
ಸದನದಲ್ಲಿ ಶಾಸಕರಿಂದ ಅಸಂಸದೀಯ ಪದ ಬಳಕೆ; ವೈಯಕ್ತಿಕ ನಿಂದನೆಯಿಂದ ಕಲಾಪ ರಣಾಂಗಣ !
ರಾಜ್ಯ ವಿಧಾನಸಭೆ ಕಲಾಪವನ್ನು ರಾಜ್ಯದ ಜನತೆ ಮಾಧ್ಯಮಗಳಲ್ಲಿ ಗಮನಿಸುತ್ತಿರುತ್ತಾರೆ. ಗ್ಯಾಲರಿಯಲ್ಲಿ ಶಾಲಾ ಮಕ್ಕಳು ಕಲಾಪ ವೀಕ್ಷಿಸುತ್ತಿರುತ್ತಾರೆ. ಆದರೆ, ಸದಸ್ಯರ ಅಸಂಸದೀಯ ಪದ ಬಳಸಿರುವುದು ಸದನದ ಘನತೆಗೆ ಚ್ಯುತಿ ತಂದಿದೆ.
ಸಭ್ಯ ಸಂಸದೀಯ ನಡವಳಿಕೆ, ವರ್ತನೆಗಳಿಂದ ಸದನ ಹಾಗೂ ರಾಜ್ಯದ ಗೌರವ ಕಾಪಾಡಬೇಕಿದ್ದ ಶಾಸಕರು ಪರಸ್ಪರ ವೈಯಕ್ತಿಕ ನಿಂದನೆ, ವಾಗ್ದಾಳಿಗೆ ಇಳಿಯುವ ಮೂಲಕ ಸದನದ ಪಾವಿತ್ರ್ಯತೆ ಹಾಳು ಮಾಡಿದ ಪ್ರಸಂಗಕ್ಕೆ ಬುಧವಾರ ನಡೆದ ವಿಧಾನಸಭೆ ಕಲಾಪ ಸಾಕ್ಷಿಯಾಯಿತು. ಶಾಸಕರ ಅಸಂಸದೀಯ ಪದ ಬಳಕೆಯು ರಾಜ್ಯದ ಗೌರವಕ್ಕೆ ಚ್ಯುತಿ ತಂದೊಡ್ಡಿದೆ.
ಕೇಂದ್ರದ ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ವಿಧಾನಸಭೆ ಅಂಗೀಕರಿಸಿರುವ ನಿರ್ಣಯದ ಮೇಲೆ ಚರ್ಚೆ ಆರಂಭವಾಗಿದೆ. ಆದರೆ, ಎರಡು ದಿನಗಳಿಂದ ಅಬಕಾರಿ ಇಲಾಖೆ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದು, ಇಂದೂ ಕೂಡ ಪ್ರತಿಭಟನೆ ಮುಂದುವರಿಸಿದ್ದರು. ಚರ್ಚೆಯ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಪರಸ್ಪರ ಘೋಷಣೆ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು, ಮಾತನಾಡಲು ಎದ್ದುನಿಂತಾಗ ವಿಪಕ್ಷಗಳ ಸದಸ್ಯರು ʼಕೊಬ್ಬರಿ ಬೆಳೆಗಾರರಿಗೆ ಮೋಸ ಮಾಡಿದ್ದಕ್ಕೆ ಧಿಕ್ಕಾರʼ ಎಂದು ಕೂಗಿದರು. ಇದರಿಂದ ಸಿಟ್ಟಿಗೆದ್ದ ಶಿವಲಿಂಗೇಗೌಡ ಅವರು ಬಿಜೆಪಿ ಶಾಸಕರ ವಿರುದ್ಧ ಅಸಂಸದೀಯ ಪದ ಬಳಸಿದ ಕಾರಣ ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಯಿತು.
ವೈಯಕ್ತಿಕ ನಿಂದನೆ: ಕಲಾಪ ಮುಂದೂಡಿಕೆ
ವಿಪಕ್ಷಗಳ ಘೋಷಣೆಗೆ ಆಕ್ರೋಶಗೊಂಡ ಶಾಸಕ ಶಿವಲಿಂಗೇಗೌಡ ಅವರು, ಮನೆಹಾಳು ಮಾಡುವವರು ನೀವು ಎಂದು ಕಿಡಿಕಾರಿದರು. ಈ ವೇಳೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ವೈಯುಕ್ತಿಕ ನಿಂದನೆ ಮಾಡಬೇಡಿ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಗೆ ತಾಕೀತು ಮಾಡಿ ಕಡತದಿಂದ ಪದ ತೆಗೆಯುವಂತೆ ಸೂಚನೆ ನೀಡಿದರು. ಈ ವೇಳೆ ಸದನದಲ್ಲಿ ತೀವ್ರ ಗದ್ದಲವಾದ ಹಿನ್ನೆಲೆ 10 ನಿಮಿಷ ಕಲಾಪ ಮುಂದೂಡಲಾಯಿತು.
ಅಸಂಸದೀಯ ಪದ ಬಳಕೆ
ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಶಾಸಕರು ಧರಣಿ ನಡೆಸಿ, ಘೋಷಣೆ ಕೂಗಲಾರಂಭಿಸಿದರು. ಆಗ ಶಾಸಕ ಶಿವಲಿಂಗೇಗೌಡರು, "ಥೂ ಎಂದು ಉಗಿದು, ಬಿಜೆಪಿಯವರು ನಾಯಿಗಳಿಗಿಂತ ಕಡೆ. ಕೋತಿಗಳ ತರ ಕೂಗುತ್ತಿರುವವರು ನೀವು, ನಿಮಗೆ ಮಾನ ಮರ್ಯಾದೆ ಇದೆಯಾ..? ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ, ಅಯೋಗ್ಯರು ನೀವು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ತಿರುಗೇಟು ನೀಡಿದ ವಿಪಕ್ಷಗಳ ಶಾಸಕರು, ಜೆಡಿಎಸ್‌ಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದವರು ನೀವು ಎಂದು ಜರಿದರು. ಆಗ ತಾಳ್ಮೆ ಕಳೆದುಕೊಂಡ ಶಿವಲಿಂಗೇಗೌಡ, "ನಿಮ್ಮ ಅಪ್ಪನಿಗೆ ಚೂರಿ ಹಾಕಿದ್ದೆ, ಮಾನ ಮಾರ್ಯಾದೆ ಇದೆಯಾ, ನೀವು ಅಯೋಗ್ಯರು. ನಾಯಿಗಳಿಗಿಂತ ಕಡೆ ನೀವು, ಅವುಗಳಿಗಾದರೂ ನಿಯತ್ತು ಇದೆ" ಎಂದು ವಾಗ್ದಾಳಿ ನಡೆಸಿದರು.
ಶಾಸಕ ಕಾಮತ್, ಶರಣು ಸಲಗ ವಿರುದ್ಧ ಆಕ್ರೋಶ
ಶಾಸಕ ವೇದವ್ಯಾಸ ಕಾಮತ್ ಅವರನ್ನು ಉದ್ದೇಶಿಸಿ, ಇವನ್ಯಾವನೋ ಆರ್‌ಎಸ್ಎಸ್‌ನವನು. ಮಂಗಳೂರಿಂದ ಇಲ್ಲಿಗೆ ಬಂದಿದ್ದಾನೆ ಎಂದು ಏಕವಚನದಲ್ಲೇ ನಿಂದಿಸಿದರು. ಚಿಂಚೋಳಿ ಶಾಸಕ ಶರಣು ಸಲಗ ಅವರನ್ನು ಉದ್ದೇಶಿಸಿ, ಇವನು ಚಿಂಚೋಳಿಯಿಂದ ಬಂದವನು ಎಂದು ಹೇಳಿ ಅಶ್ಲೀಲ ಪದವೊಂದನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದರು.
ಸದನದ ಇತಿಹಾಸದಲ್ಲೇ ಇಂತಹ ಕೆಟ್ಟ ನಡತೆ ನೋಡಿಲ್ಲ, ಶಾಸಕ ಶಿವಲಿಂಗೇಗೌಡ ಅವರನ್ನು ಹೊರ ಹಾಕಬೇಕು ಎಂದು ವಿಪಕ್ಷಗಳ ಶಾಸಕರು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಕೆಟ್ಟ ಸಂಪ್ರದಾಯಕ್ಕೆ ನಾಂದಿ
ವೇದವ್ಯಾಸ್ ಕಾಮತ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಶಿವಲಿಂಗೇಗೌಡ ಅವರು, "ಲೇ, ನೀನ್ಯಾವನೋ ಕೇಳೋಕೆ ನನ್ನನ್ನು. ನಾನು ಪ್ರಜಾಪ್ರಭುತ್ವದ ಮೂಲಕ ಆರಿಸಿ ಬಂದವನು. ನಾನು ಯಾವುದಕ್ಕೂ ಹೆದರೋನಲ್ಲ, ಈ ಹಿಂದೆ ಗ್ರಾಮಾಡಳಿತ ಕೆಲಸ ಮಾಡುತ್ತಿತ್ತು. ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಹಳ್ಳಿಗಳ ನಾಡು ರೈತರ ಬೀಡು ಎಂದಿದ್ದರು. ಅದನ್ನು ಬಿಜೆಪಿಯ ಕೇಂದ್ರ ಸರ್ಕಾರ ಹಾಳು ಮಾಡಿದೆ. 20 ವರ್ಷದಿಂದ ನಾನು ಸದನದಲ್ಲಿದ್ದೇನೆ, ಇಂತಹ ಕೆಟ್ಟ ಸಂಪ್ರದಾಯ ನೋಡಿರಲಿಲ್ಲ" ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಚ್‌ಡಿಡಿ, ಎಚ್‌ಡಿಕೆಗೆ ಮೋಸ
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, "ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೋಸ ಮಾಡಿದ ಶಾಸಕ ಶಿವಲಿಂಗೇಗೌಡರಿಗೆ ಧಿಕ್ಕಾರ ಎಂದರು.
ಕುಣಿಗಲ್ ಶಾಸಕ ಡಾ. ರಂಗನಾಥ್ ಮಾತನಾಡುವಾಗಲೂ ಬಿಜೆಪಿ ಸದಸ್ಯರು, ಗೋವಿಂದ ಗೋವಿಂದ, ರಂಗನಾಥ ಸ್ವಾಮಿ ಗೋವಿಂದ, ವೆಂಕಟರಮಣ ಸ್ವಾಮಿ ಗೋವಿಂದ, ಆರು ಸಾವಿರ ಕೋಟಿ ರೂ. ಗೋವಿಂದ ಗೋವಿಂದ" ಎಂದು ವ್ಯಂಗ್ಯವಾಡಿದರು.

