffle| ಸಂಪುಟ ಪುನಾರಚನೆಗೆ ಪಟ್ಟು; ಹಿರಿಯ ʼಕೈʼ ಶಾಸಕರ ದೆಹಲಿ ದಂಡಯಾತ್ರೆ
2026 ಮೇ 20ಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಲಿದೆ. ಉಳಿದ ಎರಡು ವರ್ಷದ ಅವಧಿಗಾದರೂ ಸಚಿವ ಸ್ಥಾನ ನೀಡಬೇಕು ಎಂಬುದು ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಹಕ್ಕೊತ್ತಾಯವಾಗಿದೆ.
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕದನ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸಂಪುಟ ಪುನಾರಚನೆಗಾಗಿ ಸಮರ ಆರಂಭವಾಗಿದೆ. ಸಂಪುಟ ಪುನಾರಚನೆ ಮಾಡುವಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒತ್ತಾಯಿಸಲು ಹಿರಿಯ ಶಾಸಕರ ಪಡೆ ಸಜ್ಜಾಗಿದೆ.
ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ನೇತೃತ್ವದಲ್ಲಿ ಹಿರಿಯ ಶಾಸಕರಾದ ಎನ್.ಎಚ್. ಕೋನರೆಡ್ಡಿ, ಎಸ್.ಎನ್. ನಾರಾಯಣಸ್ವಾಮಿ ಸೇರಿ ಸುಮಾರು 20 ರಿಂದ 25 ಶಾಸಕರು ಭಾನುವಾರ ಸಂಜೆ ದೆಹಲಿಗೆ ಪ್ರಯಾಣಿಸಲಿದ್ದಾರೆ.
ಉಪಚುನಾವಣೆಯ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಬಿಕ್ಕಟ್ಟು ಹಾಗೂ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ವರಿಷ್ಠರು ಮುಂದೂಡಿದ್ದರು. ಈಗ ಎರಡು ಕ್ಷೇತ್ರಗಳ ಉಪಚುನಾವಣೆ ಮುಗಿದಿದೆ. ಆದ್ದರಿಂದ ಕಾಂಗ್ರೆಸ್ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆಗೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.
ಹಿರಿಯ ಶಾಸಕರ ಡಿಮ್ಯಾಂಡ್ ಏನು?
2026 ಮೇ 20ಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಲಿದೆ. ಉಳಿದ ಎರಡು ವರ್ಷದ ಅವಧಿಗಾದರೂ ಸಚಿವ ಸ್ಥಾನ ನೀಡಬೇಕು ಎಂಬುದು ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಹಕ್ಕೊತ್ತಾಯವಾಗಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಈ ಹಿಂದೆಯೂ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.
ಪ್ರಸ್ತುತ ಸಂಪುಟದಲ್ಲಿ ಕಳಪೆ ಸಾಧನೆ ತೋರಿದವರನ್ನು ಕೈಬಿಡಬೇಕು. ಕನಿಷ್ಠ 20 ರಿಂದ 25 ಹೊಸ ಮುಖಗಳಿಗೆ ಸ್ಥಾನ ನೀಡುವ ಮೂಲಕ ಸಂಪುಟ ಪುನಾರಚನೆ ಮಾಡಬೇಕು. ಆಗ ಮಾತ್ರ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಗೆಲ್ಲಲು ಸಾಧ್ಯವಾಗಲಿದೆ. ಈ ಹಿಂದೆ ಹಿರಿಯ ಶಾಸಕರಿಗೆ ನೀಡಿದ ಭರವಸೆಯಂತೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
"ರಾಜ್ಯದಲ್ಲಿ ಸಚಿವ ಸಂಪುಟದ ಅವಧಿ ಮೂರು ವರ್ಷ ಪೂರೈಸಲಿದೆ. ಮುಂದಿನ ಎರಡು ವರ್ಷಗಳಲ್ಲಿನ ರಾಜಕೀಯ ಏರುಪೇರುಗಳನ್ನು ಗಮನದಲ್ಲಿಟ್ಟುಕೊಂಡು ಇತರರಿಗೂ ಅವಕಾಶ ನೀಡಬೇಕು ಎಂಬುದು ಹಿರಿಯ ಶಾಸಕರ ಬೇಡಿಕೆ. ಸಂಪುಟ ಪುನಾರಚನೆ ಕುರಿತ ಮನವಿಯನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಮಂಡಿಸಲಾಗುವುದು. ಈ ವಿಚಾರದಲ್ಲಿ ವರಿಷ್ಠರ ನಿರ್ಧಾರವೇ ಅಂತಿಮ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಈ ಭೇಟಿಯ ವಿಷಯವನ್ನು ತಂದಿದ್ದು, ಅವರೂ ಕೂಡ ಸಮ್ಮತಿ ಸೂಚಿಸಿದ್ದಾರೆ," ಎಂದು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಶಾಸಕ ಬೇಳೂರು ಗೋಪಾಲಕೃಷ್ಣ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ʼಸಂಪುಟ ಪುನಾರಚನೆಗೆ ಒತ್ತಾಯಿಸಲು ಕೆಲವರು ಹೈಕಮಾಂಡ್ ಬಳಿ ಹೋಗಲಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ. ಸಂಪುಟ ಪುನಾರಚನೆ ಆಗುವುದು ಒಳ್ಳೆಯದೇ, ಸರ್ಕಾರದ ಉಳಿದ ಎರಡು ವರ್ಷದ ಅವಧಿಗಾದರೂ ಹಿರಿಯ ಶಾಸಕರಿಗೆ ಸಚಿವ ಸ್ಥಾನ ದೊರೆತರೆ ಉತ್ತಮ. ಇದರಿಂದ ಮುಂಬರುವ ವಿಧಾನಸಭಾ ಚುನಾವಣೆಗೂ ಅನುಕೂಲವಾಗಲಿದೆʼ ಎಂದು ಹೇಳಿದರು.
ನಾಯಕತ್ವಕ್ಕಾಗಿ ಪುನಾರಚನೆ ಸರ್ಕಸ್
ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ಪುನಾರಚನೆಯ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳೂ ಇವೆ ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ, ಹಿರಿಯ ಶಾಸಕರ ಬೇಡಿಕೆಯಂತೆ ಸಂಪುಟ ಪುನಾರಚನೆಯಾದರೆ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಡಿತ ಮತ್ತಷ್ಟು ಬಿಗಿಯಾಗಲಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಆಡಳಿತ ನಡೆಸಬೇಕು ಎಂಬುದು ಸಿಎಂ ಅವರ ಆಪ್ತ ಶಾಸಕರು ಹಾಗೂ ಸಚಿವರ ಒತ್ತಾಯ. ಪ್ರಸ್ತುತ, ಹಿರಿಯ ಶಾಸಕರು ಸಿಎಂ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಇದು ನೇರವಾಗಿ ಸಿದ್ದರಾಮಯ್ಯ ಅವರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ಹೀಗಾದಲ್ಲಿ ನಾಯಕತ್ವ ಬದಲಾವಣೆಯ ವಿಚಾರವು ತೆರೆಮರೆಗೆ ಸರಿಯಲಿದೆ ಎಂಬುದು ಪ್ರಮುಖ ರಾಜಕೀಯ ಲೆಕ್ಕಾಚಾರವಾಗಿದೆ.
ಇನ್ನು ಕೆಲವು ಸಚಿವರು ಆಡಳಿತಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದು, ಅಂತವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ದೂರು ಕೂಡ ಹೈಕಮಾಂಡ್‌ಗೆ ತಲುಪಿದೆ. ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ನಡೆಸಲಾದ ಆಂತರಿಕ ಮೌಲ್ಯಮಾಪನದಲ್ಲಿ ಕಡಿಮೆ ಸಾಧನೆ ತೋರಿದವರನ್ನು ಕೈಬಿಡುವ ಕುರಿತು ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಹರಿದಾಡಿದ್ದವು. ಇದಲ್ಲದೇ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಹಾಗೂ ದಲಿತ ಮತ್ತು ಹಿಂದುಳಿದ ವರ್ಗಗಳ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡವೂ ಇತ್ತು.
ಚುನಾವಣೆಗೆ ಮುನ್ನ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ್ದ ಶಾಸಕ ಅಶೋಕ್ ಪಟ್ಟಣ ಅವರು, "ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಹೈಕಮಾಂಡ್ ಹೇಳಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೇ ಖುದ್ದು ಈ ವಿಷಯ ತಿಳಿಸಿದ್ದರು. ಕಳಪೆ ಸಾಧನೆ ತೋರಿದ ಸಚಿವರನ್ನು ತೆಗೆದು ಪಕ್ಷದ ಕೆಲಸಕ್ಕೆ ಬಳಸಿಕೊಂಡು, ಹಿರಿಯ ಹಾಗೂ ಹೊಸ ಶಾಸಕರಿಗೆ ಅವಕಾಶ ನೀಡಲಿ," ಎಂದು ಹೇಳಿದ್ದರು.
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮಾತನಾಡಿ, "ಬಹುತೇಕ ಸಚಿವರು ಕೆಲಸ ಮಾಡುತ್ತಿಲ್ಲ ಮತ್ತು ಶಾಸಕರಿಗೆ ಬೆಲೆ ಕೊಡುತ್ತಿಲ್ಲ. ಅಂತಹ ಸಚಿವರನ್ನು ಕೈಬಿಟ್ಟು ಎರಡರಿಂದ ಮೂರು ಬಾರಿ ಆಯ್ಕೆಯಾದವರಿಗೆ ಅವಕಾಶ ನೀಡಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮುಂದಿನ ಚುನಾವಣೆಗಳಿಗೆ ಅನುಕೂಲವಾಗಬೇಕಾದರೆ ಸಚಿವ ಸಂಪುಟ ಪುನಾರಚನೆ ಮಾಡಲೇಬೇಕು," ಎಂದು ಹೇಳಿದ್ದರು.
ಸಚಿವ ಸ್ಥಾನಕ್ಕೂ ನಡೆದಿತ್ತೇ ಒಪ್ಪಂದ?
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹೈಕಮಾಂಡ್ ಸಮ್ಮುಖದಲ್ಲಿ ಸಚಿವ ಸ್ಥಾನದ ಬದಲಾವಣೆ ಕುರಿತಂತೆಯೂ ಆಂತರಿಕ ಒಪ್ಪಂದವಾಗಿತ್ತು ಎನ್ನಲಾಗಿದೆ. ಮೊದಲ 30 ತಿಂಗಳು ಒಂದು ತಂಡಕ್ಕೆ ಅಧಿಕಾರ ನೀಡಿದರೆ, ಉಳಿದ ಅವಧಿಗೆ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ನಡೆದಿತ್ತು ಎಂಬುದು ಹಿರಿಯ ಶಾಸಕರ ವಾದವಾಗಿದೆ. ಈಗ ಆ ಅವಧಿ ಮುಗಿಯುತ್ತಿರುವುದರಿಂದ ಸಂಪುಟ ಪುನಾರಚನೆಗೆ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಗಳಲ್ಲೂ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಆದರೆ, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಪ್ರಸ್ತಾವವನ್ನು ಮುಂದೂಡಲಾಗಿತ್ತು.
ಡಿಕೆ ಪಾಳಯದಲ್ಲಿ ಪುನಾರಚನೆಗೆ ಕಾಣದ ಆಸಕ್ತಿ
ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಹೈಕಮಾಂಡ್ ನಾಯಕರು ಬ್ರೇಕ್ ಹಾಕಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಳಯವು ಅಸಮಾಧಾನಗೊಂಡಿದೆ. ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಸಂಪುಟ ಪುನಾರಚನೆ ಕುರಿತು ತಲೆ ಕೆಡಿಸಿಕೊಳ್ಳದೇ ಸಂಘಟನೆಗೆ ಒತ್ತು ನೀಡುತ್ತಿರುವುದು ಆಪ್ತರನ್ನು ಚಿಂತೆಗೀಡು ಮಾಡಿದೆ. ಸಂಪುಟ ಪುನಾರಚನೆಯಾದರೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಹಾದಿಗೆ ದೊಡ್ಡ ವಿಘ್ನ ಎದುರಾಗಲಿದೆ ಎಂಬುದು ಅವರ ಆಪ್ತರ ಆತಂಕವಾಗಿದೆ.

