
ದೆಹಲಿಯಲ್ಲಿರುವ ರಾಜ್ಯ ಕಾಂಗ್ರೆಸ್ ಶಾಸಕರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
"ಪಕ್ಷದ ಶಿಸ್ತು ಮೀರಿದರೆ ಕ್ರಮ ಅನಿವಾರ್ಯ": ದೆಹಲಿಯಲ್ಲಿರುವ ಶಾಸಕರಿಗೆ ಡಿಕೆಶಿ ಎಚ್ಚರಿಕೆ
ಪಕ್ಷದ ಚೌಕಟ್ಟಿನ ಒಳಗೆ ಎಲ್ಲರೂ ಮಾತನಾಡಬೇಕು. ಶಿಸ್ತು ಉಲ್ಲಂಘಿಸಿ ದೆಹಲಿಗೆ ಹೋಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರುವುದು ಸರಿಯಲ್ಲ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ (ಏ.13) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಇದು ಅದಕ್ಕೆ ಸೂಕ್ತ ಸಮಯವಲ್ಲ. ನಾನು ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ, ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ನೆನಪಿರಲಿ, ಮಾಧ್ಯಮಗಳು ನಿಮ್ಮ ಭವಿಷ್ಯವಲ್ಲ, ಪಕ್ಷವೇ ನಿಮ್ಮ ಭವಿಷ್ಯ. ಎಲ್ಲರ ಭವಿಷ್ಯ ಪಕ್ಷದಲ್ಲೇ ಅಡಗಿದೆ" ಎಂದರು.
''ಪಕ್ಷದ ಚೌಕಟ್ಟಿನ ಒಳಗೆ ಎಲ್ಲರೂ ಮಾತನಾಡಬೇಕು. ಶಿಸ್ತು ಉಲ್ಲಂಘಿಸಿ ದೆಹಲಿಗೆ ಹೋಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರುವುದು ಸರಿಯಲ್ಲ. ಯಾರು ಶಿಸ್ತು ಮೀರಿದರೂ ಅವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ. ಈಗ ಸಂಪುಟ ಪುನರ್ ರಚನೆ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಯಾರೂ ಮಂತ್ರಿಗಳಾಗಬಾರದು ಎಂದಿಲ್ಲ, ಆದರೆ ಸದ್ಯದ ನಮ್ಮ ಗುರಿ ಪಂಚ ರಾಜ್ಯಗಳ ಹಾಗೂ ರಾಜ್ಯಸಭಾ ಚುನಾವಣೆ. ಮೊದಲು ಸಂಘಟಿತರಾಗಿ ಚುನಾವಣೆ ಎದುರಿಸೋಣ, ನಂತರ ಈ ಕುರಿತು ಚರ್ಚೆ ನಡೆಸೋಣ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮೌನ
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವುದೇ ನೇರ ಸ್ಪಷ್ಟನೆ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಶಾಸಕರ ದೆಹಲಿ ಯಾತ್ರೆ ಬಗ್ಗೆ ಏನೂ ಹೇಳಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆ ನಡೆಸೋಣ ಎಂದಷ್ಟೇ ತಿಳಿಸಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯಲ್ಲಿರುವ ಶಾಸಕರು ಯಾರು?
ಸಚಿವ ಸಂಪುಟ ಪುನರ್ ರಚನೆ ಮಾಡಿ ಹಿರಿಯ ಶಾಸಕರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ 30 ಶಾಸಕರು ಭಾನುವಾರ(ಏ.12) ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಎಸ್.ಎನ್.ಸುಬ್ಬಾರೆಡ್ಡಿ (ಬಾಗೆಪಲ್ಲಿ), ಪುಟ್ಟರಂಗಶೆಟ್ಟಿ (ಚಾಮರಾಜನಗರ), ಹಂಪನಗೌಡ ಬಾದರ್ಲಿ (ಸಿಂಧನೂರು),ಡಿ.ಜಿ. ಶಾಂತನಗೌಡ (ಹೊನ್ನಾಳಿ), ಜೆ.ಟಿ.ಪಾಟೀಲ್ (ಬೀಳಗಿ),ಬಸವರಾಜ್ ಶಿವಣ್ಣ (ಬ್ಯಾಡಗಿ), ಎ.ಆರ್. ಕೃಷ್ಣ ಮೂರ್ತಿ (ಕೊಳ್ಳೆಗಾಲ), ಪ್ರಸಾದ್ ಅಬ್ಬಯ್ಯ (ಹು-ಧಾ ಪೂರ್ವ), ಯು.ಬಿ. ಬಣಕಾರ್ (ಹಿರೆಕೆರೂರು), ಜಿ.ಎಸ್. ಪಾಟೀಲ್ (ರೋಣ), ಯಶವಂತರಾಯ ಗೌಡ ಪಾಟೀಲ್ (ಇಂಡಿ), ಷಡಕ್ಷರಿ (ತಿಪಟೂರು), ಟಿ.ಬಿ. ಜಯಚಂದ್ರ (ಶಿರಾ), ಅಶೋಕ್ ಪಟ್ಟಣ (ರಾಮದುರ್ಗ), ಎಸ್.ಎನ್. ನಾರಾಯಣ್ ಸ್ವಾಮಿ (ಬಂಗಾರಪೇಟೆ), ಲಕ್ಷ್ಮಣ ಸವದಿ (ಅಥಣಿ), ಅಪ್ಪಾಜಿ ನಾಡಗೌಡ (ಮುದ್ದೆ ಬಿಹಾಳ), ರಿಜ್ವಾನ್ ಅರ್ಷದ್ (ಶಿವಾಜಿನಗರ), ಪ್ರಿಯಾಕೃಷ್ಣ (ಗೋವಿಂದರಾಜನಗರ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ವಿ. ಶಿವಣ್ಣ (ಆನೇಕಲ್), ನರೇಂದ್ರ ಸ್ವಾಮಿ (ಮಳವಳ್ಳಿ), ವಿನಯ್ ಕುಲಕರ್ಣಿ (ಧಾರವಾಡ), ರಾಘವೇಂದ್ರ ಇಟ್ನಾಳ್ (ಕೊಪ್ಪಳ) ಸೇರಿದಂತೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

