ಖರ್ಗೆಯವರ ಪ್ರೀತಿ-ಮದುವೆ ವ್ಯಂಗ್ಯಕ್ಕೆ ದೇವೇಗೌಡರ ತಿರುಗೇಟು; ಏನು ಹೇಳಿದರು ಅವರು?
x

ಖರ್ಗೆಯವರ 'ಪ್ರೀತಿ-ಮದುವೆ' ವ್ಯಂಗ್ಯಕ್ಕೆ ದೇವೇಗೌಡರ ತಿರುಗೇಟು; ಏನು ಹೇಳಿದರು ಅವರು?

ಮದುವೆಯ ನಂತರ 2019ರಲ್ಲಿ ಅವರು ಮಾಡಿದ್ದೇನು? ನಮ್ಮನ್ನು ಕೈಬಿಟ್ಟರು. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು ಮತ್ತು ಅವರನ್ನು ಯಾರು ಅತ್ತ ಕಳುಹಿಸಿದರು? ಎಂದು ಪ್ರಶ್ನಿಸಿದ್ದಾರೆ.


Click the Play button to hear this message in audio format

ರಾಜ್ಯಸಭೆಯ ನಿವೃತ್ತ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಹಾಸ್ಯಭರಿತ ಟೀಕೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ದೇವೇಗೌಡರು ಕಾಂಗ್ರೆಸ್ ಪಕ್ಷವನ್ನು "ಪ್ರೀತಿಸಿದ್ದರು" ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ "ಮದುವೆಯಾದರು" ಎಂದು ಖರ್ಗೆ ಅವರು ಸದನದಲ್ಲಿ ತಮಾಷೆ ಮಾಡಿದ್ದರು.

ಖರ್ಗೆಯವರ ಈ ಮಾತುಗಳು ಆ ಸಂದರ್ಭದಲ್ಲಿ ಸದನದಲ್ಲಿ ನಗು ತರಿಸಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ದೇವೇಗೌಡರು, ವೈಯಕ್ತಿಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರ ವ್ಯಂಗ್ಯಕ್ಕೆ ಸೂಕ್ತ ಜವಾಬು ನೀಡಿದ್ದಾರೆ. ಆದರೆ, ಈ ಉತ್ತರದಲ್ಲಿ ಅವರು ಹಿಂದಿನ ಘಟನೆಗಳನ್ನು ಕೆದಕಿ, ಸಿಎಂ ಸಿದ್ದರಾಮಯ್ಯ ಅವರನ್ನೂ ವಿಷಯದೊಳಗೆ ಎಳೆದು ತಂದಿದ್ದಾರೆ. ಕರ್ನಾಟಕದ ಹತ್ತಿರ ಹತ್ತಿರ ಒಂದು ದಶಕದ ರಾಜಕಾರಣದಲ್ಲಿ ಯಾರ್ಯಾರು ಏನೇನು ಮಾಡಿದರು ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಖರ್ಗೆಯವರ ಟೀಕೆಗೆ ಎದಿರೇಟು ನೀಡಿರುವ ದೇವೇಗೌಡರು, 2018ರಲ್ಲಿ ಕರ್ನಾಟಕದಲ್ಲಿ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಒಂದು "ಬಲವಂತದ ಮದುವೆ" ಎಂದು ಬಣ್ಣಿಸಿದ್ದಾರೆ. ಮೈತ್ರಿ ಪಾಲುದಾರರ ನಿರಂತರ ದೌರ್ಜನ್ಯಗಳು ಹಾಗೂ ಕಿರುಕುಳದಿಂದಾಗಿಯೇ ಆ ವಿವಾಹ ಮುರಿದುಬಿತ್ತು ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2019ರಲ್ಲಿ ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಕೈಪಾಳಯದ ಈ ನಡೆಯಿಂದಾಗಿ ಜೆಡಿಎಸ್ ಪಕ್ಷವು ಅನಿವಾರ್ಯವಾಗಿ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಸ್ಥಿರವಾದ ಮೈತ್ರಿಯನ್ನು ಹುಡುಕಬೇಕಾಯಿತು ಎಂದು ಅವರು ಬಿಜೆಪಿ ಜೊತೆಗಿನ ತಮ್ಮ ಪ್ರಸ್ತುತ ರಾಜಕೀಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?

ನನ್ನ ಆತ್ಮೀಯ ಮತ್ತು ದೀರ್ಘಕಾಲದ ಸ್ನೇಹಿತರಾದ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಂಸತ್ತಿನಲ್ಲಿ ತಮಾಷೆಯಾಗಿ ಮಾತನಾಡುತ್ತಾ, ನಾನು ಅವರ (ಕಾಂಗ್ರೆಸ್) ಜೊತೆ "ಪ್ರೀತಿ"ಯಲ್ಲಿದ್ದೆ ಆದರೆ ಅಂತಿಮವಾಗಿ ಮೋದಿ ಜಿ (ಬಿಜೆಪಿ) ಅವರನ್ನು "ಮದುವೆ"ಯಾದೆ ಎಂದು ಹೇಳಿದ್ದಾರೆ. ನಾನು ಹಾಗೆ ಏಕೆ ಮಾಡಿದೆ ಎನ್ನುವ ಕಾರಣ ತಮಗೆ ತಿಳಿದಿಲ್ಲ. ನಾಳಿನ ಯುಗಾದಿ ಹಬ್ಬದ ಆಚರಣೆಗಾಗಿ ನಾನು ಬೆಂಗಳೂರಿಗೆ ಮರಳಬೇಕಿದ್ದ ಕಾರಣ, ಶ್ರೀ ಖರ್ಗೆಯವರು ಮಾತನಾಡುವಾಗ ನಾನು ಸದನದಲ್ಲಿ ಉಪಸ್ಥಿತನಿರಲಿಲ್ಲ.

ನನ್ನ ಸ್ನೇಹಿತನಿಗೆ ಅದೇ ಮದುವೆಯ ಭಾಷೆಯಲ್ಲಿ ಉತ್ತರಿಸಬೇಕೆಂದರೆ, ನಾನು ಕಾಂಗ್ರೆಸ್ ಜೊತೆ "ಬಲವಂತದ ಮದುವೆ"ಯಾಗಿದ್ದೆ, ಆದರೆ ಅದು ನಿಂದನಾತ್ಮಕ (abusive) ಸಂಬಂಧವಾಗಿದ್ದರಿಂದ ನಾನು ಅವರಿಗೆ "ವಿಚ್ಛೇದನ" ನೀಡಬೇಕಾಯಿತು ಎಂದು ಹೇಳಲು ಬಯಸುತ್ತೇನೆ.

2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಶ್ರೀ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಆಫರ್ ಮಾಡಿದ್ದನ್ನು ಖರ್ಗೆಯವರು ಸ್ಮರಿಸಿಕೊಳ್ಳಬಹುದು. ನಾನು ಇದಕ್ಕೆ ಸಮ್ಮತಿಸಿರಲಿಲ್ಲ. ಖರ್ಗೆಯವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ನಾನು ಎಲ್ಲರ ಮುಂದೆಯೇ ಹೇಳಿದ್ದೆ. ಸಿದ್ದರಾಮಯ್ಯನವರೂ ಅಲ್ಲಿದ್ದರು. ಆದರೆ, ಶ್ರೀ ಆಜಾದ್ ಅವರು ಕುಮಾರಸ್ವಾಮಿಯವರ ನಾಯಕತ್ವಕ್ಕೇ ಪಟ್ಟು ಹಿಡಿದರು. ಆದರೆ ಇಷ್ಟೆಲ್ಲಾ ಹಾಡು, ಕುಣಿತ ಹಾಗೂ ಮದುವೆಯ ನಂತರ 2019ರಲ್ಲಿ ಅವರು ಮಾಡಿದ್ದೇನು? ಅವರು ನಮ್ಮನ್ನು ಕೈಬಿಟ್ಟರು. ಎಷ್ಟು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು ಮತ್ತು ಅವರನ್ನು ಯಾರು ಅತ್ತ ಕಳುಹಿಸಿದರು ಎಂಬುದು ಈಗ ಜಗಜ್ಜಾಹೀರಾಗಿದೆ.

ಅಂದು ಪಕ್ಷಾಂತರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿದ್ದರು.ಹಾಗಾಗಿ, ಸ್ಪಷ್ಟಪಡಿಸುವುದೇನೆಂದರೆ, ನಾನು ಕಾಂಗ್ರೆಸ್ ಮೈತ್ರಿಯನ್ನು ತೊರೆದಿಲ್ಲ. ಅವರೇ ದೂರ ಸರಿದರು. ಅವರಿಗೆ "ವಿಚ್ಛೇದನ" ನೀಡಿ, ಹೆಚ್ಚು ಸ್ಥಿರವಾದ ಮೈತ್ರಿಯನ್ನು ಹುಡುಕುವುದನ್ನು ಬಿಟ್ಟು ಅವರು ನನಗೆ ಬೇರೆ ದಾರಿ ಉಳಿಸಲಿಲ್ಲ.

ಕಾಂಗ್ರೆಸ್‌ ಶಾಸಕರನ್ನು ಅತ್ತ (ಬಿಜೆಪಿಗೆ) ಕಳುಹಿಸಿದವರು ಯಾರು ಎಂಬ ಅವರ ಪ್ರಶ್ನೆ ರಾಜ್ಯದ ಪ್ರಮುಖ ನಾಯಕರೊಬ್ಬರ ಕುರಿತಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮತ್ತೆ ಮುನ್ನೆಲೆಗೆ ಬಂದ ಆಪರೇಷನ್ ಕಮಲದ ನೆನಪು

ದೇವೇಗೌಡರ ಈ ಬಹಿರಂಗ ಪತ್ರವು 2019ರ 'ಆಪರೇಷನ್ ಕಮಲ'ದ ಕಹಿ ನೆನಪುಗಳು ಮತ್ತು ಅಂದಿನ ರಾಜಕೀಯ ಪಕ್ಷಾಂತರದಿಂದ ಉಂಟಾದ ಉದ್ವಿಗ್ನತೆಯನ್ನು ಮರಳಿ ಮುನ್ನೆಲೆಗೆ ತಂದಿದೆ. ಹಿಂದಿನ ರಾಜಕೀಯ ದ್ರೋಹಗಳು ಮತ್ತು ಒಳಪೆಟ್ಟುಗಳು ಪ್ರಸ್ತುತ ಭಾರತದ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ ಮತ್ತು ವಿರೋಧ ಪಕ್ಷಗಳ ಸಮೀಕರಣಗಳನ್ನು ಹೇಗೆ ರೂಪಿಸುತ್ತಿವೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎಂಬುದಕ್ಕೆ ರಾಜ್ಯಸಭೆಯಲ್ಲಿ ನಡೆದ ಈ ನಾಯಕರ ನಡುವಿನ ವಾಕ್ಸಮರ ಮತ್ತು ರಾಜಕೀಯ ವರಸೆಗಳು ಜ್ವಲಂತ ನಿದರ್ಶನವಾಗಿವೆ.

Read More
Next Story