ಕೈ ಪಾಳಯದಲ್ಲಿ ತಾರಕಕ್ಕೇರಿದ ನಾಯಕತ್ವ ಬಿಕ್ಕಟ್ಟು: ಬಜೆಟ್ ಸಮಯದಲ್ಲೇ ಸಿಎಂ ಗಾದಿಗೆ ಡಿಕೆಶಿ ಪಟ್ಟು
x
ಸಿದ್ದರಾಮಯ್ಯ, ಡಿ.ಕೆ. ಸಹೋದರರು

ಕೈ ಪಾಳಯದಲ್ಲಿ ತಾರಕಕ್ಕೇರಿದ ನಾಯಕತ್ವ ಬಿಕ್ಕಟ್ಟು: ಬಜೆಟ್ ಸಮಯದಲ್ಲೇ ಸಿಎಂ ಗಾದಿಗೆ ಡಿಕೆಶಿ ಪಟ್ಟು

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕೆಲ ಯೋಜನೆಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. 40 ವರ್ಷಗಳಿಂದಲೂ ದೆಹಲಿಗೆ ಭೇಟಿ ನೀಡಿ ನೀಡುತ್ತಲೇ ಇದ್ದಾರೆ. ಅದಕ್ಕೆ ವಿಶೇಷ ಅರ್ಥ ಬೇಡ ಎಂದು ಡಿ.ಕೆ. ಸುರೇಶ್‌ ತಿಳಿಸಿದ್ದಾರೆ.


Click the Play button to hear this message in audio format

ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೀಮು ಆರಂಭಿಸಿರುವ ಸಮಯದಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ದೆಹಲಿಗೆ ತೆರಳಿರುವುದು ಹೈಕಮಾಂಡ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ʼಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂʼ ಎಂಬ ಹೇಳಿಕೆಗಳು ಸಿಎಂ ಬಣದಿಂದ ಪದೇ ಪದೇ ಕೇಳಿಬರುತ್ತಿರುವುದರಿಂದ ಬೇಸತ್ತ ಡಿ.ಕೆ.ಶಿವಕುಮಾರ್ ಅವರು ʼಅಧಿಕಾರ ಹಂಚಿಕೆ ಒಪ್ಪಂದʼ ಮುಂದಿಟ್ಟುಕೊಂಡು ಹೈಕಮಾಂಡ್ ನಾಯಕರ ಮನೆಯ ಕದ ತಟ್ಟಿರುವುದು ಪಕ್ಷದಲ್ಲಿ ಸಂಚಲನ ಮೂಡಿಸಿದೆ.

ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಿಂದ ತಾರಕಕ್ಕೇರಿದ ನಾಯಕತ್ವದ ಬದಲಾವಣೆಯ ಬಿಕ್ಕಟ್ಟಿಗೆ ಇತಿಶ್ರೀ ಹಾಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಹಕ್ಕೊತ್ತಾಯದ ಜತೆಗೆ ಬಲ ಪ್ರದರ್ಶನಕ್ಕೂ ಮುಂದಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ನಡೆದಿದೆ ಎನ್ನಲಾದ ‘ಅಧಿಕಾರ ಹಂಚಿಕೆ ಒಪ್ಪಂದ’ದಂತೆ ರಾಜಧರ್ಮ ಪಾಲಿಸಬೇಕೆಂದು ಡಿಕೆಶಿ ಅವರು ಹಲವು ಬಾರಿ ಪರೋಕ್ಷವಾಗಿ ಸಿಎಂಗೆ ಟಾಂಗ್‌ ನೀಡಿದ್ದರು. ಈ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಬಣಗಳ ಮಧ್ಯೆ ಮಾತಿನ ಸಮರವೂ ನಡೆದಿತ್ತು. ನಾಯಕರ ಕಚ್ಚಾಟದಿಂದ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಹೈಕಮಾಂಡ್‌ ಸಂಧಾನ ಸೂತ್ರ ಮುಂದಿಟ್ಟಿತ್ತು. ನಾಯಕತ್ವದ ಬದಲಾವಣೆ ವಿಚಾರವಾಗಿ ಯಾರೂ ಕೂಡ ಮಾತನಾಡದಂತೆ ಎಚ್ಚರಿಕೆ ನೀಡಿತ್ತು. ಇದರಿಂದ ಕೆಲ ದಿನಗಳವರೆಗೆ ತಣ್ಣಗಾಗಿದ್ದ ನಾಯಕತ್ವ ಬಿಕ್ಕಟ್ಟು ಈಗ ಯತೀಂದ್ರ ಸಿದ್ದರಾಮಯ್ಯ ಮೂಲಕ ಮತ್ತೆ ತಾರಕಕ್ಕೇರಿದೆ.

ಬಜೆಟ್‌ ಸಭೆ ರದ್ದು ಮಾಡಿ ದೆಹಲಿಗೆ ಡಿಕೆಶಿ ದೌಡು

ನಾಯಕತ್ವ ಬದಲಾವಣೆ ಕುರಿತು ಸಿಎಂ ಸಿದ್ದರಾಮಯ್ಯ ಅವರ ಪುತ್ರನ ಹೇಳಿಕೆಯಿಂದ ವಿವಾದ ಮತ್ತೆ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಇಲಾಖೆಗಳ ಬಜೆಟ್ ಸಭೆಗಳನ್ನು ರದ್ದುಗೊಳಿಸಿ ಹೈಕಮಾಂಡ್‌ ಭೇಟಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಮಾರ್ಮಿಕವಾಗಿ ಉತ್ತರಿಸಿದ್ದ ಡಿಕೆಶಿ, ʼಅವರೇ ಹೈಕಮಾಂಡ್ ಇರಬೇಕುʼ ಎಂದು ವ್ಯಂಗ್ಯವಾಡಿದ್ದರು.

ʼನಾನು ಕಾಂಗ್ರೆಸ್‌ ಪಕ್ಷದ ಸಾರಥಿ. ನನ್ನ ಹಿಂದೆ ಕೇವಲ 80-90 ಶಾಸಕರಲ್ಲ, 136 ಶಾಸಕರಿದ್ದಾರೆʼ ಎಂದು ಹೇಳಿ ತಿರುಗೇಟು ನೀಡಿದ್ದರು. ಈ ಮಧ್ಯೆ, ಡಿ.ಕೆ. ಶಿವಕುಮಾರ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು, ʼಸಿಎಂ ಬದಲಾವಣೆಗೆ ಒತ್ತಾಯಿಸಿ 90 ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದೇವೆʼ ಎಂದಿದ್ದರು.

ಸಂಚಲನ ಮೂಡಿಸಿದ ಡಿಕೆ ಸುರೇಶ್ ನಡೆ

ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅಚ್ಚರಿಯ ನಡೆಯ ಬೆನ್ನಲ್ಲೇ ಅವರ ಸೋದರ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಅವರ ʼಕೊಟ್ಟ ಮಾತಿನ ವರಸೆʼ ಕೈ ಪಾಳಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಬುಧವಾರ(ಫೆ.11) ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್‌, "ನನಗೆ ಈಗಲೂ ಭರವಸೆ ಇದೆ. ಸಿಎಂ ಸಿದ್ದರಾಮಯ್ಯ ಅವರು ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ" ಎಂದು ಹೇಳುವ ಮೂಲಕ ನೇರವಾಗಿ ಸಿಎಂ ಬಣಕ್ಕೆ ಸಂದೇಶ ರವಾನಿಸಿದ್ದಾರೆ.

ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಅವರು ಹೇಳಿದ ಮೇಲೆ ಅದೇ ವೇದವಾಕ್ಯ. ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಅವರು ಡಿಕೆಶಿ ಸಿಎಂ ಆಗುತ್ತಾರೆ ಎಂದು ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ತಾಳ್ಮೆಯೇ ನಿಮ್ಮ ದೌರ್ಬಲ್ಯವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್‌, ʼಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆʼ ಎಂದು ಹೇಳಿದ್ದಾರೆ.

ದೆಹಲಿ ಯಾತ್ರೆಗೆ ವಿಶೇಷ ಅರ್ಥ ಬೇಡ

ಕಾಂಗ್ರೆಸ್‌ ಶಾಸಕರ ಸಾಮೂಹಿಕ ವಿದೇಶ ಪ್ರವಾಸ ಹಾಗೂ ನಾಯಕತ್ವ ಬದಲಾವಣೆ ವಿಚಾರಗಳ ಪ್ರಸ್ತಾಪದಿಂದ ಅಸಮಾಧಾನಗೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಆದರೆ, ಡಿಕೆಶಿ ದೆಹಲಿ ಯಾತ್ರೆಗೆ ವಿಶೇಷ ಅರ್ಥ ಕಲ್ಪಿಸಬೇಡಿ ಎಂದು ಡಿಕೆಶಿ ಸೋದರ ಡಿ.ಕೆ.ಸುರೇಶ್‌ ಹೇಳಿದ್ದಾರೆ. ನೀರಾವರಿ ಯೋಜನೆಗಳ ಸಂಬಂಧ ಚರ್ಚಿಸಲು ಡಿ.ಕೆ. ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದಾರೆ. ಸುಮಾರು 40 ವರ್ಷಗಳಿಂದಲೂ ದೆಹಲಿಗೆ ಭೇಟಿ ನೀಡಿ ನೀಡುತ್ತಲೇ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಆಗಿರುವುದರಿಂದ ಹಲವು ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕಾಗಿರುತ್ತದೆ. ಈಗಿನ ದೆಹಲಿ ಯಾತ್ರೆಗೆ ಯಾವುದೇ ಹೊಸ ಅರ್ಥ ಕಲ್ಪಿಸಬಾರದು ಎಂದು ಮನವಿ ಮಾಡಿದ್ದಾರೆ.

ಚರ್ಚೆಗೆ ಕಾರಣವಾದ ಡಿಕೆಶಿ ಹೇಳಿಕೆ

ʼನನ್ನ ಹಾಗೂ ಸಿಎಂ ನಡುವೆ ಕದ್ದುಮುಚ್ಚಿ ಮಾತುಕತೆ ನಡೆದಿಲ್ಲ. ಹೈಕಮಾಂಡ್ ಮುಂದೆಯೇ ಎಲ್ಲಾ ಮಾತುಕತೆ ನಡೆದಿದೆʼ ಎಂಬ ಡಿಕೆಶಿ ಹೇಳಿಕೆಯೇ ದೆಹಲಿ ಭೇಟಿಗೆ ರಾಜಕೀಯ ಅರ್ಥ ಕಲ್ಪಿಸಿದೆ. ರಾಜ್ಯ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಅವಧಿಯಿಂದಲೂ ಡಿಕೆಶಿ ಹಾಗೂ ಡಿಕೆ ಸುರೇಶ್‌ ಅವರು ಅಧಿಕಾರ ಹಂಚಿಕೆಯ ಸೂತ್ರವನ್ನು ಪ್ರಸ್ತಾಪಿಸುತ್ತಲೇ ಇದ್ದರು. ಇದೀಗ ಡಿಕೆ ಸಹೋದರರಿಬ್ಬರೂ ಮತ್ತೆ ಅಧಿಕಾರ ಹಂಚಿಕೆ ಒಪ್ಪಂದದ ಉಲ್ಲೇಖಿಸಿದ್ದು, ಹೈಕಮಾಂಡ್‌ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ʼದೀರ್ಘಾವಧಿ ಸಿಎಂʼ ಹಾಗೂ ಬಜೆಟ್‌ ಮಂಡನೆವರೆಗೂ ತಟಸ್ಥ ಧೋರಣೆಗೆ ಅಂಟಿಕೊಂಡಿದ್ದ ಡಿ.ಕೆ. ಸಹೋದರರು ಇದೀಗ ಶಾಸಕರು ವಿದೇಶ ಪ್ರವಾಸಕ್ಕೆ ಅಣಿಯಾಗುತ್ತಿರುವ ಬೆನ್ನಲ್ಲೇ ನಾಯಕತ್ವ ಬದಲಾವಣೆಗೆ ಒತ್ತಡ ತಂತ್ರದ ಮೊರೆ ಹೋಗಿರುವುದು ಕಾಂಗ್ರೆಸ್‌ ಪಾಳಯದಲ್ಲಿ ಆಂತರಿಕ ವಿದ್ಯಮಾನಗಳಿಗೆ ಕಾರಣವಾಗಿದೆ.

Read More
Next Story