Karnataka by elections|ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಉಸ್ತುವಾರಿಗೆ 10 ಸಚಿವರ ನೇಮಕ
x
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ

Karnataka by elections|ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಉಸ್ತುವಾರಿಗೆ 10 ಸಚಿವರ ನೇಮಕ

ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ 18 ಸಚಿವರನ್ನೊಳಗೊಂಡ ಬಲಿಷ್ಠ ಉಸ್ತುವಾರಿ ಸಮಿತಿಗಳನ್ನು ರಚಿಸಿದ್ದು, ಅಭ್ಯರ್ಥಿ ಆಯ್ಕೆ ಹಾಗೂ ಗೆಲುವಿನ ರಣತಂತ್ರ ರೂಪಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದೆ.


Click the Play button to hear this message in audio format

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಹಾಗೂ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಮಾರ್ಗದರ್ಶನದಂತೆ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವಿನ ರಣತಂತ್ರ ರೂಪಿಸಲು ಸಚಿವರನ್ನೊಳಗೊಂಡ ಪ್ರಬಲ ಉಸ್ತುವಾರಿ ಸಮಿತಿಗಳನ್ನು ರಚಿಸಿ ಅಖಾಡಕ್ಕಿಳಿಸಿದ್ದಾರೆ.

ಬಾಗಲಕೋಟೆಗೆ 15 ಸದಸ್ಯರ ತಂಡ

ಬಾಗಲಕೋಟೆ ಉಪಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಕೇವಲ ಒಂದು ಕ್ಷೇತ್ರಕ್ಕೆ 15 ಸದಸ್ಯರ ಬಲಿಷ್ಠ ಉಸ್ತುವಾರಿ ತಂಡವನ್ನು ನೇಮಕ ಮಾಡಿದೆ. ಈ ತಂಡದಲ್ಲಿ ಬರೋಬ್ಬರಿ ಎಂಟು ಮಂದಿ ಪ್ರಭಾವಿ ಸಚಿವರನ್ನು ನಿಯೋಜಿಸಿರುವುದು ವಿಶೇಷ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೊಂದಿಗೆ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಶಿವರಾಜ್ ತಂಗಡಗಿ, ಶರಣಬಸಪ್ಪ ದರ್ಶನಾಪುರ, ಭೈರತಿ ಸುರೇಶ್ ಮತ್ತು ರಹೀಮ್ ಖಾನ್ ಅವರಿಗೆ ಈ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಈ ಸಮಿತಿಯ ಸಂಚಾಲಕರಾಗಿದ್ದು, ಶಾಸಕರಾದ ಸಿ.ಎಸ್. ನಾಡಗೌಡ ಮತ್ತು ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಅನುಭವಿ ನಾಯಕರು ಇಲ್ಲಿ ಕೆಲಸ ಮಾಡಲಿದ್ದಾರೆ.

ದಾವಣಗೆರೆಗೆ 16 ಜನರ ಸಮಿತಿ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ತನ್ನ ಹಿಡಿತ ಸಾಧಿಸಲು ಕಾಂಗ್ರೆಸ್ ಹತ್ತು ಮಂದಿ ಸಚಿವರ ದಂಡನ್ನೇ ಸಜ್ಜುಗೊಳಿಸಿದೆ. ಇಲ್ಲಿ ಒಟ್ಟು 16 ಜನರ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಸಚಿವರಾದ ಕೆ.ಎಚ್. ಮುನಿಯಪ್ಪ, ಜಮೀರ್ ಅಹ್ಮದ್ ಖಾನ್, ಈಶ್ವರ್ ಖಂಡ್ರೆ, ಕೃಷ್ಣಬೈರೇಗೌಡ, ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ್ ಲಾಡ್ ಮತ್ತು ಮಧು ಬಂಗಾರಪ್ಪ ಅವರಿಗೆ ಉಸ್ತುವಾರಿ ವಹಿಸಲಾಗಿದೆ.

ಈ ಸಮಿತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಸಂಚಾಲಕರಾಗಿ ನೇಮಕಗೊಂಡಿದ್ದು, ಹಿರಿಯ ಮುಖಂಡರಾದ ತನ್ವೀರ್ ಸೇಠ್, ಎಚ್.ಎಂ. ರೇವಣ್ಣ ಮತ್ತು ಎಚ್. ಆಂಜನೇಯ ಅವರು ರಣತಂತ್ರ ರೂಪಿಸಲು ಸಾಥ್ ನೀಡಲಿದ್ದಾರೆ.

ಈ ಎರಡೂ ಸಮಿತಿಗಳು ಆಯಾ ಜಿಲ್ಲೆಗಳ ಸ್ಥಳೀಯ ನಾಯಕರು, ಸಂಸದರು, ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಗೆಲ್ಲುವ ಕುದುರೆಗಳನ್ನು ಗುರುತಿಸಿ ಕೆಪಿಸಿಸಿಗೆ ಶೀಘ್ರವಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. 2026 ಮಾರ್ಚ್ 6 ರಂದು ಹೊರಡಿಸಲಾದ ಈ ಆದೇಶಗಳು, ಈ ಉಪಚುನಾವಣೆಗಳಲ್ಲಿ ಸಚಿವರ ಪ್ರಭಾವವನ್ನು ಬಳಸಿಕೊಂಡು ಸರ್ಕಾರ ಮತ್ತು ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಕಾಂಗ್ರೆಸ್ ಹೂಡಿರುವ ಹಿರಿಯ ಮಟ್ಟದ ತಂತ್ರಗಾರಿಕೆಯನ್ನು ಪ್ರತಿಬಿಂಬಿಸುತ್ತವೆ.

ಜಾತಿ ಲೆಕ್ಕಚಾರವು ಜೋರು

ಬಾಗಲಕೋಟೆಯಲ್ಲಿ ಕುರುಬ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಯ ಮತಗಳು ನಿರ್ಣಾಯಕವಾಗಿದ್ದು, ಸಮಿತಿಯಲ್ಲಿ ಆರ್.ಬಿ. ತಿಮ್ಮಾಪುರ, ಎಂ.ಬಿ. ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಸ್ಥಾನ ನೀಡಿರುವುದು ಈ ಸಮುದಾಯಗಳನ್ನು ಸೆಳೆಯುವ ಉದ್ದೇಶ ಹೊಂದಿದೆ. ಇತ್ತ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಉಂಟಾದ ಶೂನ್ಯವನ್ನು ತುಂಬಲು ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಅದಕ್ಕಾಗಿಯೇ ಇ ಜಮೀರ್ ಅಹ್ಮದ್ ಖಾನ್ ಮತ್ತು ಮಲ್ಲಿಕಾರ್ಜುನ್ ಅವರಂತಹ ನಾಯಕರನ್ನು ಮುಂಚೂಣಿಯಲ್ಲಿ ನಿಲ್ಲಿಸಲಾಗಿದೆ.

ಗ್ಯಾರಂಟಿಗಳ ಪರೀಕ್ಷೆ

ಈ ಉಪಚುನಾವಣೆಯ ಫಲಿತಾಂಶವು ಸರ್ಕಾರದ 'ಪಂಚ ಗ್ಯಾರಂಟಿ' ಯೋಜನೆಗಳ ಜನಪ್ರಿಯತೆಗೆ ಲಭಿಸುವ ಅಂತಿಮ ಪ್ರಮಾಣ ಪತ್ರವಾಗಲಿದೆ. ಒಂದು ವೇಳೆ ಈ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಾದರೆ ಅದು ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರವಾಗಲಿದೆ. ಈ ಅಪಾಯವನ್ನು ಅರಿತಿರುವ ಡಿ.ಕೆ. ಶಿವಕುಮಾರ್ ಅವರು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲೇ ಪಾರದರ್ಶಕತೆ ಮತ್ತು ಸ್ಥಳೀಯ ನಾಯಕರ ಒಮ್ಮತಕ್ಕೆ ಒತ್ತು ನೀಡುತ್ತಿದ್ದಾರೆ.

ಎಐಸಿಸಿ ನಿರ್ದೇಶನದಂತೆ ಈ ಸಮಿತಿಗಳು ರಚನೆಯಾಗಿದ್ದು, ವರದಿ ಸಲ್ಲಿಕೆಗೆ ಗಡುವು ನೀಡಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಸಚಿವರನ್ನು ಪ್ರಚಾರಕ್ಕೆ ಸೀಮಿತಗೊಳಿಸದೆ ಅಭ್ಯರ್ಥಿ ಆಯ್ಕೆಯ ಹೊಣೆಯನ್ನೂ ಅವರಿಗೆ ನೀಡಿರುವುದು ಕಾಂಗ್ರೆಸ್‌ನ ಹೊಸ ರಾಜಕೀಯ ಪ್ರಯೋಗವಾಗಿದೆ. ಇದು ಬಗಲಕೋಟೆ ಮತ್ತು ದಾವಣಗೆರೆಯಲ್ಲಿ ವಿರೋಧ ಪಕ್ಷದ ತಂತ್ರಗಾರಿಕೆಯನ್ನು ಮಣಿಸಲು ಸಿದ್ಧಪಡಿಸಿದ 'ಚಕ್ರವ್ಯೂಹ'ದಂತಿದೆ.

Read More
Next Story