ಸಚಿವ ಸಂಪುಟ ಪುನಾರಚನೆಗೆ ಪಟ್ಟು; 31 ಶಾಸಕರಿಂದ ಹೈಕಮಾಂಡ್‌ಗೆ ಪತ್ರ
x
ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ

ಸಚಿವ ಸಂಪುಟ ಪುನಾರಚನೆಗೆ ಪಟ್ಟು; 31 ಶಾಸಕರಿಂದ ಹೈಕಮಾಂಡ್‌ಗೆ ಪತ್ರ

ಪಕ್ಷ ನಿಷ್ಠೆ ಮತ್ತು ಸೈದ್ಧಾಂತಿಕ ಬದ್ಧತೆ ಹೊಂದಿರುವ ಯುವಕರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಅನುಕೂಲವಾಗಲಿದೆ ಎಂದು ಶಾಸಕರು ಪ್ರತಿಪಾದಿಸಿದ್ದಾರೆ.


ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಸಚಿವ ಸಂಪುಟ ಪುನಾರಚನೆ ಮಾಡುವಂತೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಸೇರಿ 31 ಮಂದಿ ಶಾಸಕರು ಕಾಂಗ್ರೆಸ್ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿರುವುದು ರಾಜ್ಯ ರಾಜಕೀಯ ಸಂಚಲನ ಮೂಡಿಸಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 38 ಹೊಸಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನರ ಆಶಯಗಳಿಗೆ ಸ್ಪಂದಿಸಬೇಕಾದರೆ ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆ ಮಾಡಿ, ಮೊದಲ ಬಾರಿ ಗೆದ್ದಿರುವ ಶಾಸಕರಲ್ಲಿ ಕನಿಷ್ಠ 5 ಮಂದಿಗೆ ಸಚಿವ ಸ್ಥಾನ ನೀಡಬೇಕು. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರೇ ಮುಖ್ಯಮಂತ್ರಿಗಳಾಗಿರುವ ಉದಾಹರಣೆಗಳಿವೆ. ಹೀಗಿರುವಾಗ ನಮಗೂ ಸಚಿವ ಸ್ಥಾನದ ಮೂಲಕ ಆಡಳಿತ ನಡೆಸಲು ಅವಕಾಶ ನೀಡಬೇಕು. ಪಕ್ಷ ನಿಷ್ಠೆ ಮತ್ತು ಸೈದ್ಧಾಂತಿಕ ಬದ್ಧತೆ ಹೊಂದಿರುವ ಯುವಕರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಅನುಕೂಲವಾಗಲಿದೆ ಎಂದು ಶಾಸಕರು ಪ್ರತಿಪಾದಿಸಿದ್ದಾರೆ.

ಪತ್ರದಲ್ಲಿ ಸಹಿ ಹಾಕಿರುವ ಶಾಸಕರು

31 ಶಾಸಕರ ಸಹಿ ಇರುವ ಪತ್ರ ವೈರಲ್‌ ಆಗಿದ್ದು, ಪ್ರಮುಖವಾಗಿ ಎ.ಎಸ್. ಪೊನ್ನಣ್ಣ, ಪ್ರದೀಪ್ ಈಶ್ವರ್, ಅಶೋಕ್‌ ರೈ, ಎ.ಸಿ.ಶ್ರೀನಿವಾಸ್‌, ಪಿ.ರವಿಕುಮಾರ್, ನಯನಾ ಮೋಟಮ್ಮ, ದರ್ಶನ್ ಧ್ರುವನಾರಾಯಣ, ಭೀಮಸೇನ ಚಿಮ್ಮನಕಟ್ಟಿ, ಇಕ್ಬಾಲ್ ಹುಸೇನ್, ಬಾಬಾಸಾಹೇಬ್‌ ಪಾಟೀಲ್, ಬಿ.ದೇವೇಂದ್ರ, ಎನ್‌.ಶ್ರೀನಿವಾಸ್‌, ಉದಯ್‌ ಕಡಲೂರ್‌, ವಿಶ್ವಾಸ್‌ ವಿ.ವೈದ್ಯ, ಎಚ್‌.ವಿ.ವೆಂಕಟೇಶ್‌, ಬಸವರಾಜ ಶಿವಗಂಗಾ, ಪ್ರಕಾಶ್‌ ಕೋಳಿವಾಡ, ಮಂಜಲ್‌ಗೌಡ, ಆನಂದ್‌ ಕೆ.ಎಸ್‌, ಚನ್ನರೆಡ್ಡಿ ಪಾಟೀಲ್‌,ರವಿಶಂಕರ್, ಅಶೋಕ್ ಕುಮಾರ್ ರೈ, ನಾರಾ ಭರತ್ ರೆಡ್ಡಿ ಸೇರಿದಂತೆ ಹಲವರು ಹೆಸರಿದೆ.

ವೈರಲ್ ಆಗಿರುವ ಈ ಪತ್ರದಲ್ಲಿ ಯಾವುದೇ ದಿನಾಂಕ ಉಲ್ಲೇಖಿಸಿಲ್ಲ. ಆದರೆ, ಬೆಳಗಾವಿ ಮತ್ತು ಬೆಂಗಳೂರು ಅಧಿವೇಶನದ ಸಮಯದಲ್ಲಿ ಸಹಿ ಸಂಗ್ರಹ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕ ಪ್ರವಾಸದಲ್ಲಿರುವಾಗಲೇ ಈ ಪತ್ರ ಬಹಿರಂಗವಾಗಿರುವುದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳಲ್ಲಿ ತಳಮಳ ಸೃಷ್ಟಿಸಿದೆ.

ಹೈಕಮಾಂಡ್‌ಗೆ ಪತ್ರ ರವಾನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪತ್ರ ಕಳುಹಿಸಿದ್ದಾರೆ. ಸಂಪುಟ ಸಭೆಯಲ್ಲಿ ಹೊಸಬರು ಹಾಗೂ ಹಳಬರು ಇದ್ದಾಗ ಮಾತ್ರ ಉತ್ತಮ ಆಡಳಿತ ನೀಡಬಹುದು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ದಲಿತ ಸಿಎಂ ಹಾಗೂ ನಾಯಕತ್ವ ಬದಲಾವಣೆ ಬಿಕ್ಕಟ್ಟಿನ ಬೆನ್ನಲ್ಲೇ ಸಂಪುಟ ಪುನಾರಚನೆಗೆ ಆಗ್ರಹಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Read More
Next Story