
ನನ್ನ ಹೆಸರಲ್ಲಿ ದೆಹಲಿ ಯಾತ್ರೆ ಬೇಡ: ಆಪ್ತರಿಗೆ ಡಿಕೆಶಿ ಎಚ್ಚರಿಕೆ
ನಾಯಕತ್ವ ಬದಲಾವಣೆ ಚರ್ಚೆಯ ನಡುವೆ, ತಮ್ಮ ಪರವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರದಂತೆ ಆಪ್ತರಿಗೆ ಎಚ್ಚರಿಕೆ ನೀಡಿರುವ ಡಿ.ಕೆ. ಶಿವಕುಮಾರ್, ಹೊಸಬರಿಗೆ ಸಚಿವ ಸ್ಥಾನ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಗುಪ್ತ ಸಭೆಗಳು ಮತ್ತು ಶಕ್ತಿ ಪ್ರದರ್ಶನದ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ತಮ್ಮ ಬೆಂಬಲಿಗರು ಮಾಡುತ್ತಿರುವ 'ಡಿಕೆಶಿ ಸಿಎಂ' ಅಭಿಯಾನವು ತಮಗೇ ತಿರುಗುಬಾಣವಾಗಬಹುದು ಎಂಬ ಆತಂಕದಿಂದ ಅಥವಾ ಪಕ್ಷದ ಶಿಸ್ತು ಕಾಪಾಡುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಮನವಿ ರೂಪದ ಸಂದೇಶ ರವಾನಿಸಿದ್ದಾರೆ. "ನನ್ನ ಹೆಸರಿನಲ್ಲಿ ದೆಹಲಿ ಯಾತ್ರೆ ನಡೆಸಬೇಡಿ. ನಿಮಗೆ ಬೇಕಿದ್ದರೆ ಸಚಿವ ಸ್ಥಾನದ ಬೇಡಿಕೆಗಾಗಿ ದೆಹಲಿಗೆ ಹೋಗಿ," ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತ ವಲಯದ ಶಾಸಕರು ನೀಡುತ್ತಿರುವ ಪ್ರತಿ ಹೇಳಿಕೆಗಳು ಅವರಿಗೇ "ಮಗ್ಗುಲ ಮುಳ್ಳಾಗಿ" ಪರಿಣಮಿಸುತ್ತಿವೆ ಎಂಬುದರ ಬಗ್ಗೆ "ದ ಫೆಡರಲ್ ಕರ್ನಾಟಕ" ಫೆ. 24ರಂದು ವಿಶೇಷ ವರದಿ ಪ್ರಕಟಿಸಿತ್ತು.
ಇದೀಗ ಡಿ.ಕೆ. ಶಿವಕುಮಾರ್ ಅವರು ಕೂಡ ತಮ್ಮ ಆಪ್ತ ಶಾಸಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡುವ ಮೂಲಕ, "ನೀವು ಸುಮ್ಮನಿದ್ದರೆ ಸಾಕು" ಎಂದಿದ್ದಾರೆ. ಇನ್ನೆರಡು ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಬಾಲಿಶ ಹೇಳಿಕೆ ನೀಡಿದ್ದ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಡಿಸಿಎಂ ಈ ಹಿಂದೆಯೇ ಗರಂ ಆಗಿದ್ದರು. "ನಿಮ್ಮ ಹೇಳಿಕೆಗಳೇ ನಮಗೆ ಕಷ್ಟವಾಗುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರೂ, ಇಕ್ಬಾಲ್ ಹುಸೇನ್ ಮಾತ್ರ ಇಂತಹ ಹೇಳಿಕೆಗಳಿಂದ ದೂರ ಸರಿದಿರಲಿಲ್ಲ.
ಪಕ್ಷದ ಶಿಸ್ತು ಮೀರಿದ್ದಕ್ಕಾಗಿ ಈಗಾಗಲೇ ಇಕ್ಬಾಲ್ ಹುಸೇನ್ ಹಾಗೂ ಶಿವಗಂಗಾ ಬಸವರಾಜ್ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಮದ್ದೂರು ಶಾಸಕ ಕದಲೂರು ಉದಯ್, ಮಂಡ್ಯ ಶಾಸಕ ಗಣಿಗ ರವಿ ಸೇರಿದಂತೆ ಇತರರು ಸಾರ್ವಜನಿಕವಾಗಿ ನಾಯಕತ್ವ ಬದಲಾವಣೆ ಕುರಿತು ನೀಡುತ್ತಿರುವ ಹೇಳಿಕೆಗಳು ಹಾಗೂ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ನೆಪದಲ್ಲಿ ತಡರಾತ್ರಿ ನಡೆದ 'ಡಿನ್ನರ್ ಪಾಲಿಟಿಕ್ಸ್'ಗಳು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿವೆ ಎನ್ನಬಹುದು.
ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದ ಹೇಳಿಕೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಹೈಕಮಾಂಡ್ ನಡುವೆ ಮುಜುಗರ ಉಂಟುಮಾಡಿದ್ದರಿಂದ, ಅವರು ತಮ್ಮ ಬೆಂಬಲಿಗರಿಗೆ "ಬಾಯಿ ಮುಚ್ಚಿಕೊಂಡಿರಿ" ಎಂದು ಗದರಿದ್ದಾರೆ. ತಮ್ಮ ಆಪ್ತರ ಅತಿಯಾದ ಉತ್ಸಾಹವೇ ತಮಗೆ ಮುಳುವಾಗಬಹುದು ಎಂಬ ಆತಂಕ ಡಿ.ಕೆ. ಶಿವಕುಮಾರ್ ಅವರನ್ನು ಈ ಬಾರಿ ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಡಿಕೆಶಿ ಹೇಳಿದ್ದೆನು?
ಗುರುವಾರ ನಡೆದ ಸಚಿವರು ಮತ್ತು ಶಾಸಕರ ಸಭೆಯಲ್ಲಿ, ಡಿ.ಕೆ. ಶಿವಕುಮಾರ್ ಅವರ ಪರವಾಗಿ ಹೈಕಮಾಂಡ್ ಬಳಿ ಮನವಿ ಮಾಡಲು ದೆಹಲಿಗೆ ಹೋಗುವ ನಿರ್ಧಾರ ಮಾಡಲಾಗಿತ್ತು ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, "ದಯವಿಟ್ಟು ಯಾರೂ ನನ್ನ ಪರವಾಗಿ ದೆಹಲಿಗೆ ಹೋಗಬೇಡಿ. ನಿಮಗೆ ಸಚಿವ ಸ್ಥಾನ ಬೇಕಿದ್ದರೆ ಅಥವಾ ವೈಯಕ್ತಿಕ ಸಮಸ್ಯೆಗಳಿದ್ದರೆ ದೆಹಲಿಗೆ ಹೋಗಿ ಮನವಿ ಮಾಡಿ. ಆದರೆ ನನ್ನ ವಿಚಾರಕ್ಕೆ ಹೋಗುವುದು ಬೇಡ," ಎಂದು ಮನವಿ ರೂಪದ ಎಚ್ಚರಿಕೆ ನೀಡಿದ್ದಾರೆ.
ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಜನ್ಮದಿನದ ನೆಪದಲ್ಲಿ 40ಕ್ಕೂ ಹೆಚ್ಚು ಶಾಸಕರು ಸೇರಿದ್ದನ್ನು ಶಕ್ತಿ ಪ್ರದರ್ಶನ ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಇದನ್ನು ಅಲ್ಲಗಳೆದ ಡಿಸಿಎಂ, "ಇದರಲ್ಲಿ ಯಾವುದೇ ಶಕ್ತಿ ಪ್ರದರ್ಶನವಿಲ್ಲ. ಶಾಸಕರು ವಿಶ್ರಾಂತಿಗಾಗಿ ವಿದೇಶಕ್ಕೆ ಹೋಗುವುದು ಅಥವಾ ಭೋಜನ ಕೂಟ ಸೇರುವುದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ," ಎಂದಿದ್ದಾರೆ.
ಹೊಸಬರಿಗೆ ಅವಕಾಶ ನೀಡುವ ಇಂಗಿತ
ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆಯೇ ಡಿಕೆಶಿ ಅವರು 'ಹಳೆಯ ತಲೆಮಾರು' ಮತ್ತು 'ಹೊಸ ತಲೆಮಾರಿನ' ವಿಚಾರ ಪ್ರಸ್ತಾಪಿಸಿರುವುದು ಕುತೂಹಲ ಮೂಡಿಸಿದೆ. "ನಾನು, ಸಿದ್ದರಾಮಯ್ಯ, ಪರಮೇಶ್ವರ್, ಹೆಚ್.ಕೆ. ಪಾಟೀಲ್ ನಾವೆಲ್ಲಾ ಹಳಬರಾಗಿದ್ದೇವೆ. ನಮಗೆ ಚಿಕ್ಕ ವಯಸ್ಸಿನಲ್ಲೇ ಸಚಿವ ಸ್ಥಾನ ಸಿಕ್ಕಿತ್ತು. ಈಗ ಹೊಸಬರಿಗೆ ಆ ಆಸೆ ಇರುವುದು ಸಹಜ. ಈ ವಿಷಯವನ್ನು ನಾನು ಹೈಕಮಾಂಡ್ ಗಮನಕ್ಕೆ ತರುತ್ತೇನೆ," ಎಂದು ಹೇಳುವ ಮೂಲಕ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ.
ಕೊನೆಗೂ ಸಿಕ್ಕ ನ್ಯಾಯ
ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿ ಡಿಕೆಶಿ, "ಯಾವುದೇ ವ್ಯಕ್ತಿಗೆ ಕಿರುಕುಳ ನೀಡಬೇಕು ಎಂದರೆ ಅದಕ್ಕೆ ಒಂದು ಮಿತಿ ಇದೆ. ರಾಜಕೀಯ ಉದ್ದೇಶದಿಂದ ಮುಕ್ತಾಯಗೊಂಡಿದ್ದ ಪ್ರಕಾರಣವನ್ನು ಯಡಿಯೂರಪ್ಪ ಅವರ ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿ, ತೊಂದರೆ ನೀಡಲಾಗುತ್ತಿತ್ತು. ಅವರಿಗೆ ಅವರ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಲಾಗಿತ್ತು. ಚುನಾವಣೆಯಲ್ಲಿ ಅವರು ಮತ ಕೇಳುವಂತಿಲ್ಲ ಎಂಬ ಆದೇಶವನ್ನು ಮೊದಲ ಬಾರಿಗೆ ನೀಡಲಾಗಿತ್ತು. ನಾವು ನ್ಯಾಯಾಲಯಕ್ಕೆ ತಲೆಬಾಗಿ ಗೌರವ ನೀಡಿದೆವು. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಜಾಮೀನು ನೀಡಿದೆ. ನಾನು ಪ್ರಕರಣದ ವಿಚಾರಣೆ ಗಮನಿಸುತ್ತಾ ಬಂದಿದ್ದೇನೆ. ಈಗ ಅವರಿಗೆ ನ್ಯಾಯ ಸಿಕ್ಕಿದೆ, ಅವರು, ಅವರ ಕುಟುಂಬ, ಕ್ಷೇತ್ರದ ಜನ ಹಾಗೂ ಅವರು ಅನುಭವಿಸಿದ ವೇದನೆ ಯಾರೂ ಮರೆಯಲು ಸಾಧ್ಯವಿಲ್ಲ. ಇದನ್ನು ನಾನೂ ಅನುಭವಿಸಿದ್ದೇನೆ. ದೇವರು ವಿನಯ್ ಕುಲಕರ್ಣಿ ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಿ, ನ್ಯಾಯ ಒದಗಿಸಿರುವ ನ್ಯಾಯಾಲಯಕ್ಕೆ ಗೌರವದಿಂದ ಅಭಿನಂದನೆ ಅರ್ಪಿಸುತ್ತೇವೆ" ಎಂದು ತಿಳಿಸಿದರು.
ಹಂತ ಹಂತವಾಗಿ ಹುದ್ದೆ ಭರ್ತಿ
"ನಾವು ಹೊಸ ಮೀಸಲಾತಿ ಮಾಡಿದ್ದರೂ 2022ರ ನ್ಯಾಯಾಲಯ ಆದೇಶ ಅನುಸಾರ ಹಳೆ ಮೀಸಲಾತಿ ಮೇಲೆ ಮೊದಲ ಹಂತದಲ್ಲಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನ ಮಾಡಲಾಗಿದೆ. ಉದ್ಯೋಗ ನೇಮಕಾತಿ ಮಾಡುವುದಾಗಿ ನಾವು ಯುವಕರಿಗೆ ಮಾತು ನೀಡಿದ್ದು, ನಾವು ಅದರಂತೆ ನೇಮಕಾತಿ ಮಾಡುತ್ತೇವೆ. 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಎಲ್ಲವನ್ನು ಏಕ ಕಾಲಕ್ಕೆ ಮಾಡಿದರೆ ಕೆಲವರಿಗೆ ಅವಕಾಶ ಸಿಗುವುದಿಲ್ಲ ಎಂದು ಹಂತ ಹಂತವಾಗಿ ಮಾಡಲಾಗುವುದು. ನ್ಯಾಯಾಲಯಕ್ಕೆ ತಲೆಬಾಗಿ ಕಾನೂನಿನಲ್ಲಿ ಇರುವ ಅವಕಾಶವನ್ನು ಬಳಸಿಕೊಂಡು ನೇಮಕಾತಿ ಮಾಡುತ್ತೇವೆ. 2.84 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
ಕಾವೇರಿ ಆರನೇ ಹಂತಕ್ಕೆ ಒಪ್ಪಿಗೆ
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, "ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಧಾರ. ಭವಿಷ್ಯದಲ್ಲಿ ಬೆಂಗಳೂರು ಬೆಳೆಯುವುದನ್ನು ಗಮನದಲ್ಲಿಟ್ಟುಕೊಂಡು 7 ಸಾವಿರ ಕೋಟಿ ರೂ., ವೆಚ್ಚದಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಜೈಕಾ ಸಂಸ್ಥೆ ನೆರವು ಪಡೆಯಲಾಗುತ್ತಿದೆ. ನಾನು ಸಚಿವನಾದ ಬಳಿಕ ಕಾವೇರಿಯ 6 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಅನುಮೋದನೆ ನೀಡಿದ್ದೆ" ಎಂದು ತಿಳಿಸಿದರು.

