
ಡಿಕೆಶಿ vs ಮುನಿರತ್ನ| ಕಲಾಪದಲ್ಲಿ ವೈಯಕ್ತಿಕ ನಿಂದನೆ, 'ರೇಪಿಸ್ಟ್, ಏಡ್ಸ್ ಚುಚ್ಚುಮದ್ದು' ಸದ್ದು
"ಅಶೋಕಣ್ಣನಿಗೆ ಏಡ್ಸ್ ಇಂಜೆಕ್ಷನ್ ಕೊಡಲು ನಾನೇನು ಹೋಗಿರಲಿಲ್ಲ. ನಿನ್ನ ಮೇಲೆ ಎಫ್ಐಆರ್ ಕೂಡ ಇದೆ. ಕುಳಿತುಕೊ ಎಂದು ಮುನಿರತ್ನ ವಿರುದ್ಧ ಡಿಕೆಶಿ ಕಿಡಿಕಾರಿದರು.
ವಿಧಾನಸಭೆ ಕಲಾಪದ ಕೊನೆಯ ದಿನವಾದ ಇಂದು (ಮಾ.26) ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ನಡುವಿನ ಜಟಾಪಟಿಯು ವೈಯಕ್ತಿಕ ನಿಂದನೆ, ಆರೋಪ- ಪ್ರತ್ಯಾರೋಪದಿಂದ ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ಅಲ್ಲದೇ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿಗೂ ಕಾರಣವಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೇಲಿನ ಚರ್ಚೆಯ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡುತ್ತಿದ್ದಾಗ ಮುನಿರತ್ನ ಮಧ್ಯಪ್ರವೇಶಿಸಿದರು. ಆಗ ಡಿ.ಕೆ. ಶಿವಕುಮಾರ್ ಅವರು ಮುನಿರತ್ನ ಅವರನ್ನು ಕುಳಿತುಕೊಳ್ಳಲು ಸೂಚಿಸಿದರೂ ಬೆಂಗಳೂರು ನಗರದ ವಿಷಯ ಪ್ರಸ್ತಾಪಿಸಲು ಮುಂದಾದರು.
ಮುನಿರತ್ನ ಅವರು ಮಾತು ಮುಂದುವರಿಸಿದಾಗ ಡಿ.ಕೆ.ಶಿವಕುಮಾರ್ ಅವರು, "ಅಶೋಕಣ್ಣನಿಗೆ ಏಡ್ಸ್ ಇಂಜೆಕ್ಷನ್ ಕೊಡಲು ನಾನೇನು ಹೋಗಿರಲಿಲ್ಲ. ನಿನ್ನ ಮೇಲೆ ಎಫ್ಐಆರ್ ಕೂಡ ಇದೆ. ಕುಳಿತುಕೊ ಎಂದು ಕಿಚಾಯಿಸಿದರು. ಡಿಕೆಶಿ ಮಾತಿನಿಂದ ಕೆರಳಿದ ಮುನಿರತ್ನ ಅವರು, ಡಿಕೆಶಿ ಆರೋಪದ ಮಾತನಾಡಲು ತಮಗೆ ಅವಕಾಶ ನೀಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದರು.
ಇಬ್ಬರ ನಡುವೆ ವಾಕ್ಸಮರ ತಾರಕಕ್ಕೇರಿದಾಗ ಡಿ.ಕೆ. ಶಿವಕುಮಾರ್ ಅವರು ಮುನಿರತ್ನ ಅವರನ್ನು "ಹೇ ರೇಪಿಸ್ಟ್, ಕುಳಿತುಕೋ” ಎಂದು ಕಿಡಿಕಾರಿದರು. ಸದನದಲ್ಲಿ ವೈಯಕ್ತಿಕ ನಿಂದನೆಗೆ ಇಳಿದಾಗ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರು, ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದು ಮನವಿ ಮಾಡಿದರು. ಇತ್ತ ಡಿಕೆಶಿ ಪರ ಎದ್ದುನಿಂತ ಕುಣಿಗಲ್ ಶಾಸಕ ರಂಗನಾಥ್ ಅವರು ನೀವು ಕೂಡ ವೈಯಕ್ತಿಕ ನಿಂದನೆ ಮಾಡಬಾರದು ಎಂದು ತಿರುಗೇಟು ನೀಡಿದರು.
ವೈಯಕ್ತಿಕ ನಿಂದನೆ ನಿಲ್ಲಿಸಲು ಸದಸ್ಯರ ಮನವಿ
ಸದನದಲ್ಲಿ ಶಾಸಕ ಮುನಿರತ್ನ ಅವರು ಕೇಳಿದ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಬೇಕು. ಅದನ್ನು ಬಿಟ್ಟು ರೇಪಿಸ್ಟ್, ಏಡ್ಸ್ ಇಂಜೆಕ್ಷನ್ನಂತಹ ವೈಯಕ್ತಿಕ ಹೇಳಿಕೆಗಳು ಸರಿಯಲ್ಲ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಸದನದಲ್ಲಿ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆದಾಗ ಏಕೆ ಹಾಜರಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದುವರಿದು, ಮುನಿರತ್ನ ಅವರು ತಮ್ಮ ಬಳಿ ಬಂದು ಅನೇಕ ನೋವುಗಳನ್ನು ಹೇಳಿಕೊಂಡಿದ್ದರು. ಅವರ ವೈಯಕ್ತಿಕ ಕೇಸ್, ಅವರ ಕಾರಿನಲ್ಲಿ ಏನು ನಡೆಯಿತು, ವಿಧಾನಸೌಧದಲ್ಲಿ ಏನು ನಡೆಯಿತು ಎಂಬ ಸ್ಟೋರಿ ನನ್ನ ಬಳಿ ಇದೆ. ಅಗತ್ಯವಿದ್ದರೆ ಅದನ್ನೆಲ್ಲಾ ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ ಅವರು, ಡಿ.ಕೆ. ಶಿವಕುಮಾರ್ ಅವರು ತಮಗೆ ಬೇಕಾದ್ದನ್ನೆಲ್ಲ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
"ಅಶೋಕ್ ಅವರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚೋಕೆ ಹೋಗಿದ್ದು ನಾನಲ್ಲ. ಯಡಿಯೂರಪ್ಪನವರ ಮನೆಯಲ್ಲಿ ಏನು ನಡೆಯಿತು ಎಂದು ನಾನು ಹೇಳಬೇಕಾಗಿಲ್ಲ. ನನ್ನ ಬಳಿ ಅದರ ಎಫ್ಐಆರ್ ಇದೆ, ತೋರಿಸುತ್ತೇನೆ" ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಶಾಸಕ ಅಶೋಕ್ ಮಧ್ಯಪ್ರವೇಶಿಸಿ, ಬೆಂಗಳೂರಿನ ಬಗ್ಗೆ ಚರ್ಚೆ ನಡೆಸಿ. ಇಲ್ಲಿ ಯಾರೂ ಕೂಡ ವೈಯಕ್ತಿಕ ವಿಷಯಗಳ ಚರ್ಚೆ ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಮುನಿರತ್ನ ಅಮಾನತಿಗೆ ಆಗ್ರಹ
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಮುನಿರತ್ನ ಅಮಾನತಿಗೆ ಆಗ್ರಹಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಆಗ ವಿರೋಧ ಪಕ್ಷಗಳ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸ್ಪೀಕರ್ ಅವರು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಮುನಿರತ್ನ ಮತ್ತೆ ಬೆಂಗಳೂರಿನ ವಿಚಾರವಾಗಿ ಮಾತನಾಡಲು ಮುಂದಾದಾಗ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು, ಚರ್ಚೆ ಮುಗಿದಿದೆ. ಚರ್ಚೆ ನಡೆದಾಗ ನೀವು ಯಾಕೆ ಬಂದಿರಲಿಲ್ಲ ಎಂದು ಪ್ರಶ್ನಿಸಿದರು.
ಮುನಿರತ್ನ ಅವರು ಮತ್ತೆ ಮಾತನಾಡಲು ಮುಂದಾದಾಗ ಕಾಂಗ್ರೆಸ್ ಶಾಸಕರು ಗದ್ದಲ ಎಬ್ಬಿಸಿದರು. ಸ್ಪೀಕರ್ ಪೀಠಕ್ಕೆ ಮುನಿರತ್ನ ಅಪಮಾನ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಡಳಿತ ಪಕ್ಷದ ಶಾಸಕರು ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಎದ್ದುನಿಂತು, "ಬಿಜೆಪಿಯವರು ಶರಣಾಗಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದವರನ್ನು ಪಕ್ಷದಲ್ಲಿ ಸೇರಿಸಿಕೊಂಡಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಸಂಯಮ ಕಾಪಾಡಲು ಸದಸ್ಯರಿಗೆ ಸ್ಪೀಕರ್ ಸಲಹೆ
ಸದನದ ಕೊನೆಯ ದಿನದಂದು ಎಲ್ಲ ಸದಸ್ಯರು ಸಂಯಮ ಕಾಪಾಡಿಕೊಳ್ಳಬೇಕು ಎಂದು ಸ್ಪೀಕರ್ ಅವರು ಸಲಹೆ ನೀಡಿದರು. ಇಷ್ಟು ದಿನ ಅಧಿವೇಶನ ಚೆನ್ನಾಗಿ ನಡೆದಿದೆ. ಆದರೆ, ಇಂದು ಉಪಮುಖ್ಯಮಂತ್ರಿಗಳು ಉತ್ತರಿಸುತ್ತಿರುವಾಗ ಒಬ್ಬ ಸದಸ್ಯರು ಪದೇ ಪದೇ ಎದ್ದು ಮಾತನಾಡುತ್ತಿದ್ದಾರೆ. ನಾವು ಸುಮ್ಮನಿರಿ ಎಂದು ಹೇಳಿದರೂ ಕೇಳುತ್ತಿಲ್ಲ. ಬೆಂಗಳೂರು ಬಗ್ಗೆ ಚರ್ಚೆ ಆದಾಗ ಆ ಸದಸ್ಯರು ಯಾಕೆ ಭಾಗವಹಿಸಲಿಲ್ಲ?, ಅಂದು ಮಾತನಾಡದೇ, ಇಂದು ಮಾತನಾಡಲು ಮುಂದಾಗಿದ್ದು ಸರಿಯಲ್ಲ. ಇನ್ನುಮುಂದೆ ಅನಗತ್ಯವಾಗಿ ಕಲಾಪಕ್ಕೆ ಕಿರಿಕಿರಿ ಮಾಡುವ ಶಾಸಕರ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದರು.

