
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮಾತನಾಡಿದರು.
"ರಾಜ್ಯಸಭೆ ವ್ಯಾಮೋಹವಿಲ್ಲ, 93ರಲ್ಲೂ ಪಕ್ಷ ಸಂಘಟನೆ ನಿಲ್ಲಲ್ಲ": ಮಾಜಿ ಪ್ರಧಾನಿ ಹೆಚ್‌ಡಿಡಿ ಖಡಕ್ ಸಂದೇಶ
ಟಿಕೆಟ್ ಸಿಗಲಿಲ್ಲ ಎಂದು ನಾನು ರಾಜಕೀಯವಾಗಿ ಸುಮ್ಮನೆ ಕೂರುವ ಮಗನಲ್ಲ. ನನ್ನ ಶಕ್ತಿ ಮೀರಿ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತೇನೆ" ಎಂದು ಹೇಳುವ ಮೂಲಕ ತಾವಿನ್ನೂ ಸಕ್ರಿಯರಾಗಿರುವುದನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಾಬೀತುಪಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡಗೆ ಎನ್‌ಡಿಎ ಮೈತ್ರಿಕೂಟದಿಂದ ಟಿಕೆಟ್ ಸಿಗದೇ ಇರುವುದು ಸದ್ಯ ದೊಡ್ಡ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ 'ಜೆ.ಪಿ. ಭವನ'ದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ತಮ್ಮ ರಾಜಕೀಯ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.
"ಟಿಕೆಟ್ ಸಿಗಲಿಲ್ಲ ಎಂದು ನಾನು ರಾಜಕೀಯವಾಗಿ ಸುಮ್ಮನೆ ಕೂರುವ ಮಗನಲ್ಲ. ನನ್ನ ಶಕ್ತಿ ಮೀರಿ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತೇನೆ" ಎಂದು ಹೇಳುವ ಮೂಲಕ 93ರ ಹರೆಯದಲ್ಲೂ ತಾವಿನ್ನೂ ಸಕ್ರಿಯರಾಗಿರುವುದನ್ನು ಸಾಬೀತುಪಡಿಸಿದ್ದಾರೆ.
ರಾಜ್ಯಸಭೆಯ ವ್ಯಾಮೋಹವಿಲ್ಲ
"ನಾನು ರಾಜಕೀಯಕ್ಕೆ ಬಂದು ಬರೋಬ್ಬರಿ 7 ದಶಕಗಳು ಕಳೆದಿವೆ. ಈ ದೇಶದ ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಜನಪರ ಸೇವೆ ಸಲ್ಲಿಸಿದ್ದೇನೆ. ನನಗೆ ಮತ್ತೆ ರಾಜ್ಯಸಭಾ ಸದಸ್ಯನಾಗಬೇಕು ಎಂಬ ಯಾವುದೇ ಅಧಿಕಾರದ ವ್ಯಾಮೋಹ ಇರಲಿಲ್ಲ. ಒಂದು ವೇಳೆ ಆ ಆಸೆ ಇದ್ದಿದ್ದರೆ ನಾನೇ ಖುದ್ದಾಗಿ ದೆಹಲಿಗೆ ಹೋಗಿ ಕೇಂದ್ರದ ಮುಖಂಡರನ್ನು ಭೇಟಿ ಮಾಡಿ ಸೀಟು ಕೇಳುತ್ತಿದ್ದೆ. ಆದರೆ ನಾನು ಆ ಕೆಲಸ ಮಾಡಲಿಲ್ಲ" ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಹ, "ನಮಗೆ ಕೇವಲ 18 ಜನ ಶಾಸಕರ ಸಂಖ್ಯಾಬಲ ಇರುವಾಗ ನಾವು ರಾಜ್ಯಸಭೆ ಸೀಟಿಗೆ ಅಪೇಕ್ಷೆ ಪಡುವುದಿಲ್ಲ. ಬಿಜೆಪಿಗೆ ಒಂದು ಸೀಟ್ ಸಿಗುವ ಅವಕಾಶವಿದೆ, ಅದರಲ್ಲಿ ಅವರ ನಿರ್ಧಾರವೇ ಅಂತಿಮ" ಎಂದು ಹೇಳಿ ಮೈತ್ರಿ ಧರ್ಮ ಪಾಲಿಸಿದ್ದನ್ನು ನೆನಪಿಸಿಕೊಂಡರು.
ಪ್ರಧಾನಿ ಜೊತೆ ಉತ್ತಮ ಸಂಬಂಧ
"ಮೋದಿ ಮತ್ತು ನನ್ನ ನಡುವಿನ ಬಾಂಧವ್ಯವನ್ನು ಕೇವಲ ಒಂದು ರಾಜ್ಯಸಭಾ ಸೀಟಿನ ಲೆಕ್ಕಾಚಾರದಲ್ಲಿ ನೋಡಬೇಡಿ" ಎಂದು ಹೇಳಿದ ಹೆಚ್.ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಹಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ಕಳೆದ 10 ವರ್ಷಗಳಿಂದ ಮೋದಿಯವರ ಜೊತೆ ನನ್ನದು ರಾಜಕೀಯದಾಚೆಗಿನ ವೈಯಕ್ತಿಕ ಸಂಬಂಧವಾಗಿದೆ. ಅವರ ಆಡಳಿತ ಮತ್ತು ನಾಯಕತ್ವದ ಬಗ್ಗೆ ನಾನು ಯಾವುದೇ ಹಂಗಿಲ್ಲದೆ, ನಿರ್ಭಯವಾಗಿ ನನ್ನ ಅನಿಸಿಕೆಗಳನ್ನು ಹೇಳಿದ್ದೇನೆ ಮತ್ತು ಅವರ ಸಮರ್ಥನೆ ಮಾಡಿದ್ದೇನೆ. ಇಂದು ನಾನು ರಾಜ್ಯಸಭಾ ಸದಸ್ಯನಾಗಿರಲಿ, ಇಲ್ಲದಿರಲಿ, ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಮೋದಿಯವರ ಜೊತೆಗಿನ ನನ್ನ ಪತ್ರ ವ್ಯವಹಾರ ಹಾಗೂ ಸಮಾಲೋಚನೆಗಳು ಎಂದಿನಂತೆ ಮುಂದುವರೆಯಲಿವೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭರ್ಜರಿ ಸಿದ್ಧತೆ
ರಾಜ್ಯಸಭೆ ಟಿಕೆಟ್ ತಪ್ಪಿದ್ದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ನಡುವೆ ಬಿರುಕು ಮೂಡಿದೆ ಎಂದು ವದಂತಿ ಹಬ್ಬಿಸುತ್ತಿರುವ ಬೆನ್ನಲ್ಲೇ, ಮುಂದಿನ ಚುನಾವಣಾ ರಣತಂತ್ರವನ್ನು ಬಿಚ್ಚಿಟ್ಟಿದ್ದು, "ನಾವು ಎನ್‌ಡಿಎ ಮೈತ್ರಿಕೂಟದಲ್ಲಿದ್ದೇವೆ ಎಂಬುದು ನಿಜ. ಆದರೆ ನಮ್ಮ ಪ್ರಾದೇಶಿಕ ಪಕ್ಷದ ಅಸ್ತಿತ್ವ ಮತ್ತು ಸಂಘಟನೆ ನಮಗೆ ಅತಿ ಮುಖ್ಯ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಪ್ರಮುಖವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸುತ್ತಿದ್ದೇವೆ." ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಜೆಡಿಎಸ್ ವತಿಯಿಂದ ಪ್ರತ್ಯೇಕ ಕಮಿಟಿಯನ್ನು ರಚಿಸಲಾಗಿದ್ದು, ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ತಾವು ಖುದ್ದಾಗಿ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಮುನ್ಸೂಚನೆ ನೀಡಿದರು.
ಸ್ನೇಹಿತರಿಗೆ ಸಮಾಧಾನ ಮಾಡಿದ ಹೆಚ್‌ಡಿಡಿ!
ರಾಜ್ಯಸಭೆ ಟಿಕೆಟ್ ಕೈತಪ್ಪಿದ ತಕ್ಷಣ ಜೆಡಿಎಸ್ ವಲಯದಲ್ಲಿ ಹಾಗೂ ಹೆಚ್.ಡಿ. ದೇವೇಗೌಡರ ಆಪ್ತ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಹಿರಿಯ ಮುಖಂಡರು ಹಾಗೂ ಹಿತೈಷಿಗಳು ಬಿಜೆಪಿಯ ನಿಲುವಿನ ವಿರುದ್ಧ ಅಸಮಾಧಾನ ಹೊರಹಾಕಿದ್ದರು. "ನನ್ನ ಮೇಲಿನ ಅಭಿಮಾನದಿಂದ ಹಲವು ಸ್ನೇಹಿತರು ದೇವೇಗೌಡರಿಗೆ ಈ ಬಾರಿ ಟಿಕೆಟ್ ನೀಡಬೇಕಿತ್ತು ಎಂದು ವಾದಿಸುತ್ತಿದ್ದಾರೆ. ಆದರೆ ನಾನೇ ಅವರಿಗೆ ಸಮಾಧಾನ ಮಾಡಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಮತ್ತು ದೇಶದ ರಾಜಕೀಯ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು" ಎಂದು ಹೇಳುವ ಮೂಲಕ ದೇವೇಗೌಡರು ಸದ್ಯಕ್ಕೆ ಎದ್ದಿರುವ ಎಲ್ಲಾ ಊಹಾಪೋಹಗಳು ಮತ್ತು ವಿವಾದಗಳಿಗೆ ತೆರೆ ಎಳೆದಿದ್ದಾರೆ.

