ಶಾಸಕರು ಉಚಿತ ಐಪಿಎಲ್ ಟಿಕೆಟ್ ಕೇಳುವುದು ತಪ್ಪ; ಡಿ.ಕೆ. ಸುರೇಶ್ ಒಲವು
x

ಬಮೂಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌ 

ಶಾಸಕರು ಉಚಿತ ಐಪಿಎಲ್ ಟಿಕೆಟ್ ಕೇಳುವುದು ತಪ್ಪ; ಡಿ.ಕೆ. ಸುರೇಶ್ ಒಲವು

ಬೆಂಗಳೂರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.


Click the Play button to hear this message in audio format

ಜನಪ್ರತಿನಿಧಿಗಳು ಐಪಿಎಲ್ ಪಂದ್ಯಾವಳಿಯ ವೀಕ್ಷಣೆಗೆ ಉಚಿತ ಟಿಕೆಟ್ ಕೇಳುವುದು ತಪ್ಪು ನಿರ್ಧಾರವಾಗಿದ್ದು, ಆಸಕ್ತಿ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಪಂದ್ಯ ವೀಕ್ಷಿಸುವುದು ಉತ್ತಮ ಬೆಳವಣಿಗೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿಯಲ್ಲ, ಬದಲಾಗಿ ಅದೊಂದು ವಾಣಿಜ್ಯ ಉದ್ದೇಶದ ಕ್ರೀಡಾಕೂಟವಾಗಿದೆ. ಹೀಗಾಗಿ ಇದರ ಬಗ್ಗೆ ಶಾಸಕರು ಹೆಚ್ಚು ಗಮನಹರಿಸುವುದು ಹಾಗೂ ಉಚಿತ ಟಿಕೆಟ್‌ಗೆ ಬೇಡಿಕೆ ಇಡುವುದು ಅಪರಾಧ. ಐಪಿಎಲ್ ದುರ್ಘಟನೆ ಸಂದರ್ಭದಲ್ಲಿ ಇದೇ ನಾಯಕರು ಯಾವ ರೀತಿ ವಾಗ್ದಾಳಿ ನಡೆಸಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕ್ರೀಡಾಂಗಣ ನಿರ್ಮಾಣ

ಬೆಂಗಳೂರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಪ್ರಸ್ತುತ ಕಂಠೀರವ, ಚಿನ್ನಸ್ವಾಮಿ ಹಾಗೂ ಫುಟ್ಬಾಲ್ ಕ್ರೀಡಾಂಗಣಗಳನ್ನು ಹೊರತುಪಡಿಸಿ ಬೇರೆ ಆಯ್ಕೆಗಳಿಲ್ಲ. ತಾವು ಲೋಕಸಭಾ ಸದಸ್ಯರಾಗಿದ್ದಾಗಲೇ ಸೂರ್ಯ ಸಿಟಿಯಲ್ಲಿ ನೂರು ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಐವತ್ತರಿಂದ ಅರವತ್ತು ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಜೊತೆಗೆ ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲಿ ನಲವತ್ತು ಎಕರೆ ಜಾಗ ಮೀಸಲಿಡಲು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಬಿಡದಿಯಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ದ್ವಿಭಾಷಾ ನೀತಿಯಿಂದ ಮಕ್ಕಳ ಕಲಿಕೆಗೆ ಅನುಕೂಲ

ರಾಜ್ಯ ಸರ್ಕಾರದ ದ್ವಿಭಾಷಾ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡ ಡಿ.ಕೆ. ಸುರೇಶ್, ಮಕ್ಕಳ ಮೇಲೆ ಮೂರು ಭಾಷೆಗಳ ಕಲಿಕೆಯ ಒತ್ತಡ ಹೇರುವುದರಿಂದ ಅವರ ಗ್ರಹಿಕಾ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದರು. ಶಿಕ್ಷಣ ಇಲಾಖೆಯು ಕನ್ನಡವನ್ನು ಪ್ರಧಾನ ಭಾಷೆಯಾಗಿಟ್ಟುಕೊಂಡು ಮತ್ತೊಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲಕರವಾಗಿದೆ. ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಇದೊಂದು ಉತ್ತಮ ನಿರ್ಧಾರವಾಗಿದೆ. ಆದರೆ, ಕೇಂದ್ರ ನಾಯಕರನ್ನು ಮೆಚ್ಚಿಸಲು ಮತ್ತು ಹಿಂದಿ ಭಾಷೆಯ ಪರವಾಗಿ ನಿಲ್ಲುವ ಉದ್ದೇಶದಿಂದ ಬಿಜೆಪಿ ನಾಯಕರು ಕೇವಲ ವಿರೋಧಕ್ಕಾಗಿಯೇ ಈ ನೀತಿಯನ್ನು ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಪೆಟ್ರೋಲಿಯಂ ಮತ್ತು ರಸಗೊಬ್ಬರ ಅಭಾವದ ಆತಂಕ

ಮುಂಬರುವ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ರಸಗೊಬ್ಬರದ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಮತ್ತಷ್ಟು ಹೈರಾಣಾಗಿಸಲಿದೆ ಎಂದು ಎಚ್ಚರಿಕೆ ನೀಡಿದರು. ಆಮದು ಮಾಡಿಕೊಳ್ಳುವ ವಸ್ತುಗಳ ಕೊರತೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಲಿದ್ದು, ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲಾಗಲಿದೆ. ಮುಂಗಾರು ಆರಂಭವಾದರೆ ಕೃಷಿ ಚಟುವಟಿಕೆಗಳು ಗರಿಗೆದರಲಿದ್ದು, ರೈತರಿಗೆ ರಸಗೊಬ್ಬರದ ಕೊರತೆ ಎದುರಾಗದಂತೆ ಸರ್ಕಾರ ಈಗಲೇ ಅಗತ್ಯ ದಾಸ್ತಾನು ಕಾಯ್ದುಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾಲು ಒಕ್ಕೂಟಗಳಲ್ಲಿ ಇಂಧನ ವೆಚ್ಚ ಕಡಿತಕ್ಕೆ ಕ್ರಮ

ಬೆಲೆ ಏರಿಕೆಯ ಬಿಸಿ ಹಾಲು ಒಕ್ಕೂಟಗಳಿಗೂ ತಟ್ಟಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅನಿಲ ಬಳಕೆಯ ಪ್ರಮಾಣವನ್ನು ಶೇಕಡಾ ಐವತ್ತೈದರ ಒಳಗೆ ಇಳಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. ನೂರರಷ್ಟು ಅನಿಲ ಬಳಸಿದರೆ ವೆಚ್ಚ ಗಣನೀಯವಾಗಿ ಹೆಚ್ಚಾಗಲಿದ್ದು, ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಬಾಯ್ಲರ್‌ಗಳಿಗೆ ಪರ್ಯಾಯವಾಗಿ ಸೌದೆ ಒಲೆ ಅಥವಾ ಫರ್ನೆಸ್ ಆಯಿಲ್ ಬಳಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಮಾಲಿನ್ಯದ ಸಮಸ್ಯೆಯಿಂದಾಗಿ ಬೆಂಗಳೂರಿನ ಘಟಕಗಳಲ್ಲಿ ಸೌದೆ ಒಲೆ ಬಳಕೆ ಸಾಧ್ಯವಿಲ್ಲ. ಗ್ರಾಮೀಣ ಭಾಗದ ಘಟಕಗಳಲ್ಲಿ ಹಂತ ಹಂತವಾಗಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳು ಬಡವರ ಜೀವನ ಮಟ್ಟವನ್ನು ಗಣನೀಯವಾಗಿ ಸುಧಾರಿಸಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳು ಅಭಿವೃದ್ಧಿ ಕುಂಠಿತವಾಗಿದೆ ಎಂದು ಎಷ್ಟೇ ಟೀಕಿಸಿದರೂ, ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದೇ ವೇಳೆ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಹಿರಿಯ ನಾಯಕರ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಸಚಿವ ಜಮೀರ್ ಅಹ್ಮದ್ ಅವರು ಯಾವುದೇ ಮುನಿಸು ಹೊಂದಿಲ್ಲ, ಅವರು ನೆರೆಯ ಕೇರಳದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

Read More
Next Story