
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕುಮಾರಸ್ವಾಮಿ ಸಹ 2004ರಲ್ಲಿ ಇದೇ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿದವರು, ಈ ವರೆಗೂ ಅಧಿಕಾರವನ್ನೆ ಕಳೆದುಕೊಳ್ಳಲಿಲ್ಲ.
ಎಚ್‌ಡಿಕೆ ಮೂರನೇ ಬಾರಿ ಸಿಎಂ! ರಾಮನಗರದಿಂದ ಮತ್ತೆ ಅದೃಷ್ಟ ರೇಖೆ?
ಕೇಂದ್ರದಿಂದ ರಾಜ್ಯದ ಕಡೆ ಮುಖಮಾಡಲಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬೆಲ್ಲ ಕುತೂಹಲಗಳಿಗೆ ರಾಮನಗರ ಕ್ಷೇತ್ರ ಉತ್ತರವೆ?
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆ ಹಾಗೂ ಎನ್‌ಡಿಎ ಅಡಿ ಬಿಜೆಪಿ ಮೈತ್ರಿಯಿಂದ ಮತ್ತೆ ಸಿಎಂ ಅಭ್ಯರ್ಥಿಯಾಗಲು ಸಿದ್ಧರಾಗಿದ್ದಾರೆಯೆ? ಈ ಎಲ್ಲಾ ಚರ್ಚೆಗಳ ನಡುವೆಯೇ ಕುಮಾರಸ್ವಾಮಿ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಕೂತೂಹಲ ಗರಿಗೆದರಿದೆ.
ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇರುವಾಗಲೇ ಅಂದರೆ, ಮುಂದಿನ ವರ್ಷದಿಂದಲೇ ಚುನಾವಣಾ ಮನಸ್ಥಿತಿ ಬರುವುದರಿಂದ, ಈಗಾಗಲೇ ತೆರೆಮರೆಯ ತಯಾರಿಗಳೊಂದಿಗೆ ಕ್ಷೇತ್ರ ಗಟ್ಟಿಗೊಳಿಸಿಕೊಳ್ಳುವ ಕೆಲಸಗಳನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಅಧಿಕಾರ ಹಂಚಿಕೆ ಸೂತ್ರದ ಗೊಂದಲಗಳಿಂದ ಸರಕಾರ ಅಸ್ಥಿರಗೊಂಡರೆ, ಏಕಾಏಕಿ ನಡೆಯಲಿರುವ ಚುನಾವಣೆಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಈಗಲೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಧಾವಂತದಲ್ಲಿದ್ದಾರೆ.
ಆದರೆ, ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ ಅಂತಹ ಸಾಧ್ಯತೆ ಅಷ್ಟಕ್ಕಷ್ಟೇ! ಹಾಗಾಗಿ 2028 ರ ವಿಧಾನಸಭೆ ಚುನಾವಣೆ ಮೂಲಕ ಬಿಜೆಪಿ ಜತೆಗಿನ ಎನ್‌ಡಿಎ ಮೈತ್ರಿಕೂಟದಿಂದ ಸ್ಪರ್ಧಿಸಿ ಮುಖ್ಯಮಂತ್ರಿಯಾಗುವ ಆಸೆಯನ್ನು ಜೀವಂತವಿರಿಸಿಕೊಂಡಿರುವ ಕುಮಾರಸ್ವಾಮಿ ರಾಮನಗರದತ್ತ ತಮ್ಮ ದೃಷ್ಟಿಯನ್ನು ಮತ್ತೆ ನೆಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಮ್ಮಇಡೀ ಕುಟುಂಬಕ್ಕೆ ರಾಜಕೀಯ ಮರುಜನ್ಮ ನೀಡಿರುವ “ರಾಮನಗರ ವಿಧಾನಸಭಾ ಕ್ಷೇತ್ರ”ದಿಂದಲೇ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಎಚ್.ಡಿ.ಕುಮಾರಸ್ವಾಮಿ ಮುಂದಾಗಲಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಎಚ್.ಡಿ.ಕುಮಾರಸ್ವಾಮಿ ಅವರೆ, ನಾನು ನನ್ನ ಕರ್ಮ ಭೂಮಿ ಬಿಟ್ಟು ಎಲ್ಲಿಯು ಹೋಗುವುದಿಲ್ಲ ಎಂದಿದ್ದಾರೆ. ಜತೆಗೆ, ರಾಮನಗರದಲ್ಲಿ ಕುಮಾರಸ್ವಾಮಿ ಅವರೆ ಮುಂದಿನ ಅಭ್ಯರ್ಥಿ ಎನ್ನುವಂತೆ ಕಾರ್ಯಕರ್ತರುಗಳು ಉತ್ಸಾಹದಲ್ಲಿ ಕ್ಷೇತ್ರದ ತುಂಬೆಲ್ಲಾ ಅಬ್ಬರಿಸುತ್ತಿದ್ದಾರೆ.
ರಾಮನಗರವೇ ಏಕೆ?
ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ರಾಜಕೀಯ ಮರುಜನ್ಮ ನೀಡಿದ ಅದೃಷ್ಟ ಭೂಮಿ ರಾಮನಗರ. ಜತೆಗೆ ದೈವ ಮೂಲೆಯಲ್ಲಿನ ಕ್ಷೇತ್ರದೊಂದಿಗೆ ಇಲ್ಲಿಂದ ಗೆಲುವು ಸಾಧಿಸಿದರೆ, ಒಕ್ಕಲಿಗರು ಸಿಎಂ ಪಟ್ಟ ಏರಬಹುದೆಂಬ ನಂಬಿಕೆಯು ಈ ನೆಲಕ್ಕಿದೆ. ಹೀಗಾಗಿ, ಈ ಕ್ಷೇತ್ರದಿಂದ ಮತ್ತೊಮ್ಮೆ ಸಿಎಂ ಆಗಬಹುದೆಂಬ ಲೆಕ್ಕಚಾರ ಕುಮಾರಸ್ವಾಮಿ ಅವರಿಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಎಚ್.ಡಿ. ಕುಮಾರಸ್ವಾಮಿ ಅವರು ಎಲ್ಲಿಯು ಹೋಗುವುದಿಲ್ಲ. ಅವರಿಗೆ ರಾಜಕೀಯ ಜನ್ಮ ನೀಡಿರುವ ರಾಮನಗರದಿಂದಲೇ ಸ್ಪರ್ಧಿಸಲಿದ್ದಾರೆ.
-ಬೆಂಗಳೂರು ದಕ್ಷಿಣ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್ .
ರಾಮನಗರ ನನ್ನ ಕರ್ಮಭೂಮಿ: ಎಚ್‌ಡಿಕೆ
ಮತ್ತೊಂದೆಡೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಹ ಬಹಿರಂಗ ಹೇಳಿಕೆ ನೀಡಿದ್ದು, ಮುಂದಿನ ಚುನಾವಣೆಗೆ ನನ್ನ ಕರ್ಮಭೂಮಿಯಿಂದಲೇ ನಿಲ್ಲುತ್ತೆನೆ. ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ಪುಟ್ಟರಾಜು ಅವರನ್ನು ನಿಲ್ಲಿಸಬೇಕಿತ್ತು. ಆದರೆ, ಕಾರ್ಯಕರ್ತರ ಒತ್ತಡಗಳಿಂದ ನಾನು ಸ್ಪರ್ಧಿಸಬೇಕಾಯಿತು. ಎಂದಿದ್ದರೂ ರಾಮನಗರ ಹಾಗೂ ಕರ್ನಾಟಕವೇ ನನ್ನ ಕಾರ್ಯಕ್ಷೇತ್ರ ಎಂದಿದ್ದಾರೆ.
1989ರಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ. ದೇವೇಗೌಡ ಸೋಲುಂಡಿದ್ದರು. ಬಳಿಕ ಯಾವುದೇ ಕಾರಣಕ್ಕೂ ಈ ಕ್ಷೇತ್ರದಿಂದ ಕಣಕ್ಕಿಳಿಯುವುದಿಲ್ಲ ಎಂದು ಶಪಥ ಮಾಡಿದ್ದರು. ಇದೇ ವೇಳೆಗೆ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಭೂಮಿ ಖರೀದಿಸಿದ್ದರು. ಇದೇ ನೆಪದೊಂದಿಗೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು, 1994ರಲ್ಲಿ ರಾಮನಗರ ಕ್ಷೇತ್ರದಿಂದ ಎಚ್.ಡಿ.ದೇವೇಗೌಡರು ಗೆಲುವು ಸಾಧಿಸುವುದರೊಂದಿಗೆ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಪ್ರಧಾನ ಮಂತ್ರಿಯಾಗಿ ರಾಜ್ಯಸಭಾ ಸದಸ್ಯರೂ ಆದರು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕುಮಾರಸ್ವಾಮಿ ಸಹ 2004ರಲ್ಲಿ ಇದೇ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿದವರು, ಈ ವರೆಗೂ ಅಧಿಕಾರವನ್ನೆ ಕಳೆದುಕೊಳ್ಳಲಿಲ್ಲ. 1996ರಲ್ಲಿ ಮೊದಲ ಬಾರಿಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ಎಚ್.ಡಿ.ಕುಮಾರಸ್ವಾಮಿ 1998ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಬಳಿಕ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಕನಕಪುರ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸೋಲುಂಡರು. 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೊದಲ ಸಂಸದರಾಗಿದ್ದ ಎಚ್‌ಡಿಕೆ, 2004ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು.
ಅಂದಿನಿಂದ ಈ ವರೆಗೂ ಅಧಿಕಾರ ಕಳೆದುಕೊಳ್ಳದ ಕಾರಣಕ್ಕೆ ರಾಮನಗರವೇ ಅವರ ಕರ್ಮಭೂಮಿಯಾಗಿದೆ. 2008, 2013ರ ವಿಧಾನಸಭಾ ಚುನಾವಣೆಯಲ್ಲಿ ಇದೇ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ ಎಚ್.ಡಿ.ಕುಮಾರಸ್ವಾಮಿ, 2018ರ ಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರಗಳಲ್ಲಿಯು ಗೆಲುವು ಸಾಧಿಸಿ, ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಬಳಿಕ ರಾಮನಗರ ಕ್ಷೇತ್ರವನ್ನು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಗಾಗಿ ತ್ಯಾಗ ಮಾಡಿದ್ದರು. 2023ರ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಗೆಲುವು ಸಾಧಿಸಿ, 2024ರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವರಾಗಿ ಆಯ್ಕೆಯಾದರು.
2004ರಲ್ಲಿ ರಾಮನಗರದಿಂದ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ 2014ರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾತ್ರವೇ ಸೋಲು ಕಂಡಿದ್ದರು. ಹೀಗಿದ್ದರೂ, ಅವರು ಅಧಿಕಾರ ಕಳೆದುಕೊಂಡಿರಲಿಲ್ಲ. ಹೀಗಾಗಿ, ರಾಮನಗರ ಕ್ಷೇತ್ರದ ಬಗ್ಗೆ ಎಚ್.ಡಿ.ಕೆಗೆ ವಿಶೇಷ ಆಸಕ್ತಿಇದೆ. ಸೋಲನ್ನೇ ನೀಡದಿರುವ ಈ ಕ್ಷೇತ್ರವೇ ಅವರ ಕರ್ಮ ಭೂಮಿ ಎಂಬುದು ಅವರ ಆಪ್ತರ ಮಾತು.
ಪತ್ನಿಗೂ ಅಧಿಕಾರ
ಮಧುಗಿರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾಕುಮಾರಸ್ವಾಮಿ, 2018ರಲ್ಲಿ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿ, ಮೊದಲ ಭಾರಿಗೆ ಪೂರ್ಣಾವಧಿ ಶಾಸಕರಾಗಿ ಅಧಿಕಾರ ಅನುಭವಿಸಿದರು. ಒಂದೇ ಕುಟುಂಬದ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರಿಗೆ ಅಧಿಕಾರದೊಂದಿಗೆ ರಾಜಕೀಯವಾಗಿ ಹೊಸ ಹುರುಪು ನೀಡಿದ್ದ “ರಾಮನಗರ ಕ್ಷೇತ್ರ”ದ ಬಗ್ಗೆ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ʼಎಲ್ಲಿಲ್ಲದ ವ್ಯಾಮೋಹʼ. ಕುಟುಂಬದ ಮೂವರಿಗೂ ಶಕ್ತಿ ನೀಡಿದ್ದ ರಾಮನಗರ ಕ್ಷೇತ್ರವು, ಅದೇ ಕುಟುಂಬದ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾತ್ರ ಅಧಿಕಾರ ನೀಡಲಿಲ್ಲ ಎಂಬುದು ವಿಶೇಷ.
ಯಾರ್ಯಾರು ಸಿಎಂ ಆಗಿದ್ದರು?
ರಾಮನಗರ ಜಿಲ್ಲೆಯಿಂದ ಒಟ್ಟು 4 ಮಂದಿ ಸಿಎಂ ಆಗಿದ್ದಾರೆ. ಅದರಲ್ಲೂ ರಾಮನಗರ ವಿಧಾನಸಭಾ ಕ್ಷೇತ್ರದಿಂದಲೇ ಮೂವರು ಒಕ್ಕಲಿಗ ನಾಯಕರು ಮುಖ್ಯಮಂತ್ರಿಯಾಗಿದ್ದು, ಎಚ್.ಡಿ.ಕುಮಾರಸ್ವಾಮಿ ಎರಡು ಭಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದಾರೆ. 1952ರಲ್ಲಿ ಕೆಂಗಲ್ ಹನುಮಂತಯ್ಯ ಅವರು ಸಿಎಂ ಆಗಿದ್ದರೆ, 1994ರಲ್ಲಿ ಎಚ್.ಡಿ.ದೇವೇಗೌಡರು ಇದೇ ರಾಮನಗರ ಕ್ಷೇತ್ರದಿಂದ ಸಿಎಂ ಮಾತ್ರವಲ್ಲದೇ, ಪ್ರಧಾನ ಮಂತ್ರಿಯೂ ಆದರು. 2006ರಲ್ಲಿಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆಗಿ 20 ತಿಂಗಳ ಕಾಲ ಆಡಳಿತ ನಡೆಸಿದ್ದರು. ಬಳಿಕ 2018ರಲ್ಲಿ ಮತ್ತೊಮ್ಮೆ ಸಿಎಂ ಪಟ್ಟಕ್ಕೇರಿದರು. 1983ರಲ್ಲಿ ಕನಕಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ರಾಮಕೃಷ್ಣ ಹೆಗಡೆ ಸಹ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ರಾಜ್ಯಕ್ಕೆ ಎಚ್‌ಡಿಕೆ ಅನಿವಾರ್ಯವೇ?
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರಕ್ಕಿಂತ ರಾಜ್ಯದ ಮೇಲೆಯೇ ಅತೀ ಹೆಚ್ಚಿನ ಆಸ್ಥೆಯಿದೆ. ವಾರಕ್ಕೊಮ್ಮೆ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುವ ಅವರು, ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶ್ನಿಸುತ್ತಲೇ ಇರುತ್ತಾರೆ. ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವುದಕ್ಕೆ ರಾಜ್ಯ ರಾಜಕಾರಣವೇ ಉತ್ತಮ ಎನ್ನುವ ಲೆಕ್ಕಾಚಾರ ಅವರದು ಎನ್ನಲಾಗಿದೆ.
ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಪಕ್ಷದ ಚುಕ್ಕಾಣಿ ನೀಡಿ ಪೂರ್ಣ ಪ್ರಮಾಣದ ಅಧಿಕಾರ ನೀಡಲು ಸಾಧ್ಯವಾಗುತ್ತಿಲ್ಲ. ದೇವೇಗೌಡರ ಹಿರಿತನಕ್ಕೆ ವಿಶ್ರಾಂತಿ ಅಗತ್ಯ. ಮತ್ತೊಂದೆಡೆ ಎಚ್.ಡಿ.ರೇವಣ್ಣ ಕುಟುಂಬದ ಪರಿಸ್ಥಿತಿಯು ಉತ್ತಮವಾಗಿಲ್ಲ. ಹೀಗಾಗಿ ಜೆಡಿಎಸ್ ಪಕ್ಷ ಸಂಘಟನೆಗೆ ಕುಮಾರಸ್ವಾಮಿ ಅನಿವಾರ್ಯವಾಗಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿಯಿಂದಾಗಿ ಜೆಡಿಎಸ್ ಅಧಿಕಾರ ಸ್ಥಾಪಿಸುವುದು ಸುಲಭ. ಜತಗೆ ಮೈತ್ರಿ ಪಕ್ಷಗಳಿಂದ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಿಸುವ ಮೂಲಕ ತನಗೆ ಸಿಎಂ ಸ್ಥಾನ ನೀಡಬೇಕೆಂದು ಎಚ್.ಡಿ.ಕೆ ಪಟ್ಟು ಹಿಡಿಯಬಹುದು. ಹೀಗಾಗಿ ರಾಜ್ಯ ರಾಜಕಾರಣದ ಕಡೆ ಕುಮಾರಸ್ವಾಮಿ ವಾಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹಾಗಾದರೆ,ನಿಖಿಲ್‌ಗೆ ಯಾವ ಕ್ಷೇತ್ರ?
ತಮ್ಮ ಕರ್ಮ ಭೂಮಿಯಾದ ರಾಮನಗರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದರೆ, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಮೂರು ಕ್ಷೇತ್ರಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಮೈಸೂರಿನ ಚಾಮರಾಜಕ್ಷೇತ್ರದಲ್ಲಿ ಬಿಜೆಪಿ ಮತಗಳು ಹೆಚ್ಚಾಗಿವೆ. ಹೀಗಾಗಿ ಈ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳಿಯಬಹುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಬಲ ಹೆಚ್ಚಾಗಿದೆ. ಹೀಗಾಗಿ ನಿರಾಯಾಸ ಗೆಲುವಿನ ಕ್ಷೇತ್ರಗಳಲ್ಲಿ ನಿಖಿಲ್ ಸ್ಪರ್ಧಿಸಬಹುದು. ಇದರೊಂದಿಗೆ ಮಂಡ್ಯ ವಿಧಾನಸಭಾ ಇಲ್ಲವೇ, ಮಂಡ್ಯ ಲೋಕಸಭಾ ಕ್ಷೇತ್ರಗಳಿಂದಲೂ ನಿಖಿಲ್ ಕಣಕ್ಕಿಳಿಸಲು ಎಚ್.ಡಿ.ಕುಮಾರಸ್ವಾಮಿ ತೆರೆಮರೆಯ ತಯಾರಿ ಶುರು ಮಾಡಿದ್ದಾರೆ.

