
113 ಸ್ಥಾನ ಗಳಿಸಿದವರಿಗೆ ಸಿಎಂ ಸ್ಥಾನ; ಮೈತ್ರಿಯಲ್ಲಿ ಬಿರುಕು ಮೂಡಿಸಿತೇ ಛಲವಾದಿ ಮಾತು?
ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಈಗಲೇ ಮಾತನಾಡಿದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದಂತೆ ಆಗುತ್ತದೆ ಎಂದು ಎಚ್‌ಡಿಕೆ ಹೇಳಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ 113 ಸ್ಥಾನ ಗೆದ್ದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಲು ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಬಿಜೆಪಿ 113 ಸ್ಥಾನ ಗೆದ್ದರೆ ನಮ್ಮವರು ಸಿಎಂ ಆಗಲಿದ್ದಾರೆ ಎಂಬ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ಮೈತ್ರಿ ಪಕ್ಷಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾಸನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ನವರ ನಮ್ಮ ಬಗ್ಗೆಯಾಗಲಿ, ನಾವು ಅವರ ಬಗ್ಗೆಯಾಗಲಿ ಮಾತನಾಡುವುದು ಸೂಕ್ತವಲ್ಲ. ನಾವು ಎಷ್ಟು ಗೌರವಿಸುತ್ತೇವೋ, ನಮ್ಮನ್ನು ಅವರೂ ಅಷ್ಟೇ ಗೌರವದಿಂದ ಕಾಣಬೇಕು. ಬಿಜೆಪಿಯಲ್ಲಿ ತೀರ್ಮಾನಗಳು ಹೈಕಮಾಂಡ್ ಮಟ್ಟದಲ್ಲಿ ನಡೆಯಲಿವೆ. ಜೆಡಿಎಸ್ನಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೋ, ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ತಳಮಟ್ಟದಲ್ಲಿ ಯಾರು ಏನೇ ಮಾತನಾಡಿದರೂ ಪ್ರಯೋಜನವಿಲ್ಲ ಎಂದರು.
ಶಾಸಕ ಎಚ್.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಏನೇ ಹೇಳಿಕೆ ಕೊಟ್ಟರೂ ಪ್ರತಿಕ್ರಿಯಿಸಲ್ಲ.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಅವರಿಗೆ ಟಿಕೆಟ್ ನೀಡುವುದು ವರಿಷ್ಠರು. ಈ ಹಿಂದೆ ಅವರು ಶಾಸಕರಾಗಿದ್ದವರು, ಪಕ್ಷಕ್ಕೆ ಜಿಲ್ಲೆಯಲ್ಲಿ ಬಲವಿದೆ. ಬಿಜೆಪಿ- ಜೆಡಿಎಸ್ ನಡುವಿನ ಮೈತ್ರಿ, ಸೀಟು ಹಂಚಿಕೆ ಒಪ್ಪಂದ ಎಲ್ಲವನ್ನೂ ಕೇಂದ್ರದ ನಾಯಕರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮೈತ್ರಿಯಲ್ಲಿ ಗೊಂದಲವಿಲ್ಲ; ಎಚ್.ಡಿ.ಕುಮಾರಸ್ವಾಮಿ
ಸಿಎಂ ಹುದ್ದೆ, ಮೈತ್ರಿ ಹೇಳಿಕೆ ಕುರಿತ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಈಗಲೇ ಮಾತನಾಡಿದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಆಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಕೆಟ್ಟ ಸರ್ಕಾರವಿದೆ, ಅದನ್ನು ತೊಲಗಿಸಿ ಜನಪರ ಸರ್ಕಾರ ತರಬೇಕು ಎನ್ನುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಟ್ಟಿಗೆ ಕೆಲಸ ಮಾಡಲಿವೆ ಎಂದು ಹೇಳಿದರು.
ಕೆಲವರು ಮೈತ್ರಿ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಉತ್ತರ ಕೊಡಬೇಕು ಎಂದು ನನಗೆ ಅನಿಸುತ್ತಿಲ್ಲ. ಒಂದು ವೇಳೆ ನಾನು ಅವರಿಗೆಲ್ಲಾ ಉತ್ತರ ಕೊಡುತ್ತಾ ಹೋದರೆ ನನಗೆ ಪ್ರಬುದ್ಧತೆ ಇಲ್ಲ ಎಂದು ಜನ ಅಂದುಕೊಳ್ಳುತ್ತಾರೆ. ಹೀಗಾಗಿ ನಾನು ಆ ಬಗ್ಗೆ ಮಾತಾಡುವುದಿಲ್ಲ. ಮೈತ್ರಿಕೂಟವನ್ನು ಬಲಪಡಿಸಿ, ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಇದೆ, ಗ್ರೇಟರ್ ಬೆಂಗಳೂರು ಚುನಾವಣೆಗೆ ಸಂಬಂಧಿಸಿದಂತೆ ಈವರೆಗೆ ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆದಿಲ್ಲ. ಸಮಯ ಬಂದಾಗ ಖಂಡಿತಾ ಚರ್ಚೆ ಮಾಡುತ್ತೇವೆ. ಮೈತ್ರಿ ವಿಚಾರದಲ್ಲಿ ನಾನು, ನಮ್ಮ ಪಕ್ಷ ಮುಕ್ತವಾಗಿದೆ. ಸಂದರ್ಭ ಬಂದಾಗ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ, ಮುಂದೆಯೂ ಆಗುವುದಿಲ್ಲ. ಇದು ನನ್ನ ನಿಲುವು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಗ್ರೇಟರ್ ಚುನಾವಣೆ ಸಿದ್ಧತಾ ಸಭೆ
ಗ್ರೇಟರ್ ಬೆಂಗಳೂರು ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದರು. ನಗರದ ಎಲ್ಲಾ ವಿಧಾಸಭೆ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಆಹ್ವಾನಿತ ಪ್ರಮುಖರ ಜತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದರು.
ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈ ಸರಕಾರ ಚುನಾವಣೆಯನ್ನು ನಡೆಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ನಾವು ತಯಾರಿ ಮಾಡಿಕೊಳ್ಳಬೇಕು ಎಂದು ಮುಖಂಡರಿಗೆ ತಿಳಿಸಿದ ಸಚಿವರು; ಮತಗಟ್ಟೆ, ವಾರ್ಡ್ ಮತ್ತು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏನೇನು ಮಾಡಬೇಕು, ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಕೆಲ ಸ್ಪಷ್ಟ ಸೂಚನೆಗಳನ್ನು ನೀಡಿದರು.

