
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಅಡ್ಡಮತದಾನ ಪತ್ತೆಗೆ ಆಣೆ-ಪ್ರಮಾಣದ ಮೊರೆ ಹೋಗುವುದಿಲ್ಲ, ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್ ಸೇರ್ಪಡೆಯಾದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು 'ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ' ಎಂದು ನೀಡಿದ ಹೇಳಿಕೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡಮತದಾನದ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕರಿಂದ ಯಾವುದೇ ರೀತಿಯ ಆಣೆ-ಪ್ರಮಾಣ ಮಾಡಿಸುವ ಸಂಪ್ರದಾಯಕ್ಕೆ ಜೆಡಿಎಸ್ ಹೋಗುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಪುಲಕೇಶಿ ನಗರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣ, ಮುಂದಿನ ಮುಖ್ಯಮಂತ್ರಿ ವಿಚಾರ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತದ ಕುರಿತು ತಮ್ಮ ನಿಲುವನ್ನು ತೆರೆದಿಟ್ಟರು.
ಜೆಡಿಎಸ್ ಆ ಮಾರ್ಗ ತುಳಿಯುವುದಿಲ್ಲ
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚಲು ಬಿಜೆಪಿ ನಾಯಕರು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ನಂಬಿಕೆಯನ್ನು ತಾವು ಪ್ರಶ್ನಿಸುವುದಿಲ್ಲ ಎಂದರು. ಅಡ್ಡಮತದಾನ ಎಂಬುದು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಬೇಸರದ ಸಂಗತಿಯಾಗಿದೆ. ಯಾರು ಈ ರೀತಿಯ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಸತ್ಯ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಬಯಲಾಗಬಹುದು ಎಂಬ ನಂಬಿಕೆಯಿಂದ ಬಿಜೆಪಿ ನಾಯಕರು ಅಲ್ಲಿ ಸಭೆ ಕರೆದಿರಬಹುದು, ಅದರಲ್ಲಿ ತಪ್ಪೇನಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜೆಡಿಎಸ್ ಪಕ್ಷದಲ್ಲಿ ಇಂತಹ ಆಣೆ-ಪ್ರಮಾಣಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ತಮ್ಮ ದೃಢ ನಂಬಿಕೆಯಾಗಿದೆ ಎಂದು ಅವರು ತಿಳಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ 17 ಶಾಸಕರು ಹಾಜರಿದ್ದು, ನಾವೆಲ್ಲರೂ ಅಭಿವೃದ್ಧಿಗಾಗಿ ಮತ ಚಲಾಯಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಶಾಸಕರಿಂದ ಆಣೆ ಮಾಡಿಸುವುದನ್ನು ಬಿಟ್ಟು, ಎಲ್ಲವನ್ನೂ ಕಾಲದ ನಿರ್ಣಯಕ್ಕೆ ಬಿಡುವುದು ಒಳಿತು ಎಂದು ಪಕ್ಷದ ವೇದಿಕೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಮುಖ್ಯಮಂತ್ರಿ ಹುದ್ದೆಗಿಂತ ರಾಜ್ಯದ ಘನತೆ ಮರುಸ್ಥಾಪನೆಯೇ ನನ್ನ ಮೊದಲ ಆದ್ಯತೆ
ಜೆಡಿಎಸ್ ಸೇರ್ಪಡೆಯಾದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು 'ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿ' ಎಂದು ನೀಡಿದ ಹೇಳಿಕೆಗೆ ಮಾರ್ಮಿಕವಾಗಿ ಉತ್ತರಿಸಿದ ಸಚಿವರು, "ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವುದು ಬೇಡ" ಎಂದು ನುಡಿದರು. ಅಖಂಡ ಶ್ರೀನಿವಾಸ ಮೂರ್ತಿ ಅವರು ಪ್ರೀತಿ ಮತ್ತು ವಿಶ್ವಾಸದಿಂದ ಆ ಮಾತುಗಳನ್ನಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಭಗವಂತ ಹಾಗೂ ನಾಡಿನ ಜನತೆ ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ದುರಾಡಳಿತದಿಂದಾಗಿ ರಾಜ್ಯದ ಬಗ್ಗೆ ಇದ್ದ ಒಳ್ಳೆಯ ಅಭಿಪ್ರಾಯ ಸಂಪೂರ್ಣವಾಗಿ ಹಾಳಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರಾಜ್ಯದ ಕಳೆದುಹೋದ ಘನತೆ, ಗೌರವ ಮತ್ತು ಪ್ರತಿಷ್ಠೆಯನ್ನು ಮರುಸ್ಥಾಪಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ. ಕರ್ನಾಟಕದ ಜನತೆಗೆ ಅತ್ಯುತ್ತಮ ಆಡಳಿತ ನೀಡುವಂತಹ ಬಲಿಷ್ಠ ಸರ್ಕಾರವನ್ನು ತರಲು ತಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ತಿಂಗಳಿಗೆ 15 ದಿನ ರಾಜ್ಯ ಪ್ರವಾಸ
ಮಾಜಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ನಾಯಕರು ಜೆಡಿಎಸ್ ಸೇರುವ ವದಂತಿಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಭವಿಷ್ಯದ ರಾಜಕೀಯ ಬೆಳವಣಿಗೆಗಳನ್ನು ಜನತೆಯೇ ನಿರ್ಧರಿಸಲಿದ್ದಾರೆ ಎಂದರು. ತಮಿಳುನಾಡಿನಲ್ಲಿ ನಟ ವಿಜಯ್ ಅವರು ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರಾದರೂ ಊಹಿಸಿದ್ದರೇ? ಅದೇ ರೀತಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿರುವ ಕರ್ನಾಟಕದ ಜನತೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಬದಲಾವಣೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ತಾವು ರಾಜ್ಯ ರಾಜಕಾರಣದಿಂದ ದೂರ ಸರಿದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವನಾಗಿ ತಮ್ಮ ಇಲಾಖೆಗಳ ಜವಾಬ್ದಾರಿಯನ್ನು ನಿಭಾಯಿಸುವ ಜೊತೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆಗೂ ಸಮಾನ ಆದ್ಯತೆ ನೀಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ತಿಂಗಳಿಗೆ ಕನಿಷ್ಠ 15 ದಿನಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಹಾಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು.

