
Assembly Session: ಸಚಿವರಿಂದ ಸಿಗದ ಉತ್ತರ; ಸದನದಿಂದ ಹೊರನಡೆದ ಸ್ಪೀಕರ್!
ಶಾಸಕರು ಕೇಳುವ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ಪ್ರಸ್ತುತ ಅಧಿವೇಶನದಲ್ಲಿ ಸರ್ಕಾರ ಈ ವಿಚಾರದಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ವಿಧಾನಸಭೆ ಕಲಾಪದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಸಚಿವರು ಸೂಕ್ತ ಉತ್ತರ ನೀಡದ ಕಾರಣ ಸಭಾಧ್ಯಕ್ಷರೇ ಸಭಾತ್ಯಾಗ ಮಾಡಿರುವ ಪ್ರಸಂಗಕ್ಕೆ ವಿಧಾನಸಭೆ ಅಧಿವೇಶನ ಸಾಕ್ಷಿಯಾಯಿತು.
ಸರ್ಕಾರದ ಬೇಜವಾಬ್ದಾರಿತನ ಮತ್ತು ಸಚಿವರ ನಿರ್ಲಕ್ಷ್ಯದ ವಿರುದ್ಧ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪೀಠದಿಂದ ಎದ್ದು ಹೋಗಿ ಅಸಮಾಧಾನ ಹೊರಹಾಕಿದರು.
ಸೋಮವಾರ(ಮಾ.16) ಕಲಾಪ ಆರಂಭವಾದ ಬಳಿಕ ಮಾತನಾಡಿದ ಸ್ಪೀಕರ್ ಖಾದರ್ ಅವರು , ಅಧಿವೇಶನ ಎನ್ನುವುದು ಜನರ ಸಮಸ್ಯೆಗಳನ್ನು ಚರ್ಚಿಸಲು ಇರುವ ವೇದಿಕೆ. ಇಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ಪ್ರಸ್ತುತ ಅಧಿವೇಶನದಲ್ಲಿ ಸಚಿವರು ಅತ್ಯಂತ ನಿರ್ಲಕ್ಷ್ಯ ವಹಿಸಿದ್ದಾರೆ. ಒಟ್ಟು 230 ಲಿಖಿತ ಪ್ರಶ್ನೆಗಳ ಪೈಕಿ ಸರ್ಕಾರವು ಕೇವಲ 84 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದೆ. ಅಂದರೆ, ಅರ್ಧಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರವೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸದನದಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಭಾಧ್ಯಕ್ಷರು ಈಗಾಗಲೇ ನಾಲ್ಕು ಬಾರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆದರೂ ಶೇ. 50ರಷ್ಟು ಪ್ರಶ್ನೆಗಳಿಗೆ ಉತ್ತರ ನೀಡದೇ ನಿಯಮ ಪಾಲಿಸಿಲ್ಲ. ಐದನೇ ಬಾರಿ ಎಚ್ಚರಿಕೆ ನೀಡಿದರೂ ಸರ್ಕಾರದ ಸಚಿವರು ಎಚ್ಚೆತ್ತುಕೊಳ್ಳುತ್ತಿಲ್ಲ. ಇವರು ದೇವರ ತರಹ ಬರುತ್ತಾರೆ, ದೇವರ ತರಹವೇ ಮನೆಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಶಾಸಕರಿಗಾಗಿ ಸದನ
ಪ್ರತಿಪಕ್ಷ ನಾಯಕರ ಮಾತಿಗೆ ಧ್ವನಿಗೂಡಿಸಿದ ಸ್ಪೀಕರ್ ಯು.ಟಿ. ಖಾದರ್, ಅತ್ಯಂತ ಕಟು ಶಬ್ದಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸದನ ನಡೆಯುವುದು ಸಚಿವರಿಗಾಗಿ ಅಲ್ಲ, ಇದು ಶಾಸಕರಿಗಾಗಿ ನಡೆಯುವ ಅಧಿವೇಶನ. ಮೂರು ತಿಂಗಳಿಗೊಮ್ಮೆ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬರುತ್ತಾರೆ. ಉತ್ತರ ನೀಡದಿದ್ದರೆ ಹೇಗೆ? ಎಂದು ಬೇಸರ ವ್ಯಕ್ತಪಡಿಸಿದರು.
ಸೂಚನೆ ನೀಡಿದರೂ ಸುಧಾರಣೆ ಇಲ್ಲ
ದಿನಕ್ಕೆ ಕೇವಲ 15 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಿದೆ. ಉಳಿದ ನೂರಾರು ಪ್ರಶ್ನೆಗಳಿಗೆ ಸರ್ಕಾರ ಲಿಖಿತ ಉತ್ತರ ನೀಡಲೇಬೇಕು. ಉತ್ತರವೇ ಇಲ್ಲದಿದ್ದರೆ ಶಾಸಕರು ಸದನಕ್ಕೆ ಏಕೆ ಬರಬೇಕು? ಸರಿಯಾದ ಸಮಯಕ್ಕೆ ಸಚಿವರು ಸದನಕ್ಕೆ ಹಾಜರಾಗುತ್ತಿಲ್ಲ. ಈಗಾಗಲೇ ನಾಲ್ಕು ಬಾರಿ ಸೂಚನೆ ನೀಡಿದರೂ ಯಾವುದೇ ಸುಧಾರಣೆ ಕಂಡಬರುತ್ತಿಲ್ಲ ಎಂದು ಕಿಡಿಕಾರಿದರು.
ಪೀಠದಿಂದ ಎದ್ದು ಹೋದ ಸಭಾಧ್ಯಕ್ಷ
ಸರ್ಕಾರದ ಧೋರಣೆಯಿಂದ ಅಸಮಾಧಾನಗೊಂಡ ಯು.ಟಿ. ಖಾದರ್, ಸರ್ಕಾರದ ಈ ವರ್ತನೆ ಸರಿಯಲ್ಲ. ಹೀಗಾದರೆ ಸದನ ನಡೆಸುವುದು ಹೇಗೆ? ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳು ಈ ವೈಫಲ್ಯದ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಸದನ ನಡೆಸುವುದಿಲ್ಲ" ಎಂದು ಹೇಳಿ ಪೀಠದಿಂದ ಎದ್ದು ಹೋದರು.
ಸ್ಪೀಕರ್ ಯು.ಟಿ.ಖಾದರ್ ಅವರು ಸಭಾಧ್ಯಕ್ಷ ಸ್ಥಾನದಿಂದ ಎದ್ದು ಹೊರನಡೆದರು.
ಸ್ಪೀಕರ್ ಜತೆ ಸಂಧಾನ ಸಭೆ
ಸ್ಪೀಕರ್ ಯು.ಟಿ.ಖಾದರ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ, ಸಚಿವರು ಹಾಗೂ ವಿಪಕ್ಷ ನಾಯಕರು ಸಂಧಾನ ಸಭೆ ನಡೆಸಿದರು. ಸದನ ನಡೆಸಲ್ಲ ಎಂದು ಹೊರನಡೆದ ಸ್ಪೀಕರ್ ಅವರನ್ನು ಸಮಧಾನಪಡಿಸಿದ ನಾಯಕರು, ಸೂಕ್ತ ರೀತಿಯಲ್ಲಿ ಸದನ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಶಾಸಕರ ಪ್ರಶ್ನೆಗಳಿಗೆ ಉತ್ತರ ಕೊಡಿಸುವುದಾಗಿ ಸಿಎಂ ಭರವಸೆ ನೀಡಿದರು.
ಅಧಿಕಾರಿಗಳ ವಿರುದ್ಧ ಕ್ರಮದ ಭರವಸೆ
ಸದನಕ್ಕೆ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ಧಾರೆ. ಅತಿ ಹೆಚ್ಚು ಉತ್ತರ ಬಾಕಿ ಉಳಿಸಿಕೊಂಡಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಸ್ಪೀಕರ್ ಜತೆಗಿನ ಸಂಧಾನ ಸಭೆಯಲ್ಲಿ ಸಿಎಂ ಭರವಸೆ ನೀಡಿದರು. ಅಲ್ಲದೇ ಭೋಜನದ ಬಳಿಕ ಸರ್ಕಾರ ಉತ್ತರ ನೀಡುವುದಾಗಿ ಹೇಳಿದರು.
ಸಿಎಂ ಭರವಸೆ ಬಳಿಕ ಸದನ ನಡೆಸಲು ಸ್ಪೀಕರ್ ಖಾದರ್ ಒಪ್ಪಿಕೊಂಡರು. ಆ ಬಳಿಕ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

