
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ್
Karnataka Budget 2026| ಜನರ ಕೈಗೆ ಚೊಂಬು, ರಾಜ್ಯಕ್ಕೆ ಸಾಲದ ಶೂಲ; ಬಜೆಟ್‌ಗೆ ಪ್ರತಿಪಕ್ಷಗಳ ಕಿಡಿ
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ಬಜೆಟ್ ಸಂಪೂರ್ಣ ನಿರಾಶದಾಯಕವಾಗಿದ್ದು, ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ ಎಂದು ಪ್ರತಿಪಕ್ಷಗಳ ನಾಯಕರು ಸರ್ಕಾರವನ್ನು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 17ನೇ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆ ಘೋಷಿಸದೇ ರಾಜ್ಯದ ಜನರ ಮೇಲೆ ಸರ್ಕಾರವು ಸಾಲದ ಹೊರೆ ಹೊರಿಸಿದೆ. ನಾಗರಿಕರಿಕರಿಗೆ ಚೊಂಬು ನೀಡಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಬಜೆಟ್ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ʼಎಕ್ಸ್ʼ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, "ಸ್ಲೋಗನ್ ರಾಮಯ್ಯನವರ ಬಜೆಟ್‌ನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆ ದಿಕ್ಕಾಪಾಲಾಗುವಂತೆ ಮಾಡಿದ್ದಾರೆ." ಎಂದು ವ್ಯಂಗ್ಯವಾಡಿದ್ದಾರೆ.
"ಒಂದು ಮಾತು ಸ್ಪಷ್ಟ, ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗುತ್ತಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ. ಮುಂದಿನ ದಿನಗಳು ಇನ್ನೂ ದುರ್ಬರವಾಗಿರಲಿವೆ. ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ" ಎಂದಿದ್ದಾರೆ.
ಕೇಂದ್ರದ ಹಣ ಕಡಿಮೆಯಾಗಿಲ್ಲ
ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದ್ದು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರ್ಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ. 16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು ಶೇ.3.61ರಿಂದ ಶೇ.4.7ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ 11,000 ಕೋಟಿ ರೂ. ಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಜೆಟ್‌ನಿಂದ ನಿರಾಸೆ
ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದೆ. ರಾಜ್ಯದ್ದು ಈಗ 4.48 ಲಕ್ಷ ಕೋಟಿ ರೂ.ಗಾತ್ರದ ಬಜೆಟ್. ರಾಜ್ಯದ ಈಗಿನ ಒಟ್ಟು ಸಾಲ 8.24 ಲಕ್ಷ ಕೋಟಿ ರೂ.ಗಳಾಗಿದೆ. ಕಳೆದ ವರ್ಷವಿದ್ದ ಸಾಲದ ಪ್ರಮಾಣ 1.16 ಲಕ್ಷ ಕೋಟಿ ರೂ. ನಿಂದ 1.32 ಲಕ್ಷ ಕೋಟಿ ರೂ. ಗೆ ಏರಿದೆ. ಮುಂದಿನ ವರ್ಷಕ್ಕೆ 9 ಲಕ್ಷ ಕೋಟಿ ರೂ. ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದು ತಿಳಿಸಿದ್ದಾರೆ.
ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ?, ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ರಾಜ್ಯ ಸಚಿವ ಸಂಪುಟ ದರ್ಜೆ ಸ್ಥಾನಮಾನ ದಯಪಾಲಿಸಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ. ಮುಂಬರುವ ಸರ್ಕಾರಗಳಿಗೆ ಕಾಂಗ್ರೆಸ್ ಸರ್ಕಾರ ಸೃಷ್ಟಿಸುವ ಸಾಲ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಜನತೆಗೆ ಚೊಂಬು ನೀಡಿದ ಸಿಎಂ: ಆರ್.ಅಶೋಕ್
ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಶುಕ್ರವಾರ (ಮಾ.6) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಸಾಲ ಮಾಡಿ ತುಪ್ಪ ತಿನ್ನಿ ಎಂಬಂತಾಗಿದೆ. ಉಪ್ಪು, ಹುಳಿ, ಖಾರ ಇಲ್ಲದ ಬಜೆಟ್ ಆಗಿದ್ದು, 4 ಲಕ್ಷ ಕೋಟಿ ಸಾಲದ ಹೊರೆಯನ್ನು ಹೇರಿದ್ದಾರೆ. ಈ ಬಜೆಟ್‌ನಲ್ಲಿ ವಿತ್ತಿಯ ಕೊರತೆ ಮುಂದುವರಿದಿದೆ. ಈ ಹಣಕ್ಕೆ ಬಡ್ಡಿ ಕಟ್ಟುವುದಕ್ಕೂ ಆಗುವುದಿಲ್ಲ. ಹೀಗೇ ಮುಂದುವರಿದರೆ ನಮ್ಮ ಸಾಲದ ಹೊರೆ 10 ಲಕ್ಷ ಕೋಟಿ ರೂ. ಆಗುತ್ತದೆ. ರಾಜ್ಯದ ಎಲ್ಲಾ ಸಿಎಂಗಳು ಮಾಡಿದ್ದಕ್ಕಿಂತ ಹೆಚ್ಚಿನ ಸಾಲವನ್ನು ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾದೇಶಿಕ ಅಸಮತೋಲ ನಿವಾರಣೆಗೆ ಸರ್ಕಾರ ನೇಮಿಸಿದ್ದ ಗೋವಿಂದರಾವ್ ವರದಿ ಶಿಫಾರಸು ಸರ್ಕಾರಕ್ಕೆ ಕೈ ಸೇರಿ ಹಲವು ದಿನಗಳಾದರೂ ಒಂದೂ ಶಿಫಾರಸು ಘೋಷಣೆಯಾಗಿಲ್ಲ. ನೀರಾವರಿ ಯೋಜನೆಗೆ 8 ಸಾವಿರ ಕೋಟಿ ರೂ. ನೀಡಲಾಗಿದೆ. ಕರಾವಳಿ ಭಾಗಕ್ಕೆ ಒಣ ಮೀನನ್ನೂ ಕೊಟ್ಟಿಲ್ಲ. ಬದಲಾಗಿ ಒಂದು ಚೊಂಬು ನೀಡಿ ಕರಾಳ ದಿನಗಳನ್ನು ತಂದಿದ್ದಾರೆ. ದ್ವೇಷ ಭಾಷಣದ ಕೊಡುಗೆ ಬಿಟ್ಟರೆ ಏನೂ ಇಲ್ಲ ಎಂದರು.
ಪರಿಶಿಷ್ಟರ ಹಣ ಲೂಟಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಆರೋಪದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಜಿಡಿಪಿ ಬೆಳವಣಿಗೆ ಕಡಿಮೆಯಾಗುತ್ತಿದೆ. ವಿತ್ತೀಯ ಕೊರತೆ ಕಡಿಮೆ ಇಟ್ಟಿದ್ದೇವೆ ಎಂಬುದು ಕಟ್ಟುಕತೆ. ಜನಗಳ ತಲಾ ಆದಾಯ ಇವರೇ ಜಾಸ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿಗೆ ಹಣ ನೀಡದಷ್ಟು ಸರ್ಕಾರ ಪಾಪರ್ ಆಗಿದೆ. ಅಡಮಾನ ಇಡಲು ಇವರ ಬಳಿ ಏನೂ ಇಲ್ಲ. ಮೊದಲ ಬಾರಿಗೆ ಬಾಂಡ್ ರಿಲೀಸ್ ಎನ್ನುತ್ತಿರುವುದು ಸರ್ಕಾರ ದಿವಾಳಿಯಾಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಶೂನ್ಯ ಬಜೆಟ್: ಸಂಸದ ಬೊಮ್ಮಾಯಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಆಗಿದ್ದು, ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ. ಇದರಿಂದ ರಾಜ್ಯದ ಹಣಕಾಸಿನ ಮೇಲೆ ದೂರಗಾಮಿ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ದಿ ಶೂನ್ಯ ಪ್ರಗತಿ ರಹಿತವಾದ ಅತಿ ಹೆಚ್ಚು ಸಾಲ ಮಾಡಿರುವ ಬಜೆಟ್, 1.32 ಲಕ್ಷ ಕೋಟಿ ರೂ. ಸಾಲ ಮಾಡಿ ಸುಮಾರು 25 ಸಾವಿರ ಕೋಟಿ ರೂ. ಹೊಸ ತೆರಿಗೆ ಹಾಕಿ 32 ಸಾವಿರ ಕೋಟಿ ರೂ. ಕೊರತೆ ಬಜೆಟ್ ಮಂಡನೆ ಮಾಡಿದ್ದಾರೆ. ಇದರಿಂದ ದೂರಗಾಮಿ ಹಣಕಾಸಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದೆ. ರಾಜ್ಯವನ್ನು 15 ವರ್ಷ ಹಿಂದೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ನಿರಾಸೆಯಾಗಿದೆ. 17ನೇ ಬಾರಿ ಬಜೆಟ್ ಮಂಡನೆ ಮಾಡಿರುವ ಸಿಎಂ ನಿಂದ ಇಂತಹ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ ಎಂದರು.

