ಸಂಪುಟ ಪುನಾರಚನೆಗೆ ಮೇ 15 ಗಡುವು; ರಾಹುಲ್‌ ಭೇಟಿಗಾಗಿ ಶಾಸಕರ ಠಿಕಾಣಿ
x
ಸಂಪುಟ ಪುನಾರಚನೆಗೆ ಆಗ್ರಹಿಸಿ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್‌ ಶಾಸಕರು

ಸಂಪುಟ ಪುನಾರಚನೆಗೆ ಮೇ 15 ಗಡುವು; ರಾಹುಲ್‌ ಭೇಟಿಗಾಗಿ ಶಾಸಕರ ಠಿಕಾಣಿ

ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ನೀಡಿದ್ದ ವಾಗ್ದಾನದಂತೆ ಸಂಪುಟ ಪುನಾರಚನೆ ಮಾಡಿ, ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ಸಚಿವಾಕಾಂಕ್ಷಿ ಶಾಸಕರ ಆಗ್ರಹವಾಗಿದೆ.


ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನಾರಚನೆಯ ಕೂಗು ಜೋರಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಿರಿಯ ಶಾಸಕರು ಶತಾಯ ಗತಾಯ ಸಂಪುಟ ಪುನಾರಚನೆಗೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ.

ಮೇ 15ರೊಳಗೆ ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸಿರುವ ಶಾಸಕರು, ಈ ಸಂಬಂಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಭೇಟಿಯಾಗಿ ದೆಹಲಿಯಲ್ಲೇ ಠಿಕಾಣಿ ಹೂಡಿದ್ದಾರೆ. ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ 20ಕ್ಕೂ ಅಧಿಕ ಶಾಸಕರ ನಿಯೋಗವು ಸೋಮವಾರ ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರೂ ರಾಹುಲ್‌ ಭೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ನೀಡಿದ್ದ ವಾಗ್ದಾನದಂತೆ ಸಂಪುಟ ಪುನಾರಚನೆ ಮಾಡಿ, ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ಸಚಿವಾಕಾಂಕ್ಷಿ ಶಾಸಕರ ಆಗ್ರಹವಾಗಿದೆ.

ರಾಹುಲ್ ಗಾಂಧಿ ಭೇಟಿಗೆ ಪ್ರಯತ್ನ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಶಾಸಕರು ನಿರ್ಧರಿಸಿದ್ದು, ಇದೇ ಏ.16 ರವರೆಗೆ ದೆಹಲಿಯಲ್ಲೇ ವಾಸ್ತವ್ಯ ಹೂಡಲು ಶಾಸಕರು ತೀರ್ಮಾನಿಸಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಸ್ತುತ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ ಇಂದು( ಏ.14) ರಾಹುಲ್ ಭೇಟಿ ಅಸಾಧ್ಯ ಎನ್ನಲಾಗಿದೆ. ಹೀಗಾಗಿ, ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಲು ಶಾಸಕರು ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ಮೇ 20ಕ್ಕೆ ಮೂರು ವರ್ಷ ತುಂಬಲಿದೆ. ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನಾರಚನೆ ಮಾಡಿ ಹೊಸಬರಿಗೆ ಅವಕಾಶ ನೀಡುವುದಾಗಿ ಹೈಕಮಾಂಡ್ ಈ ಹಿಂದೆ ಭರವಸೆ ನೀಡಿತ್ತು. ಈಗಿರುವ ಅನೇಕ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಾಸಕರಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ, ಅಂತವರನ್ನು ಸಂಪುಟದಿಂದ ಕೈಬಿಟ್ಟು ಮೂರ್ನಾಲ್ಕು ಬಾರಿ ಗೆಲುವು ಸಾಧಿಸಿರುವ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಶಾಸಕರ ನಿಯೋಗ ವರಿಷ್ಠರನ್ನು ಒತ್ತಾಯಿಸಿದೆ.

" ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಬೇಡಿಕೆಯನ್ನು ಸಹಾನುಭೂತಿಯಿಂದ ಆಲಿಸಿದ್ದಾರೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ." ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, "ಕೆಪಿಸಿಸಿ ಅಧ್ಯಕ್ಷರು ನಮಗೆ ಎಚ್ಚರಿಕೆ ನೀಡಿದ್ದಾರೆ, ಆದರೆ, ನಾವು ಪಕ್ಷಕ್ಕೆ ಹಾನಿ ಮಾಡುವ ಕೆಲಸ ಮಾಡುತ್ತಿಲ್ಲ. ಪದೇ ಪದೇ ಸಚಿವರಾದವರೇ ಅಧಿಕಾರ ಅನುಭವಿಸುತ್ತಿದ್ದರೆ ನಾವೇಕೆ ಇರಬೇಕು?, ನಮಗೂ ಅವಕಾಶ ಬೇಕಲ್ಲವೇ." ಎಂದು ಪ್ರಶ್ನಿಸಿದ್ದಾರೆ.

"ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೊರತುಪಡಿಸಿ ಉಳಿದ ಎಲ್ಲ ಸಚಿವರನ್ನು ಬದಲಾಯಿಸಿ ಹಿರಿಯ ಶಾಸಕರು ಹಾಗೂ ಹೊಸಬರಿಗೆ ಸ್ಥಾನ ಕಲ್ಪಿಸಬೇಕು." ಎಂದು ಶಾಸಕ ಯಶವಂತರಾಯ ಗೌಡ ಪಾಟೀಲ್ ಆಗ್ರಹಿಸಿದ್ದಾರೆ.

ಸಚಿವ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, "ನಾವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಗಮನಕ್ಕೆ ತಂದೇ ಇಲ್ಲಿಗೆ ಬಂದಿದ್ದೇವೆ. ನಮ್ಮದು ಕೇವಲ ಸಂಪುಟ ಪುನಾರಚನೆಯ ಬೇಡಿಕೆಯಷ್ಟೇ." ಎಂದು ಹೇಳಿದ್ದಾರೆ. ಈ ಮಧ್ಯೆ, ಕರ್ನಾಟಕ ಭವನದಲ್ಲಿ ಸಭೆ ನಡೆಸಿ ಸಹಿ ಸಂಗ್ರಹ ಮಾಡಿರುವ ಶಾಸಕರ ನಡೆ, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಮುಸ್ಲಿಂ ನಾಯಕರಿಂದಲೂ ಲಾಬಿ

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಕೂಡ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ದಾವಣಗೆರೆ ಉಪ ಚುನಾವಣೆ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಸಂಬಂಧ ಅಲ್ಪಸಂಖ್ಯಾತ ನಾಯಕರಲ್ಲಿ ಭಿನ್ನಮತ ತೀವ್ರಗೊಂಡಿದ್ದು, ಜಮೀರ್ ಅವರ ಸಚಿವ ಸ್ಥಾನಕ್ಕೆ ಕುತ್ತು ತರುವ ಆತಂಕ ಎದುರಾಗಿದೆ. ಈ ನಡುವೆಯೇ, ಸಮುದಾಯದಕ್ಕೆ ಸಚಿವ ಸ್ಥಾನ ಬೇಕೆಂದು ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಅವರು ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹಾಕುತ್ತಿರುವುದು ಕುತೂಹಲ ಮೂಡಿಸಿದೆ.

ಸಚಿವ ಸ್ಥಾನ ನೀಡುವಂತೆ ಕಳೆದ ಒಂದು ವರ್ಷದಿಂದಲೇ ಸಲೀಂ ಅಹ್ಮದ್ ಅವರು ಪ್ರಯತ್ನ ಆರಂಭಿಸಿದ್ದರು. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲೂ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದರು. “ಧಾರವಾಡ, ಹಾವೇರಿ, ಗದಗ ಸೇರಿದಂತೆ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಮುಸ್ಲಿಂ ಸಮುದಾಯದ ನನಗೆ ಸಚಿವ ಸ್ಥಾನ ನೀಡಿದರೆ, ಅಭಿವೃದ್ಧಿ ಚುರುಕಾಗಲಿದೆ. ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ. ಹಾಗಾಗಿ, ತಮಗೆ ಸಚಿವ ಸ್ಥಾನ ನೀಡಬೇಕುʼ ಎಂದು ಸಲೀಂ ಅಹ್ಮದ್ ಅವರು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇನ್ನೊಂದೆಡೆ ಡಿಕೆಶಿ ಬಣದ ಶಾಸಕರು ಕೂಡ ದೆಹಲಿ ಯಾತ್ರೆಗೆ ಸಜ್ಜಾಗುತ್ತಿದ್ದು, ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿಯಲು ತಂತ್ರ ಹೆಣೆದಿದ್ದಾರೆ. ಸಂಪುಟ ಪುನಾರಚನೆ ಬದಲು ನಾಯಕತ್ವ ಬದಲಾವಣೆ (ಮುಖ್ಯಮಂತ್ರಿ ಬದಲಾವಣೆ) ಮಾಡಿ" ಎಂದು ಆಗ್ರಹಿಸಲು ಡಿಕೆಶಿ ಬಣದ ಶಾಸಕರು ನಿರ್ಧರಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಶಾಸಕರಿಗೆ ಭೇಟಿಗೆ ಅವಕಾಶ ನೀಡಿದರೆ, ನಮಗೂ ಅವಕಾಶ ನೀಡಲೇಬೇಕು ಎಂದು ಹೈಕಮಾಂಡ್‌ಗೆ ಪಟ್ಟು ಹಿಡಿಯಲು ಸಿದ್ಧತೆ ನಡೆಸಿದ್ದಾರೆ.

Read More
Next Story