ಧರ್ಮಸ್ಥಳ SIT ವರದಿ ಬಹಿರಂಗಪಡಿಸಿ: ವಿಧಾನಸಭೆಯಲ್ಲಿ ಸುರೇಶ್ ಕುಮಾರ್ ಆಗ್ರಹ
x
ಬಿಜೆಪಿ ನಾಯಕ ಸುರೇಶ್‌ ಕುಮಾರ್‌

ಧರ್ಮಸ್ಥಳ SIT ವರದಿ ಬಹಿರಂಗಪಡಿಸಿ: ವಿಧಾನಸಭೆಯಲ್ಲಿ ಸುರೇಶ್ ಕುಮಾರ್ ಆಗ್ರಹ

ಧರ್ಮಸ್ಥಳ ಬುರುಡೆ ಪ್ರಕರಣದ ಕುರಿತಾದ SIT ವರದಿಯನ್ನು ಬಹಿರಂಗಪಡಿಸುವಂತೆ ಎನ್. ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಆಗ್ರಹಿಸಿದರು.


ರಾಜ್ಯದ ಪ್ರಮುಖ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಹಾಗೂ ಎಸ್‌ಐಟಿ ತನಿಖೆಯ ವಿಳಂಬದ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಎನ್. ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದರು.

ಚರ್ಚೆಯ ಮುಖ್ಯಾಂಶಗಳು

ಧರ್ಮಸ್ಥಳದ ಕುರಿತಾದ ಸತ್ಯಾಸತ್ಯತೆ ಹೊರಬರಲಿ ಎಂದು ಸರ್ಕಾರ ಎಸ್‌ಐಟಿ ರಚಿಸಿತ್ತು. ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದ ಈ ತಂಡದಿಂದ ಐಪಿಎಸ್ ಅಧಿಕಾರಿಗಳಾದ ಅನುಚೇತ್ ಹಾಗೂ ಸೌಮ್ಯಲತಾ ಅವರು ಹೊರಬಂದ ವಿಚಾರವನ್ನು ಸುರೇಶ್ ಕುಮಾರ್ ಪ್ರಸ್ತಾಪಿಸಿದರು. "ಸಾಮಾನ್ಯ ಪೊಲೀಸ್ ತನಿಖೆಯಿಂದ ಜನರಲ್ಲಿ ನಂಬಿಕೆ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ಮಾಡಲಾಗಿತ್ತು, ಈಗ ಅದರ ವರದಿ ಏನಾಯಿತು?" ಎಂದು ಸುರೇಶ್‌ ಕುಮಾರ್‌ ಪ್ರಶ್ನಿಸಿದರು.

ತನಿಖೆಯ ಹೆಸರಿನಲ್ಲಿ ಯಾರನ್ನೋ ಬಂಧಿಸುವುದು, ಗಡಿಪಾರು ಮಾಡುವುದು ನಡೆದಿದೆ. ಈ ಬೆಳವಣಿಗೆಗಳಿಂದ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಮೇಲೆ ಜನರಿಗೆ ಅಪನಂಬಿಕೆ ಮೂಡುವಂತೆ ಮಾಡಲಾಗಿದೆ. ಗಡಿಪಾರಾದ ವ್ಯಕ್ತಿಯೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಹೋದಾಗ, ಅದನ್ನು 'ಪಿಐಎಲ್' (PIL) ಅಲ್ಲ, ಬದಲಿಗೆ 'ಪೈಸಾ ವಸೂಲ್ ಲಿಟಿಗೇಷನ್' ಎಂದು ನ್ಯಾಯಾಲಯ ಜರೆದಿರುವುದನ್ನು ಸದನದ ಗಮನಕ್ಕೆ ತಂದರು.

ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಸಂಚು

ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಕ್ಯಾಂಪೇನ್ ನಡೆಯುತ್ತಿದೆ ಎಂದು ಸುರೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಸೋಷಿಯಲ್ ಮೀಡಿಯಾ ದುರ್ಬಳಕೆ ಹಾಗೂ ಎಐ (AI) ತಂತ್ರಜ್ಞಾನ ಬಳಸಿ ನಡೆಸಲಾಗುವ ಅಪಪ್ರಚಾರದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ" ಎಂದು ಭರವಸೆ ನೀಡಿದರು.

"ನಾವು ಪಕ್ಷಾತೀತವಾಗಿ ಇಂತಹ ವಿಚಾರಗಳನ್ನು ಚರ್ಚಿಸಬೇಕು. ವಿಧಾನಸೌಧದ ಮುಂದೆ ನಿಂತು ನೋಡುವ ಸಾಮಾನ್ಯ ವ್ಯಕ್ತಿ 'ನನ್ನ ಬಗ್ಗೆಯೂ ಇಲ್ಲಿ ಚರ್ಚೆ ಆಗುತ್ತದೆಯೇ?' ಎಂದು ಆಲೋಚಿಸುತ್ತಾನೆ. ನೀವು ರಾಜ್ಯಪಾಲರ ಕೈಯಲ್ಲಿ 'ನನ್ನ ಸರ್ಕಾರ' ಎಂದು ಭಾಷಣ ಮಾಡಿಸುತ್ತೀರಿ, ಆದರೆ ಸಾಮಾನ್ಯ ಜನರಿಗೆ ಇದು 'ನನ್ನ ಸರ್ಕಾರ' ಎಂಬ ನಂಬಿಕೆ ಮೂಡಬೇಕು" ಎಂದು ಆಶಯ ವ್ಯಕ್ತಪಡಿಸಿದರು.

Read More
Next Story