
ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾತನಾಡಿದರು.
ರಾಜ್ಯಸಭೆಯಲ್ಲಿ ದೇವೇಗೌಡ ಭಾವುಕ: ರಾಜ್ಯ ನೀರಾವರಿ ಯೋಜನೆಗಳ ಅನುಮೋದನೆಗೆ ಕಣ್ಣೀರ ಮನವಿ
ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಮ್ಮ ಹೋರಾಟ ನೆನಪಿಸಿಕೊಂಡರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ರಾಜ್ಯ ನೀರಾವರಿ ಯೋಜನೆಗಳ ಪರವಾಗಿ ಸದಾ ಹೋರಾಟದ ಮನೋಭಾವ ಪ್ರದರ್ಶಿಸುತ್ತಿದ್ದಾರೆ. ಅದರೆ, ಇಳಿವಯಸ್ಸಿನಲ್ಲಿ ಇನ್ನೂ ಜಾರಿಯಾಗದ ನೀರಾವರಿ ಯೋಜನೆಗಳಿಗಾಗಿ ಕಣ್ಣೀರಮನವಿ ಮಾಡಿ ರಾಜ್ಯಸಭೆ ಸದಸ್ಯರೆಲ್ಲಾ ಭಾವುಕರಾಗುವಂತಾದ ಘಟನೆ ಬುಧವಾರ ನಡೆಯಿತು.
ಕರ್ನಾಟಕ ನಿರಂತರವಾಗಿ ನೆರೆ ರಾಜ್ಯಗಳ ಜತೆ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರ ಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾದಿಂದ ತೊಂದರೆ ಎದುರಿಸುತ್ತಿದೆ. ರಾಜ್ಯಕ್ಕೆ ನೀರಿನದೇ ಬಹುದೊಡ್ಡ ಬಿಕ್ಕಟ್ಟಾಗಿದ್ದು ಶೀಘ್ರವೇ ಎಲ್ಲಾ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಗದ್ಗದಿತರಾಗಿ ಮನವಿ ಮಾಡಿದರು.
ಬುಧವಾರ(ಫೆ.4) ರಾಜ್ಯಸಭೆಯಲ್ಲಿ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನಾನು ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ರಾಜ್ಯದಲ್ಲಿ ನೀರಿನ ಸಮಸ್ಯೆಯೇ ಹೆಚ್ಚಾಗಿದೆ. ನಾನು ಜೀವನದ ಕೊನೆಕಾಲದಲ್ಲಿ ಇದ್ದೇನೆ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಂದು ಕೈಜೋಡಿಸಿ ಮನವಿ ಮಾಡಿಕೊಂಡರು.
ರಾಜ್ಯದ ಹಿತ ಕಾಯಿರಿ
"ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತಕಾಯಿರಿ. ನಾವೆಲ್ಲರೂ ಮನುಷ್ಯರು, ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ. ಈ ಸದನದ ಎಲ್ಲಾ ಸದಸ್ಯರು ಕರ್ನಾಟಕದ ರಕ್ಷಣೆ ಮಾಡಬೇಕು ಎಂಬುದಾಗಿ ನಾನು ಕೈ ಮುಗಿದು ಬೇಡುತ್ತೇನೆ" ಎಂದರು.
ಮೈತ್ರಿಕೂಟ ಬದಲಾವಣೆ ಇಲ್ಲ
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಬಿಕ್ಕಟ್ಟಿಗೆ ಪರಿಹಾರ ನೀಡಬೇಕು. ನಾನು ನಿಮ್ಮ ಜತೆಯಲ್ಲಿಯೇ ಇರುತ್ತೇನೆ. ನನ್ನ ಮಗ ನಿಮ್ಮ ಸಂಪುಟದಲ್ಲಿದ್ದಾನೆ. ನಾವು ಮುಂದೆಯೂ ಎನ್‌ಡಿಎ ಜತೆಗೇ ಇರುತ್ತೇವೆ. ಮೈತ್ರಿಕೂಟ ಬದಲಾವಣೆ ಮಾಡುವ ಯಾವ ಪ್ರಶ್ನೆಯೂ ಇಲ್ಲ. ರಾಜ್ಯದ ಜನರಿಗೆ ನ್ಯಾಯ ಒದಗಿಸಿ ಎಂಬುದಷ್ಟೇ ನನ್ನ ಏಕೈಕ ಮನವಿ ಎಂದು ಕೋರಿದರು.
ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಶ್ಲಾಘನೆ
ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕ ಜತೆ ಯಶಸ್ವಿಯಾಗಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಭಾರತದ ರಾಜತಾಂತ್ರಿಕ ಜಾಣ್ಮೆಯನ್ನು, ಇದಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಈ ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
2047ಕ್ಕೆ ವಿಕಸಿತ ಭಾರತ
ಪ್ರಧಾನಿ ಮೋದಿಯವರನ್ನು ವಿನಾಕಾರಣ ಟೀಕೆ ಮಾಡುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಿದ್ದು, ಜನರ ಆದಾಯ ಹೆಚ್ಚಳವಾಗುತ್ತಿದೆ. ರೈತಪರವಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ. 2047ಕ್ಕೆ ಭಾರತವು ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದು ತಿಳಿಸಿದರು.

