
Karnataka By Election : ಇಂದು ಬಹಿರಂಗ ಪ್ರಚಾರ ಅಂತ್ಯ, ಕೊನೇ ದಿನ ಅಬ್ಬರದ ಮತಯಾಚನೆ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಕಮಲ ಪಡೆಯ ಹಲವು ಪ್ರಮುಖ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ರೋಡ್ ಶೋಗಳ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ರಾಜ್ಯದ ಉಪಚುನಾವಣಾ ಕಣ ತೀವ್ರ ರಂಗೇರಿದ್ದು, ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಏಪ್ರಿಲ್ 7ರಂದು) ಸಂಜೆ 5 ಗಂಟೆಗೆ ಅಧಿಕೃತವಾಗಿ ತೆರೆ ಬೀಳಲಿದೆ. ಕೊನೆಯ ದಿನವಾದ ಇಂದು ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಯ ಘಟಾನುಘಟಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ರೋಡ್ ಶೋ ಮತ್ತು ಬೃಹತ್ ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಅಂತಿಮ ಕಸರತ್ತು ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಕೊನೆಯ ದಿನದ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇಡೀ ದಿನ ಅವರು ವಿವಿಧೆಡೆ ರೋಡ್ ಶೋ ಹಾಗೂ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ ಮತದಾರರನ್ನು ಸೆಳೆಯಲಿದ್ದಾರೆ. ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲುವಿಗಾಗಿ ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.
ಆಡಳಿತ ಪಕ್ಷಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ಬಿಜೆಪಿ ನಾಯಕರು ಕೂಡ ಅಖಾಡದಲ್ಲಿ ಬೆವರು ಹರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಕಮಲ ಪಡೆಯ ಹಲವು ಪ್ರಮುಖ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ರೋಡ್ ಶೋಗಳ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ಮನೆ ಮನೆ ಪ್ರಚಾರ ಆರಂಭ
ಚುನಾವಣಾ ಆಯೋಗದ ನಿಯಮದಂತೆ ಇಂದು ಸಂಜೆ 5 ಗಂಟೆಯ ಬಳಿಕ ಯಾವುದೇ ರೀತಿಯ ಬಹಿರಂಗ ಸಭೆ, ಸಮಾರಂಭ ಅಥವಾ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಅಭ್ಯರ್ಥಿಗಳು ಮತ್ತು ಮುಖಂಡರಿಗೆ ಕೇವಲ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಮುಕ್ತ ಮತ್ತು ನ್ಯಾಯಸಮ್ಮತ ಮತದಾನದ ಹಿತದೃಷ್ಟಿಯಿಂದ, ಕ್ಷೇತ್ರದ ಮತದಾರರಲ್ಲದ ಹೊರಗಿನ ವ್ಯಕ್ತಿಗಳು ಹಾಗೂ ರಾಜಕೀಯ ಮುಖಂಡರು ಸಂಜೆ 5 ಗಂಟೆಯೊಳಗೆ ಕಡ್ಡಾಯವಾಗಿ ಕ್ಷೇತ್ರವನ್ನು ಬಿಟ್ಟು ತೆರಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

